ಬೆಂಗಳೂರು: ಬೇಸಿಗೆ ಬಿಸಿಲು ತೀವ್ರಗೊಳ್ಳುತ್ತಿದ್ದಂತೆ ವಿದ್ಯುತ್ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಮಂಗಳವಾರ ರಾಜ್ಯದಲ್ಲಿ ದಾಖಲೆಯ 240 ದಶಲಕ್ಷ ಯೂನಿಟ್ (10,777 ಮೆಗಾವ್ಯಾಟ್) ವಿದ್ಯುತ್ ಬಳಕೆಯಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಂಗಳವಾರ ವಿದ್ಯುತ್ ಉತ್ಪಾದನೆ ಆರಂಭವಾದ ಮೇಲೆ ದಾಖಲೆಯ 10,777 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿತ್ತು. ಆದರೂ ಇಲಾಖೆಯಲ್ಲಿ ಹೆಚ್ಚುವರಿ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಿದ್ದು, ಲೋಡ್‌ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಹೇಳಿದರು.
ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ. ರೈತರಿಗೂ ಅಗತ್ಯ ವಿದ್ಯುತ್ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಪ್ರಸ್ತುತ ವಿದ್ಯುತ್ ಬೇಡಿಕೆ ಇನ್ನೂ ಒಂದು ಸಾವಿರ ಮೆಗಾವ್ಯಾಟ್‌ನಷ್ಟು ಹೆಚ್ಚಾದರೂ ಪೂರೈಸುವ ಸಾಮರ್ಥವನ್ನು ಇಂಧನ ಇಲಾಖೆ ಹೊಂದಿದೆ ಎಂದರು.
2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 14043 ಮೆಗಾವ್ಯಾಟ್ ಇತ್ತು. ನಂತರದ ಅವಧಿಯಲ್ಲಿ 10,586 ಮೆಗಾವಾಟ್ ವಿದ್ಯುತ್ ಉತ್ಪಾದನೆಯನ್ನು ಹೊಸದಾಗಿ ಆರಂಭಿಸಲಾಗಿದ್ದು, ಪ್ರಸ್ತುತ 24616 ಮೆಗಾವ್ಯಾಟ್‌ಗೆ ಏರಿದೆ. ವಿದ್ಯುತ್ ಪ್ರಸರಣಾ ನಷ್ಟವನ್ನು ಶೇ. 3.81ರಿಂದ ಶೇ. 3.28ಕ್ಕೆ ಮತ್ತು ವಿತರಣಾ ನಷ್ಟವನ್ನು ಶೇ. 15.3ರಿಂದ ಶೇ. 13.34ಕ್ಕೆ ಇಳಿಸಲಾಗಿದೆ. ಅತಿ ಕಡಿಮೆ ಪ್ರಸಣಾ ಮತ್ತು ವಿತರಣಾ ನಷ್ಟದಲ್ಲಿ ಬೆಸ್ಕಾಂ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ನಮ್ಮ ಸರ್ಕಾರದ ಸಾಧನೆ ಎಂದರು.
ನಾನು ಇಂಧನ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಇಲಾಖೆಯಲ್ಲಿ ದೇಶ ಮೆಚ್ಚುವಂತಹ ಕೆಲಸ ನಡೆದಿದೆ. 188 ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದು, 142 ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರಗಳನ್ನು ತೆರೆಯಲಾಗಿದೆ.169 ವಿಧಾನಸಭಾ ಕ್ಷೇತ್ರಗಳಲ್ಲಿ 6340 ಸದಸ್ಯರನ್ನೊಳಗೊಂಡ ಗ್ರಾಹಕರ ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ಹೊಸದಾಗಿ 149 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 4004 ಕಿ.ಮೀ. ಸರ್ಕ್ನೂಟ್ ಲೈನ್ ತೆರೆಯಲಾಗಿದೆ. ಕೇಂದ್ರ ಸರ್ಕಾರದ ಅನುದಾನವಿಲ್ಲದೆ ರಾಜ್ಯ ಸರ್ಕಾರವೇ ಈ ಸಾಧನೆ ಮಾಡಿದೆ ಎಂದು ತಿಳಿಸಿದರು.
ಇಂಧನ ಇಲಾಖೆಯ ಸಾಧನೆಗಳನ್ನು ವಿವರಿಸಿದ ಅವರು, 123 ತಾಲೂಕುಗಳಲ್ಲಿ ತಲಾ 20 ಕೆ.ವಿ. ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಲಾಖೆಯ ವಿವಿಧ ಸ್ತರಗಳಲ್ಲಿ 21 ಸಾವಿರ ಸಿಬ್ಬಂದಿ ನೇಮಿಸಲಾಗಿದ್ದು, ಸುಮಾರು 5 ಲಕ್ಷ ಅಕ್ರಮ ಪಂಪ್‌ಸೆಟ್‌ಗಳ ಪೈಕಿ ನಾಲ್ಕು ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಹೇಳಿದರು.