Advertisement
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ವತಿಯಿಂದ ಸಾರ್ವಜನಿಕ ವಿಚಾರಣೆ ನಡೆಯಿತು.
Related Articles
ಸತ್ಯನಾರಾಯಣ ಉಡುಪ ಮಾತನಾಡಿ, ಮೆಸ್ಕಾಂಗೆ ಬರಲು ಬಾಕಿ ಇರುವ ಹಣವನ್ನು ವಸೂಲು ಮಾಡಿದರೆ ಮೆಸ್ಕಾಂ ದರ ಏರಿಕೆ ಪ್ರಸ್ತಾವವೇ ಇರುವುದಿಲ್ಲ. ಮೆಸ್ಕಾಂ ಈಗಲೂ ಲಾಭದಲ್ಲಿದೆ. ಹೀಗಾಗಿ ದರ ಏರಿಕೆ ಮಾಡಬಾರದು ಎಂದರು. ರಾಮಕೃಷ್ಣ ಶರ್ಮ ಉಡುಪಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಲೋ ವೋಲ್ಟೆàಜ್ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹಳೆಯ ಹಾಗೂ ತುಂಡಾದ ತಂತಿಯ ಸಮಸ್ಯೆ ಇದೆ. ಲೆಕ್ಕಕ್ಕಿಂತ ಅಧಿಕ ಪಂಪ್ ಜೋಡಣೆಯೂ ಇದೆ ಎಂದರು.
Advertisement
ರವೀಂದ್ರ ಗುಜ್ಜರಬೆಟ್ಟು ಮಾತನಾಡಿ ವಿದ್ಯುತ್ ದರ ಏರಿಕೆ ಮಾಡಿದರೆ ಎಲ್ಲ ಬೆಲೆಯೂ ಏರಲಿದೆ. ಇದಕ್ಕಾಗಿ ವಿದ್ಯುತ್ ಬಳಕೆ ಕಡಿಮೆ ಮಾಡುವ ಬಗ್ಗೆ ಮೆಸ್ಕಾಂ ಜನರಿಗೆ ಅರಿವು ಮೂಡಿಸಬೇಕು ಎಂದರು. ಬಿ. ಪ್ರವೀಣ್, ವಾಸುದೇವ ನಾಯಕ್, ರೋಹಿತ್ ಪೂಜಾರಿ ಮುಂತಾದವರು ಮಾತನಾಡಿದರು.
ಮಂಜುಗಡ್ಡೆ ಸ್ಥಾವರಗಳಿಗೆ ವಿಶೇಷ ರಿಯಾಯಿತಿ ನಿಯಮವನ್ನು ಎಲ್ಲಾ ಸ್ಥಾವರದವರಿಗೂ ವಿಸ್ತರಿಸಬೇಕು ಎಂದು ಸ್ಥಾವರದ ಪ್ರಮುಖರು ಒತ್ತಾಯಿಸಿದರು. ಜಿ.ಕೆ. ಭಟ್ ಅವರು ಮಾತನಾಡಿ ಲೈನ್‌ಮ್ಯಾನ್‌ಗಳ ನೇಮಕ, ಕಂಬಗಳಿಗೆ ಕೇಬಲ್ ಅಳವಡಿಕೆಗೆ ನಿಯಮಾವಳಿ ಹಾಗೂ ಗ್ರಾಹಕರ ಸಭೆಯನ್ನು ಆನ್‌ಲೈನ್ ಕೈಬಿಟ್ಟು ಕಚೇರಿಯಲ್ಲಿ ಗ್ರಾಹಕರ ಉಪಸ್ಥಿತಿಯಲ್ಲಿ ಮಾಡಬೇಕು ಎಂದರು.
ಬಾಕಿ ವಸೂಲಿ ಮಾಡದೆ ದರ ಏರಿಕೆ ಯಾವ ನ್ಯಾಯ?ಗ್ರಾಹಕರ ವೇದಿಕೆಯ ಕೆ.ಎನ್.ವೆಂಕಟಗಿರಿ ರಾವ್ ಮಾತನಾಡಿ, ಗ್ರಾ.ಪಂ. ಸಹಿತ ವಿವಿಧ ಮೂಲಗಳಿಂದ ಮೆಸ್ಕಾಂಗೆ ಸುಮಾರು 1,214 ಕೋ.ರೂ. ಹಣ ಬರಲು ಬಾಕಿ ಇದೆ. ಮೆಸ್ಕಾಂ ಇದನ್ನು ವಸೂಲು ಮಾಡುವುದನ್ನು ಬಿಟ್ಟು 769 ಕೋ.ರೂ. ಕೊರತೆಯ ನೆಪ ಹೇಳಿ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಬಿಸಿ ನೀಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ದರ ಏರಿಕೆ ಅನಿವಾರ್ಯತೆ: ಮೆಸ್ಕಾಂ
2023 -24ರಲ್ಲಿ 6313.75 ಮಿ.ಯುನಿಟ್ ವಿದ್ಯುತ್ ಖರೀದಿಸಲು ಪ್ರಸ್ತಾವವಿದ್ದು, ಇದಕ್ಕಾಗಿ 3787.41 ಕೋ.ರೂ. ವೆಚ್ಚ ಸಹಿತ ಇತರ ವೆಚ್ಚ ಸೇರಿ 5214 ಕೋ.ರೂ. ಕಂದಾಯ ಅಗತ್ಯವಿದೆ. ಆದರೆ, ಮೆಸ್ಕಾಂಗೆ ಎಲ್ಲ ಮೂಲದಿಂದ ಸೇರಿ 4445.43 ಕೋ.ರೂ ಆದಾಯ ನಿರೀಕ್ಷಿಸಲಾಗಿದೆ. ಹೀಗಾಗಿ ಒಟ್ಟು 768.97 ಕೋ.ರೂ. ಕೊರತೆಯಾಗಲಿದೆ. ಇದನ್ನು ಸರಿದೂಗಿಸಲು ಪ್ರತಿ ಯುನಿಟ್‌ಗೆ ಸರಾಸರಿ 1.38 ರೂ. ದರವನ್ನು ಹೆಚ್ಚಿಸಬೇಕಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಅವರು ತಿಳಿಸಿದರು. ಎಚ್‌ಟಿ ಗ್ರಾಹಕರ ದೂರು/ಮನವಿಗೆ ಶೀಘ್ರ ಸ್ಪಂದಿಸಲು ಎಲ್ಲ ಉಪವಿಭಾಗಾಧಿಕಾರಿ ವ್ಯಾಪ್ತಿಯಲ್ಲಿ ಗ್ರಾಹಕರ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗುವುದು. ದ.ಕ. 18, ಉಡುಪಿ 12, ಶಿವಮೊಗ್ಗ 17 ಹಾಗೂ ಚಿಕ್ಕಮಗಳೂರಿನಲ್ಲಿ 12 ಇವಿ ಚಾರ್ಜಿಂಗ್ ಯುನಿಟ್ ಸ್ಥಾಪಿಸಲಾಗಿದೆ ಹಾಗೂ 2016-17ರಲ್ಲಿ ಶೇ.11.40ರಷ್ಟಿದ್ದ ವಿದ್ಯುತ್ ವಿತರಣ ನಷ್ಟ 2021-22ರಲ್ಲಿ ಶೇ.9.02ಕ್ಕೆ ಇಳಿಕೆ ಆಗಿದೆ ಎಂದವರು ಹೇಳಿದರು.