ಮಂಗಳೂರು: ಮೇ ತಿಂಗಳಲ್ಲಿ 2 ತಿಂಗಳ ವಿದ್ಯುತ್ ಬಿಲ್ಲನ್ನು ಒಟ್ಟಿಗೆ ನೀಡುವಾಗ ಹೆಚ್ಚುವರಿ ಮೊತ್ತ ನಮೂದಿಸಲಾಗಿದ್ದುದರಿಂದ ಗ್ರಾಹಕರಲ್ಲಿ ಉಂಟಾಗಿರುವ ಗೊಂದಲಗಳ ಕುರಿತು ಮೆಸ್ಕಾಂ ಸ್ಪಷ್ಟೀಕರಣ ನೀಡಿದೆ. ಗ್ರಾಹಕರಿಗೆ ಬಳಕೆ ಮತ್ತು ಸ್ಲ್ಯಾಬ್ ದರಗಳನ್ನು ಮಾಸಿಕ ಬಿಲ್ಲಿಗೆ ಅನ್ವಯಿಸುವಂತೆ ಕರಾರುವಕ್ಕಾಗಿ ಹಾಗೂ ಯಾವುದೇ ಹೆಚ್ಚುವರಿ ಆಗದಂತೆ ಎರಡು ತಿಂಗಳಿಗೂ ಸಮಾನವಾಗಿ ಯುನಿಟ್ ಬಳಕೆಯನ್ನು, ಸ್ಲ್ಯಾಬ್‌ಗಳನ್ನು ದುಪ್ಪಟ್ಟು ಗೊಳಿಸಿ ಕನಿಷ್ಠ ಸ್ಲ್ಯಾಬ್‌ನಿಂದ ಅನ್ವಯಿಸುವಂತೆ ಬಿಲ್ಲಿನಲ್ಲಿ ತೋರಿಸಲಾಗಿದೆ ಎಂದು ವಿವರಿಸಿದೆ.
ಗ್ರಾಹಕರು ಹಿಂದಿನ ತಿಂಗಳ ಹಾಗೂ ಪ್ರಸಕ್ತ ರೀಡಿಂಗನ್ನು ಹಾಗೂ ಸ್ಲ್ಯಾಬ್ ಲೆಕ್ಕಾಚಾರವನ್ನು ಪರಿಶೀಲಿಸಿ, ಯಾವುದಾದರೂ ನ್ಯೂನತೆಗಳು ಕಂಡಲ್ಲಿ ಸಂಬಂಧ
ಪಟ್ಟ ಉಪವಿಭಾಗವನ್ನು ಸಂಪರ್ಕಿಸಿ (ವಿವರಗಳು ಮೆಸ್ಕಾಂ ವೆಬ್‌ಸೈಟ್‌ನಲ್ಲಿವೆ) ಅಥವಾ ಸಹಾಯವಾಣಿಗೆ ಕರೆ ಮಾಡಿ ತಮ್ಮ ವಿದ್ಯುತ್ ಬಿಲ್ಲಿನ ನ್ಯೂನತೆಗಳ ಬಗ್ಗೆ ಸ್ಪಷ್ಟನೆ ಪಡೆದು ದೃಢೀಕರಿಸಿಕೊಂಡು ಪಾವತಿಸಬೇಕು ಎಂದು ತಿಳಿಸಿದೆ.
ಒಂದು ವಿದ್ಯುತ್ ಬಿಲ್ಲಿನಲ್ಲಿ ನಿಗದಿತ ಶುಲ್ಕ, ವಿದ್ಯುತ್ ಶುಲ್ಕ ಮತ್ತು ತೆರಿಗೆ ಎಂಬ ಮೂರು ಅಂಶಗಳು ಸೇರಿರುತ್ತವೆ. ವಿದ್ಯುತ್ ಬಳಕೆ ಮಾಡದಿದ್ದರೂ ಕೂಡ ನಿಗದಿತ ಶುಲ್ಕ ಮಾತ್ರ ಬಿಲ್ಲಿನಲ್ಲಿ ಬರುತ್ತದೆ ಎಂದು ಮೆಸ್ಕಾಂ ಪ್ರಕಟನೆ ವಿವರಿಸಿದೆ.
ಮೆಸ್ಕಾಂ ಸಹಾಯವಾಣಿ 1912