Advertisement

ವಿದ್ಯುತ್‌ ಸ್ಥಗಿತ: ಅಂಗಡಿ-ಮನೆಗಳಿಗೆ ನುಗ್ಗಿದ ಮಳೆ ನೀರು

10:37 AM Sep 09, 2017 | |

ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಗುಡುಗು, ಮಿಂಚಿನೊಂದಿಗೆ ಆರ್ಭಟಿಸಿದ ಮಳೆ ಗುರುವಾರ ತಗ್ಗು ಪ್ರದೇಶದ ಮನೆ, ಅಂಗಡಿಗಳಿಗೆ ನುಗ್ಗಿ ಜನರು ಪರದಾಡುವಂತೆ ಆಗಿತ್ತು.

Advertisement

ರಾತ್ರಿ 7:00 ಗಂಟೆಗೆ ಆರಂಭವಾದ ಮಳೆ ರಾತ್ರಿಯಿಡಿ ಸುರಿಯಿತು. ಮಳೆಯಿಂದಾಗಿ ಪ್ರಮುಖ ರಸ್ತೆ, ಹಳ್ಳ, ಚರಂಡಿಗಳು ತುಂಬಿ ಹರಿದವು.

ಬಜಾರ್‌ ರಸ್ತೆ, ಬಸ್‌ ನಿಲ್ದಾಣ, ಸುತ್ತಮುತ್ತ ಬೀದಿ ವ್ಯಾಪಾರಿಗಳು ಮಾರಾಟಕ್ಕೆ ಹಚ್ಚಿಟ್ಟಿದ್ದ ಸಾಮಗ್ರಿಗಳು
ಮಳೆ ನೀರಲ್ಲಿ ತೇಲಿ ಹೋದವು. ಬಸ್‌ ನಿಲ್ದಾಣ ಆವರಣದ ಕಲಬುರಗಿ ಬಸ್‌ ನಿಲ್ಲುವ ಸ್ಥಳ ಮಳೆ ನೀರಿನಿಂದ ಜಲಾವೃತವಾಗಿತ್ತು.

ಅಂಬೇಡ್ಕರ್‌ ವೃತ್ತದ ಇಳಿಜಾರು ಪ್ರದೇಶದಲ್ಲಿರುವ ಚರಂಡಿಯಲ್ಲಿ ನೀರು ತುಂಬಿ ಹರಿಯಿತು. ಈ ನೀರು ನಾಲವಾರ ಅವರ ಕಿರಣಿ ಅಂಗಡಿಯ ಒಳಾಂಗಣ ಪ್ರವೇಶಿಸಿ ಅಂಗಡಿ ಜಲಾವೃತಗೊಂಡಿತ್ತು. ಲಕ್ಷಾಂತರ ರೂ. ಬೆಲೆಬಾಳುವ ಕಿರಾಣಿ ಸಾಮಾನುಗಳು ನೀರು ಪಾಲಾಗಿವೆ ಎಂದು ಅಂಗಡಿ ಮಾಲೀಕ ಅಬ್ದುಲ್‌ ಗಪೂರ್‌ ತಿಳಿಸಿದರು.

ರಸ್ತೆ ತುಂಬೆಲ್ಲ ಮಳೆ ನೀರು ಹರಿದು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಕರದಳ್ಳಿ ಗ್ರಾಮದಲ್ಲಿನ ಹಳ್ಳ ಸಂಪೂರ್ಣ ತುಂಬಿದ್ದರಿಂದ ಎರಡು ಕಿ.ಮೀ ಉದ್ದಕ್ಕೂ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಕೆಲವು ವಾಹನಗಳು ಕೆಸರಿನಲ್ಲಿ ಸಿಲುಕಿದ್ದವು. ಸಾರ್ವಜನಿಕರ ಸಹಾಯದಿಂದ ಮಳೆ ನೀರಿನಿಂದ ತುಂಬಿದ್ದ ಕಿರಣಿ ಅಂಗಡಿಗಳಲ್ಲಿನ ನೀರು ಹೊರಕ್ಕೆ ತೆಗೆಯಲಾಯಿತು.

Advertisement

ಪಟ್ಟಣದ ಇಂದಿರಾ ನಗರ, ವೆಂಕಟೇಶ್ವರ ನಗರ, ಗಣೇಶ ನಗರ, ನಾಗಾವಿ ಚೌಕ್‌, ಕಾಶಿ ಗಲ್ಲಿ, ತೆಳಗೇರಿ, ಆಶ್ರಯ ಕಾಲೋನಿ ಮನೆಗಳಲ್ಲಿ ಮಳೆ ನೀರು ನಿಂತು ನಿವಾಸಿಗಳು ತೊಂದರೆ ಅನುಭವಿಸಿದರು. ಕೆಲವೆಡೆ ಮಳೆ ಆರ್ಭಟಕ್ಕೆ ಗಿಡಗಳು ವಿದ್ಯುತ್‌ ಕಂಬಗಳ ಮೇಲೆ ಮುರಿದು ಬಿದ್ದಿದ್ದರಿಂದ ಶಾರ್ಟ್‌ ಆದವು. 

ಕರದಳ್ಳಿ, ಕಮರವಾಡಿ, ಮುಡಬೂಳ, ದಂಡೋತಿ, ಮರಗೋಳ, ಇಟಗಾ, ದಿಗ್ಗಾಂವ, ಅಳ್ಳೊಳ್ಳಿ, ಅಲ್ಲೂರ್‌ ಸೇರಿದಂತೆ ಹಲವು ಗ್ರಾಮದಲ್ಲಿ ಜೋರಾಗಿ ಮಳೆ ಸುರಿಯಿತು. ರೈತರ ಜಮೀನುಗಳಲ್ಲಿ ಮಳೆ ನೀರು ನಿಂತು ತುಂಬಿ ಹರಿಯಿತು. 

ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಬೆಳಗ್ಗೆ ಶಾಲೆಗಳಿಗೆ ಹೋಗಿದ್ದ ಮಕ್ಕಳು ಕೇಸರಿನಲ್ಲಿ ಕಾಲಿಡುತ್ತಾ ಕೋಣೆಯೊಳಗೆ ಹೋಗಿದ್ದರಿಂದ ಶಾಲೆಯ ಕೋಣೆಗಳು ಕೆಸರುಮಯ ಆಗಿದ್ದವು. ಕಳೆದ ವಾರದಿಂದ ಸ್ವಲ್ಪವೂ ಮಳೆ ಇರಲಿಲ್ಲ.

ಗುರುವಾರದ ಮಳೆಯಿಂದಾಗಿ ತೊಗರಿ, ಹತ್ತಿ ಬೆಳೆಗಳಿಗೆ ಜೀವಾಮೃತ ದೊರಕಿದಂತೆ ಆಯಿತು. ಸಾತನೂರ, ಹೊಸ್ಸುರ್‌, ರಾವೂರ, ನಾಲವಾರ, ಆಲೂರ್‌, ಡೋಣಗಾಂವ, ಭಂಕಲಗಾ, ರಾಮತೀರ್ಥ, ದಂಡಗುಂಡ, ಅಲ್ಲೂರ್‌ ಇನ್ನಿತರ ಗ್ರಾಮಗಳಲ್ಲಿ ಮಳೆಯನ್ನೇ ಅವಲಂಬಿಸಿರುವ ರೈತರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟರಿ. ಆದರೆ ಇನ್ನು ಹೆಚ್ಚು ಮಳೆಯಾದರೆ ಮಾತ್ರ ಬೆಳೆಗಳು ಹುಲುಸಾಗಿ ಬೆಳೆಯಲು ಸಾಧ್ಯವೆಂದು ಕರದಳ್ಳಿ ಗ್ರಾಮದ ರೈತ ರಾಜಶೇಖರ ಹಾಗೂ ಮತ್ತಿತರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next