Advertisement

ಕಸದಿಂದ ವಿದ್ಯುತ್‌ ಪ್ರಕರಣ ಎಸಿಬಿ ತನಿಖೆಗೆ ಶಿಫಾರಸು

12:33 PM Jun 20, 2017 | Team Udayavani |

ವಿಧಾನಸಭೆ: ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುವುದಾಗಿ ಮಂಡೂರಿನ ಬಳಿ ಪಾಲಿಕೆಯಿಂದ ಆರು ಎಕರೆ ಜಾಗ ಪಡೆದು ಅದನ್ನು ಬ್ಯಾಂಕಿನಲ್ಲಿ ಅಡಮಾನ ಇರಿಸಿ 52.75 ಕೋಟಿ ರೂ. ಸಾಲ ಪಡೆದು ಹತ್ತು ವರ್ಷವಾದರೂ ಯೋಜನೆ ಜಾರಿಗೊಳಿಸದ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಲು ವಿಧಾನಮಂಡಲದ ಸಮಿತಿ ಶಿಫಾರಸು ಮಾಡಿದೆ.

Advertisement

ಮಂಡೂರಿನಲ್ಲಿ ಶ್ರೀನಿವಾಸ ಗಾಯಿತ್ರಿ ರಿಸೋಸರ್ಸ್‌ ರಿಕವರಿ ಲಿಮಿಟೆಡ್‌,  ಬಿಬಿಎಂಪಿ ಜತೆ ಒಡಂಬಡಿಕೆ ಮಾಡಿಕೊಂಡು ದಿನಕ್ಕೆ 1000 ಟನ್‌ತ್ಯಾಜ್ಯ ಸ್ವೀಕರಿಸಿ 8 ಮೆಗಾವ್ಯಾಟ್‌ ವಿದ್ಯುತ್‌ ತಯಾರಿಸುವ ಯೋಜನೆಯನ್ನು  20 ತಿಂಗಳಲ್ಲಿ ಅನುಷ್ಠಾಗೊಳಿಸುವುದಾಗಿ ಹೇಳಿದ್ದರೂ ಇದುವರೆಗೂ ಜಾರಿಯಾಗಿಲ್ಲ.

ಯೋಜನೆಗೆ ಬಿಬಿಎಂಪಿ 73.34 ಕೋಟಿ ರೂ. ಸಹ ವೆಚ್ಚ ಮಾಡಿದೆ. ಇದರಲ್ಲಿ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಸ್ಥೆ ಲೋಪ ಎಸಗಿದ್ದು ಮೂರು ತಿಂಗಳಲ್ಲಿ ತನಿಖೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸಿನಲ್ಲಿ ಸೂಚಿಸಲಾಗಿದೆ.

ಶ್ರೀನಿವಾಸ ಗಾಯಿತ್ರಿ ಸಂಸ್ಥೆಗೆ ಜಮೀನು ಅಡ ಇಟ್ಟು 52.75 ಕೋಟಿ ರೂ. ಸಾಲ ಪಡೆಯಲು ಆನುಮತಿ ನೀಡಿರುವುದು ಬಿಬಿಎಂಪಿಯಿಂದ ಆಗಿರುವ ಅವ್ಯವಹಾರ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಎ.ಬಿ.ಮಾಲಕರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಉದ್ಯಮಗಳ ಸಮಿತಿ ಸೋಮವಾರ ಸದನದಲ್ಲಿ ವರದಿ ಮಂಡಿಸಿದ್ದು, ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗದಂತೆ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡಬೇಕು.

52.74 ಕೋಟಿ ರೂ.ಗೆ ಬ್ಯಾಂಕಿನಲ್ಲಿ ಒತ್ತೆ ಇಟ್ಟಿರುವ ಆರು ಎಕರೆ ಭೂಮಿ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮ ನೋಡೆ‌ಲ್‌ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಯೋಜನೆ ಜಾರಿಗೊಳಿಸುವಲ್ಲಿ ಮೆಲ್ವಿಚಾರಣೆ ವಹಿಸಬೇಕು ಎಂದು ಶಿಫಾರಸು ಮಾಡಿದೆ.

Advertisement

ಮಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಂತರ್ಜಲ ಕಲುಷಿತವಾಗಿದ್ದು ಅಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಬಿಬಿಎಂಪಿ ಯೋಜನೆ ಸಂಬಂಧ ಪಾವತಿಸಿರುವ ಹಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಹೇಳಿದೆ.

ತನಿಖೆಗೆ ಸೂಚನೆ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯು ಬಾಲಾಜಿ ಫ‌ುಡ್‌ ಪ್ರೊಸೆಸಿಂಗ್‌ ಇಂಡಸ್ಟ್ರೀಸ್‌ಗೆ ಕಚ್ಛಾ ಸಾಮಗ್ರಿ ಪೂರೈಕೆಗೆ 4.64 ಕೋಟಿ ರೂ. ಪಾವತಿಸಿದರೂ ಆದೇಶದಲ್ಲಿ ನಮೂದಿಸಿದ್ದ ಪ್ರಮಾಣದ ಕಚ್ಛಾ ವಸ್ತು ಪೂರೈಕೆ ಮಾಡದ ಬಗ್ಗೆಯೂ ಸಮಿತಿ ಪತ್ತೆ ಹಚ್ಚಿದೆ. ಹೆಚ್ಚುವರಿಯಾಗಿ ಹಣ ಪಾವತಿಸಿ ಲೋಪ ಎಸಗಲಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಪ್ರಕರಣವನ್ನು ರಾಜ್ಯ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಿ ಎಲ್ಲ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಹಣ ಪಾವತಿ ಮಾಡಿರುವ ವಿಷಯದಲ್ಲಿ  ಆಗಿನ ವ್ಯವಸ್ಥಾಪಕ ನಿರ್ದೇಶಕರ ಲೋಪ, ಪ್ರಕರಣದಲ್ಲಿ ಬಾಲಾಜಿ ಫ‌ುಡ್‌ ಪ್ರೊಸೆಸಿಂಗ್‌ ಮಾಲೀಕರ ಪಾತ್ರ, ಹಣ ಬಿಡುಗಡೆ ಮಾಡುವಲ್ಲಿ ಬ್ಯಾಂಕ್‌ ಅಧಿಕಾರಿಗಳ ಪಾತ್ರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜರುಗಿಸಬಹುದಾದ ಕ್ರಮದ ಬಗ್ಗೆ ವರದಿ ನೀಡಲು ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next