Advertisement

ವಿದ್ಯುದಾಘಾತ! ಯೂನಿಟ್‌ ಸರಾಸರಿ ದರ 40 ಪೈಸೆ ಏರಿಕೆ

01:00 AM Nov 05, 2020 | mahesh |

ಬೆಂಗಳೂರು: ಎರಡು ವಿಧಾನಸಭೆ ಉಪ ಚುನಾವಣೆಗೆ ಮತದಾನ ಮುಗಿದ ಮರುದಿನವೇ ರಾಜ್ಯಾದ್ಯಂತ ಪ್ರತೀ ಯೂನಿಟ್‌ ವಿದ್ಯುತ್‌ ದರ ಸರಾಸರಿ 40 ಪೈಸೆ ಹೆಚ್ಚಳವಾಗಿದ್ದು, ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ದರ ಏರಿಕೆಯ “ಶಾಕ್‌’ ನೀಡಿದೆ.

Advertisement

ಕೊರೊನಾ ಪಿಡುಗಿನಿಂದಾಗಿ ಆರ್ಥಿಕತೆ ಏರು ಪೇರಾಗಿದ್ದ ಕಾರಣ ಏಳು ತಿಂಗಳ ಬಳಿಕ ರಾಜ್ಯಾದ್ಯಂತ ಪ್ರತೀ ಯೂನಿಟ್‌ ವಿದ್ಯುತ್‌ ದರವನ್ನು ಸರಾಸರಿ 40 ಪೈಸೆ ಹೆಚ್ಚಿಸಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮತಿ ನೀಡಿದೆ. ನ. 1ರಿಂದಲೇ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಪರಿಷ್ಕೃತ ದರಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಾಕಿ ಉಳಿದಿರುವ ಐದು ತಿಂಗಳ (2021ರ ಮಾರ್ಚ್‌ 31) ಅವಧಿಯ ವರೆಗಷ್ಟೇ ಸಂಗ್ರಹಿಸಲು ಆಯೋಗ ಅವಕಾಶ ನೀಡಿದೆ. ಬೆಸ್ಕಾಂ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ವಿಭಿನ್ನ ದರ ಏರಿಕೆಯೊಂದಿಗೆ ಉಳಿದ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಏಕರೂಪದ ದರ ಏರಿಕೆಯಾಗಿದೆ.

ಬೆಸ್ಕಾಂ ಒಳಗೊಂಡಂತೆ ಎಲ್ಲ ಎಸ್ಕಾಂಗಳು ಪ್ರತೀ ಯೂನಿಟ್‌ ದರವನ್ನು ಸರಾಸರಿ 1.26 ರೂ.ನಷ್ಟು (ಶೇ. 17.15) ಹೆಚ್ಚಿಸಲು ಪ್ರಸ್ತಾವ ಸಲ್ಲಿಸಿದ್ದವು. ಅವುಗಳನ್ನು ಪರಿಶೀಲಿಸಿದ ಆಯೋಗವು ಅಂತಿಮವಾಗಿ ಪ್ರತೀ ಯೂನಿಟ್‌ ದರ ಸರಾಸರಿ 40 ಪೈಸೆ (ಶೇ. 5.40)ಯಷ್ಟು ಏರಿಸಲು ಒಪ್ಪಿದೆ. ಪರಿಷ್ಕೃತ ದರಗಳು ನ. 1 ಅಥವಾ ಅನಂತರದ ಮೊದಲನೆಯ ಮೀಟರ್‌ ಓದುವ ದಿನಾಂಕದಿಂದ ಬಳಕೆ ಮಾಡಿದ ವಿದ್ಯುತ್‌ಗೆ ಅನ್ವಯವಾಗಲಿವೆ.

ಈ ಹಿಂದಿನ ವರ್ಷಗಳಲ್ಲಿ ನಡೆದಂತೆ ಕಳೆದ ಎಪ್ರಿಲ್‌ 1ರಿಂದಲೇ ವಿದ್ಯುತ್‌ ದರ ಪರಿಷ್ಕರಣೆ ಯಾಗಿದ್ದರೆ ಪ್ರಸಕ್ತ ವರ್ಷದಲ್ಲಿ 2,473 ಕೋಟಿ ರೂ. ಆದಾಯ ಕೊರತೆ ನಿವಾರಣೆಯಾಗುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಮತ್ತಿತರ ಕಾರಣಗಳಿಂದ ವಿಳಂಬವಾಗಿದ್ದು, ಏಳು ತಿಂಗಳ ಬಳಿಕ ದರ ಪರಿಷ್ಕರಣೆಯಾಗಿದೆ.

ದರ ಹೆಚ್ಚಳ ಕಾರಣ
ರಾಜ್ಯದ ಉಷ್ಣ ಸ್ಥಾವರದ ವಿದ್ಯುತ್‌ ಮತ್ತು ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್‌ ಖರೀದಿ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಳ. ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಬಂಡವಾಳ ವೆಚ್ಚಕ್ಕಾಗಿ ಪಡೆಯುವ ಸಾಲದ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು.
ದೀರ್ಘಾವಧಿ ವಿದ್ಯುತ್‌ ಖರೀದಿ ಒಪ್ಪಂದಗಳ ಕಾರಣ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ನಿಗದಿತ ವೆಚ್ಚಗಳ ಪಾವತಿ.
ಸಿಬಂದಿಗೆ ವೇತನ ಪರಿಷ್ಕರಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆ ವೆಚ್ಚ, ಬಂಡವಾಳ ವೆಚ್ಚ ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಸಾಲಗಳ ಮೇಲಿನ ಬಡ್ಡಿ.

Advertisement

ಒಂದಿಷ್ಟು ವಿನಾಯಿತಿ!
ಎಚ್‌.ಟಿ. ಸಂಪರ್ಕದ ಕೈಗಾರಿಕೆಗಳಲ್ಲಿ ಹೆಚ್ಚಿನ ವಿದ್ಯುತ್‌ ಬಳಕೆ ಪ್ರೋತ್ಸಾಹಿಸಲು ಬೆಳಗ್ಗೆ 6ರಿಂದ ಬೆಳಗ್ಗೆ 10ರ ವರೆಗಿನ ಅತ್ಯಧಿಕ ಬೇಡಿಕೆ ಅವಧಿಯಲ್ಲಿನ ವಿದ್ಯುತ್‌ ಬಳಕೆಗೆ ವಿಧಿಸಲಾಗುತ್ತಿದ್ದ 1 ರೂ. ದಂಡ ಹಿಂಪಡೆಯಲಾಗಿದೆ.

ಬಿಬಿಎಂಪಿ ಸಹಿತ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಬೀದಿದೀಪಗಳ ಅಳವಡಿಕೆಗೆ ಎಲ್‌ಇಡಿ/ ಇಂಡಕ್ಷನ್‌ ಲ್ಯಾಂಪ್‌ ಲೈಟಿಂಗ್‌ ಸ್ಥಾಪಿಸಲು ಪ್ರತೀ ಯೂನಿಟ್‌ಗೆ ನೀಡುವ ರಿಯಾಯಿತಿಯಲ್ಲಿ 5 ಪೈಸೆ ಹೆಚ್ಚಳ.

ಎಚ್‌.ಟಿ. ಗ್ರಾಹಕರಿಗೆ ಜಾರಿಗೊಳಿಸಿದ್ದ ವಿಶೇಷ ಪ್ರೋತ್ಸಾಹ ಯೋಜನೆ ಮುಂದು ವ ರಿ ಕೆ. ಅದರಂತೆ ಬೆಳಗ್ಗೆ 10ರಿಂದ ಸಂಜೆ 6ರ ಅವಧಿಯಲ್ಲಿ ವಿದ್ಯುತ್‌ ಬಳಕೆಗಾಗಿ ಅವುಗಳ ಮೂಲ ಬಳಕೆಗಿಂತ ಹೆಚ್ಚಿನ ಪ್ರತೀ ಯೂನಿಟ್‌ಗೆ 1 ರೂ. ಪ್ರೋತ್ಸಾಹ. ರಾತ್ರಿ 10ರಿಂದ ಮುಂಜಾನೆ 6ರ ವರೆಗಿನ ಅವಧಿಯ ಬಳಕೆಗೆ ಎಲ್ಲ ಘಟಕಗಳಿಗೆ ಪ್ರತೀ ಯೂನಿಟ್‌ಗೆ 2 ರೂ. ಪ್ರೋತ್ಸಾಹ ಮುಂದುವರಿದಿದೆ.

ಮೆಟ್ರೋ ರೈಲಿಗೆ ಬಳಕೆಯಾಗುವ ವಿದ್ಯುತ್‌ ದರ ಏರಿಕೆಯಾಗಿಲ್ಲ. ಹಾಲಿ ವಿನಾಯಿತಿ ದರ ಪ್ರತೀ ಯೂನಿಟ್‌ಗೆ 5.20 ರೂ. ಮುಂದುವರಿದಿದೆ. ರೈಲ್ವೇ ಟ್ರಾಕ್ಷನ್‌ಗೆ ದಿನದ 24 ತಾಸು, ಟೈಮ್‌ ಆಫ್ ಡೇ (ಟಿಒಡಿ) ಮತ್ತು ವಿಶೇಷ ಪ್ರೋತ್ಸಾಹ ಯೋಜನೆ ಇಲ್ಲದಂತೆ ಪ್ರತೀ ಯೂನಿಟ್‌ಗೆ 6.45 ರೂ.ನಂತೆ ವಿದ್ಯುತ್‌ ದರ ಅನುಮೋದಿಸಲಾಗಿದೆ.

ಎಪ್ಲುಯೆಂಟ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ ಮತ್ತು ಕೊಳಚೆ ನೀರು ಶುದ್ಧೀಕರಣ ಘಟಕಗಳಿಗೆ ಆಯಾ ಸ್ಥಾವರಗಳಿಗೆ ಅನ್ವಯವಾಗುವ ವಿದ್ಯುತ್‌ ದರ ಮುಂದುವರಿಯಲಿದೆ.

ಘನ ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಎಲ್‌.ಟಿ. ಮತ್ತು ಎಚ್‌.ಟಿ. ಕೈಗಾರಿಕಾ ವರ್ಗದ ದರ ಮುಂದುವರಿಯಲಿದೆ.

ವಿದ್ಯುತ್‌ ದರ ಏರಿಕೆ ವಿವರ
ನಿಗದಿತ ಶುಲ್ಕ (ಫಿಕ್ಸ್‌ಡ್‌ ಡೆಪಾಸಿಟ್‌)ದ ಗಣನೀಯ ಪಾಲನ್ನು ವಿದ್ಯುತ್‌ ಬಳಕೆ ಶುಲ್ಕದ ಮೂಲಕ ಮರು ಪಡೆಯ ಲಾಗು ತ್ತಿದೆ. ನಿಗದಿತ ಖರ್ಚಿನ ಶೇ. 27.73ರಷ್ಟು ಮಾತ್ರ ಸದ್ಯ ವಸೂಲಿಯಾಗುತ್ತಿದ್ದು, ಬಾಕಿ ನಿಗದಿತ ವೆಚ್ಚವನ್ನು ವಿದ್ಯುತ್‌ ಶುಲ್ಕದ ಮೂಲಕ ವಸೂಲಿ ಮಾಡಲಾಗು ತ್ತಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ನಿಗದಿತ ಶುಲ್ಕ ಹೆಚ್ಚಿಸಲು ಆಯೋಗ ತೀರ್ಮಾನಿ ಸಿದೆ. ಅದರಂತೆ ಎಲ್ಲ ಸ್ಥಾವರ ಗಳಿಗೆ ಸಂಬಂಧಪಟ್ಟಂತೆ (ನೀರಾವರಿ ಪಂಪ್‌ಸೆಟ್‌ ಸಂಪರ್ಕ ಹೊರತು ಪಡಿಸಿ) ನಿಗದಿತ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್‌/ ಎಚ್‌ಪಿ/ ಕೆವಿಎಗೆ 10 ರೂ. ಕನಿಷ್ಠ ಏರಿಕೆಗೆ ಅನು ಮೋದನೆ ನೀಡಿದೆ. ಸಂಜೆ 6ರಿಂದ ರಾತ್ರಿ 10ರ ವರೆಗಿನ ಅವಧಿಯಲ್ಲಿ ಬಳಸುವ ವಿದ್ಯುತ್‌ನ ಪ್ರತೀ ಯೂನಿಟ್‌ಗೆ ಒಂದು ರೂ. ದಂಡ ಶುಲ್ಕ ಮುಂದುವರಿದೆ.

ಪ್ರಸ್ತಾವಿತ ದರ ಹೆಚ್ಚಳ ವಿವರ
ಮೆಸ್ಕಾಂ 62 ಪೈಸೆ
ಬೆಸ್ಕಾಂ 1.96 ರೂ.
ಸೆಸ್ಕ್ 68 ಪೈಸೆ
ಹೆಸ್ಕಾಂ 52 ಪೈಸೆ
ಜೆಸ್ಕಾಂ 78 ಪೈಸೆ

Advertisement

Udayavani is now on Telegram. Click here to join our channel and stay updated with the latest news.

Next