ಎಚ್.ಡಿ.ಕೋಟೆ: ವಿದ್ಯುತ್ ಬಾಕಿ ಪಾವತಿಸದ ಹಿನ್ನೆಲೆ ತಾಲೂಕು ಕೇಂದ್ರ ಸ್ಥಾನದ ಮಿನಿ ವಿಧಾನಸೌಧದ ಹಲವು ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಕುಡಿಯುವ ನೀರು ಸೇರಿದಂತೆ ಹಲವು ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯ ಸ್ಥಗಿತಗೊಂಡಿವೆ. ಮಿನಿ ವಿಧಾನಸೌಧದ 3ನೇ ಮಹಡಿ ಯಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ಅಕ್ಷರ ದಾಸೋಹ, ಅಲ್ಪ ಸಂಖ್ಯಾತರ ತರಬೇತಿ ಕೇಂದ್ರ ಸೇರಿದಂತೆ ಇನ್ನು ಹಲವಾರು ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡು 4ದಿನ ಕಳೆದರೂ ಇನ್ನೂ ವಿದ್ಯುತ್ ಸಂಪರ್ಕ ಪಡೆದುಕೊಂಡಿಲ್ಲ.
ದಿನ ಕಳೆದು ನಿರ್ಗಮನ: ಇದರಿಂದ ಗ್ರಾಮೀಣ ಭಾಗದಿಂದ ವಿವಿಧ ಕೆಲಸಗಳಿಗೆ ಮಿನಿ ವಿಧಾನಸೌಧಕ್ಕೆ ಆಗಮಿಸುವ ನೂರಾರು ಮಂದಿ ಕೆಲಸ ಕಾರ್ಯಗಳಾಗದೆ ಪರದಾಡುವಂತಾಗಿದೆ. ಗಣಕ ಯಂತ್ರ ವಿದ್ಯುತ್ ಸಂಪರ್ಕ ಇಲ್ಲದೆ ನಿದ್ದೆ ಜಾರಿವೆ. ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾದರೂ ವಿದ್ಯುತ್ ಕಡಿತಗೊಂಡಿರುವುದರಿಂದ ಹಾಜರಾತಿ ದಾಖಲಿಸಿ ಕಚೇರಿಯಲ್ಲೇ ದಿನ ಕಳೆದು ನಿರ್ಗಮಿಸುತ್ತಿದ್ದಾರೆ.
ಎಚ್ಚರಿಕೆ ನೀಡಿದರೂ ಕ್ರಮವಿಲ್ಲ: ಇಡೀ ಮಿನಿ ವಿಧಾನಸೌಧದ ಕಚೇರಿಗೆ ತಹಶೀಲ್ದಾರ್ ಹೆಸರಿ ನಲ್ಲಿ ವಿದ್ಯುತ್ ಸಂಪರ್ಕದ ಮೀಟರ್ ಅಳವಡಿಸಿ ತಹಶೀಲ್ದಾರ್ ಕಡೆಯಿಂದಲೇ ಹಣ ಇಲ್ಲಿಯ ತನಕ ಪಾವತಿಸಿಕೊಳ್ಳಲಾಗುತ್ತಿತ್ತು. ಹಳೆಯ ಬಾಕಿ 20 ಸಾವಿರ ಮತ್ತು ಈಗಿನ ಬಿಲ್ 24ಸಾವಿರ ಸೇರಿ ಒಟ್ಟು 44ಸಾವಿರ ಪಾವ ತಿಸಬೇಕಿತ್ತು. ತಹಶೀಲ್ದಾರ್ ಇಡೀ ಮಿನಿ ವಿಧಾನಸೌಧದ ಬಿಲ್ ಪಾವತಿಸುವುದಿಲ್ಲ ಎನ್ನು ತ್ತಿದ್ದಂತೆಯೇ ಚೆಸ್ಕಾಂ ಬಾಕಿ 44ಸಾವಿರ ಪಾವತಿ ಸುವ ತನಕ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದರೂ ಪಾವತಿಸದ ಕಾರಣ ಕರೆಂಟ್ ಕಟ್ ಮಾಡಿದ್ದಾರೆ.
ಇದನ್ನೂ ಓದಿ;- ಟಿಎಪಿಸಿಎಂಎಸ್‌ನಿಂದ ಕಲ್ಯಾಣಮಂಟಪ ನಿರ್ಮಾಣ
3 ಮೀಟರ್‌ಗಳ ಪೈಕಿ ತಹಶೀಲ್ದಾರ್ ಕಚೇರಿಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಇನ್ನುಳಿದಂತೆ ಹಣ ಪಾವತಿಸುವ ತನಕ ವಿದ್ಯುತ್ ಮರು ಸಂಪರ್ಕ ಕಲ್ಪಿಸುವುದಿಲ್ಲವೆಂದು ಚೆಸ್ಕಾಂ ಪಟ್ಟು ಹಿಡಿದಿದೆ. ನಮ್ಮ ನಮ್ಮ ಕಚೇರಿಗಳ ವಿದ್ಯುತ್ ಬಿಲ್ ನಾವೇ ಪಾವತಿಸಿಕೊಳ್ಳುತ್ತೇವೆ ಪ್ರತ್ಯೇಕವಾಗಿ ನಮಗೆ ಮೀಟರ್ ಅಳವಡಿಸಿಕೊಡಿ ಎಂದು ಸಂಪರ್ಕ ಕಡಿಗೊಂಡಿರುವ ಇಲಾಖೆ ಅಧಿಕಾರಿಗಳು ಕೇಳುತ್ತಿದ್ದರೂ ತಹಶೀಲ್ದಾರ್ ಹೆಸರು ಹೊರತು ಪಡಿಸಿ ಇತರರ ಹೆಸರಿನಲ್ಲಿ ಮಿನಿವಿಧಾನ ಸೌಧಕ್ಕೆ ಮೀಟರ್ ಅಳವಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ.
ವಿಫಲ: ವಿದ್ಯುತ್ ಕಡಿತಗೊಂಡಿರುವುದರಿಂದ ಕುಡಿಯುವ ನೀರಿಗೂ ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನು ಶೌಚಾಲಯಗಳಿಗೂ ನೀರಿನ ಸಮಸ್ಯೆ ಕಾಡುತ್ತಿದ್ದು, ಬಹುತೇಕ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡು 4ದಿನ ಉರುಳಿದರೂ ತಹಶೀಲ್ದಾರ್ ಅಥವಾ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಸಮಸ್ಯೆ ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ ಮಿನಿವಿಧಾನ ಸೌಧದ 3ನೇ ಮಹಡಿ ಇಡೀ ಕಚೇರಿಗಳು ಕಗ್ಗತ್ತಲ್ಲಿ ಮುಳುಗಿದ್ದು, ಮರು ಚಾಲನೆಗೆ ಮುಂದೇನು ಮಾಡುವರೋ ಕಾದು ನೋಡಬೇಕಿದೆ.
ತನಗೆ ಸಂಬಂಧವಿಲ್ಲ
ಮಿನಿ ವಿಧಾನಸೌಧದ ಎರಡು ಮತ್ತು ಮೂರನೇ ಮಹಡಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಬಾಕಿ ಹಣ ಉಳಿಸಿಕೊಂಡಿಕೊಂಡಿರುವ ಹಿನ್ನೆಲೆಯಲ್ಲಿ ಚೆಸ್ಕ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೇ ಹೆಚ್ಚಿನ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ನರಗುಂದ ತಿಳಿಸಿದ್ದಾರೆ.
ತಹಶೀಲ್ದಾರ್ ಯಾವ ಕ್ರಮ ತೆಗೆದುಕೊಳ್ಳುತ್ತಾರೋ? ಮಿನಿ ವಿಧಾನಸೌಧದ ಹೆಸರಿನಲ್ಲೇ ವಿದ್ಯುತ್ ಬಿಲ್ ಬರುತ್ತೆ. ಒಟ್ಟು 10 ವಿವಿಧ ಇಲಾಖೆಗಳ ವಿದ್ಯುತ್ ಬಿಲ್ ಅನ್ನು ಸಮಾಜ ಕಲ್ಯಾಣ ಇಲಾಖೆಯೇ ಪಾವತಿಸುತ್ತಿದೆ. ಇಲಾಖೆ ಅಧಿಕಾರಿಗಳ ಆದೇಶದಂತೆ ಎಲ್ಲಾ ಇಲಾಖೆಯ ಹಣವನ್ನು ನಾವು ಪಾವತಿಸಲು ಸಾಧ್ಯವಿಲ್ಲ. ತಹಶೀಲ್ದಾರ್ ಸಾಹೇಬರು ಯಾವ ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ ಮಾಹಿತಿ ನೀಡಿದ್ದಾರೆ.
ಶುಚಿತ್ವಕ್ಕೆ ಆದ್ಯತೆ ನೀಡದ ಮಿನಿವಿಧಾನಸೌಧ ಸಿಬ್ಬಂದಿ
ಮಿನಿವಿಧಾನಸೌಧದ ಆವರಣ ಶುಚಿತ್ವ ಕಾಣದೆ ಗಿಡಗಂಟಿಗಳು ಬೆಳೆದುನಿಂತು ಹಾವು ಚೇಳುಗಳ ಅವಾಸ ಸ್ಥಾನವಾಗಿದ್ದರೂ ತಹಶೀಲ್ದಾರ್ ಅತ್ತ ಗಮನ ಹರಿಸಿಲ್ಲ. ಈಗಾಗಲೇ ಜನ ಸಾಂಕ್ರಾಮಿಕ ರೋಗಗಳ ಭೀತಿಗೆ ಒಳಗಾಗಿದ್ದಾರೆ. ಇಷ್ಟಾದರೂ ಶುಚಿತ್ವಕ್ಕೆ ತಾಲೂಕು ಆಡಳಿತ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.
ಮಿನಿವಿಧಾನಸೌಧದ ಆವರಣ, ಕಚೇರಿ ಎದುರಿಗಡೆಯ ಚರಂಡಿ ಸೇರಿದಂತೆ ಕಚೇರಿ ಕಾಂಪೌಂಡ್ ಮೇಲೆಲ್ಲಾ ಗಿಡಗಂಟಿ, ಬಳ್ಳಿಗಳು ಬೆಳೆದು ನಿಂತಿವೆ. ರಾಜ್ಯ ಹೆದ್ದಾರಿ ಮುಖ್ಯರಸ್ತೆ ಮಾರ್ಗ ಬದಿಯಲ್ಲಿರುವ ಮಿನಿವಿಧಾನಸೌಧದ ಸ್ಥಿತಿಯೇ ಹೀಗಾದ ಮೇಲೆ ಇನ್ನು ಗ್ರಾಮೀಣ ಭಾಗಗಳ ಸರ್ಕಾರಿ ಕಚೇರಿ ಹೇಗಿರಬೇಡ ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.