Advertisement
ಉಡುಪಿ: ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಕಲಿಕೆಯಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್-ಆಫ್‌ಲೈನ್ ಶಿಕ್ಷಣಕ್ಕೆ ಮುಂದಡಿ ಇಟ್ಟಿದೆ. ಆದರೆ ಇದು ಜಿಲ್ಲೆಯ ಗ್ರಾಮೀಣ ಭಾಗದ ಶೇ. 10ರಷ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ 694 ಸರಕಾರಿ, 250 ಅನುದಾನಿತ ಹಾಗೂ 280 ಅನುದಾನರಹಿತ ಶಾಲೆಗಳಿವೆ. ಇದರಲ್ಲಿ 1ರಿಂದ 8ನೇ ತರಗತಿವರೆಗೆ 1,04,565 ವಿದ್ಯಾರ್ಥಿಗಳು ಮತ್ತು 9, 10ನೇ ತರಗತಿಯಲ್ಲಿ 29,115 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,33,680 ವಿದ್ಯಾರ್ಥಿಗಳು ಇದ್ದಾರೆ. ಇಲಾಖೆಯ ಸರ್ವೇ ಅನ್ವಯ ಜಿಲ್ಲೆಯಲ್ಲಿ 1,14,476 ವಿದ್ಯಾರ್ಥಿಗಳ ಮನೆಗಳಲ್ಲಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಹಾಗೂ 1,33,000 ವಿದ್ಯಾರ್ಥಿಗಳ ಮನೆಗಳಲ್ಲಿ ಟವಿ, ರೇಡಿಯೋ ಸೌಲಭ್ಯವಿದೆ.
ಆರ್ಥಿಕ ಶಕ್ತಿ ಕಡಿಮೆ ಇರುವ ಪೋಷಕರು ಮಕ್ಕಳನ್ನು ಹೆಚ್ಚಾಗಿ ಸರಕಾರಿ ಶಾಲೆಗೆ ಸೇರಿಸುತ್ತಾರೆ. ಹೆಚ್ಚಿನ ಕುಟುಂಬಗಳು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರಾಗಿದ್ದಾರೆ. ಈ ಕುಟುಂಬಗಳಿಗೆ ಸರಕಾರ ಜಾರಿಗೆ ತಂದ ಆನ್‌ಲೈನ್ ತರಗತಿಗಳು ದುಬಾರಿಯಾಗಿ ಪರಿಣಮಿಸಿವೆ. ಮಕ್ಕಳ ಭವಿಷ್ಯದ ದೃಷ್ಟಿ ಯಿಂದ ಪೋಷಕರು ಕೋವಿಡ್ ಸಂಕಷ್ಟ ಕಾಲದಲ್ಲೂ ಸಾವಿರಾರು ರೂಪಾಯಿ ವ್ಯಯಿಸಿ ಸ್ಮಾರ್ಟ್‌ಫೋನ್ ಖರೀದಿಸಿ ನೀಡಿದ್ದಾರೆ. ಈಗ ಇಂಟರ್ನೆಟ್ ಪ್ಯಾಕೇಜ್-ರೀಜಾರ್ಜ್ ಮಾಡುವುದೂ ಹೊರೆಯಾಗಿದೆ.
ಕರಾವಳಿಯ ಗುಡ್ಡಗಾಡು ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕೆಲವೆಡೆ ಒಂದು ದೂರವಾಣಿ ಕರೆ ಸ್ವೀಕರಿಸಲು ಮನೆ ಬಿಟ್ಟು ದೂರ ತೆರಳಬೇಕು. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತರಗತಿ ಪ್ರಾರಂಭವಾಗುವ ಒಂದು ಗಂಟೆಯ ಮುನ್ನ ಪೋಷಕರೊಂದಿಗೆ ಗುಡ್ಡಹತ್ತಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಪ್ರಯತ್ನಿಸಬೇಕಾದ ಪರಿಸ್ಥಿತಿ ಎದುರಾಗಿದೆ.
Related Articles
ಜಡ್ಕಲ್, ಮುದೂರು, ಕೊಲ್ಲೂರು, ಹಾಲ್ಕಲ್, ಮಾವಿನ ಕಾರು, ಬಸ್ರಿಬೇರು, ಮಾರಣಕಟ್ಟೆ, ಇಡೂರು ಸಹಿತ ಕೆರಾಡಿ, ಬೆಳ್ಳಾಲ, ಮೂಡಮುಂದ, ಹೊಸೂರು ಹಾಗೂ ಕಾರ್ಕಳ, ಹೆಬ್ರಿ, ಬ್ರಹ್ಮಾವರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಇಂಟರ್‌ನೆಟ್ ಸಮಸ್ಯೆ ಇದೆ.
Advertisement
ವಿದ್ಯುತ್ ಸಮಸ್ಯೆ !ಜಿಲ್ಲೆಯಲ್ಲಿ ವಾರದಲ್ಲಿ ಒಂದು ದಿನ ಮೆಸ್ಕಾಂನವರು ನಿರ್ವಹಣೆಯ ನೆಪದಲ್ಲಿ ವಿದ್ಯುತ್ ವ್ಯತ್ಯಯ ಮಾಡುತ್ತಾರೆ. ಮಳೆ -ಗಾಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಹಜವಾಗಿದೆ. ಇದರಿಂದಾಗಿ ಟಿವಿ ಮೂಲಕ ಪಾಠಗಳನ್ನು ವೀಕ್ಷಿಸುವ ಮಕ್ಕಳಿಗೆ ಆ ದಿನದ ತರಗತಿಗಳು ತಪ್ಪಿ ಹೋಗುತ್ತಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆ ಇರುವ ಮಕ್ಕಳಿಗೆ ಯೂ ಟ್ಯೂಬ್‌ನಲ್ಲಿ ತರಗತಿ ಲಿಂಕ್ ಲಭ್ಯವಿದ್ದರೂ ನೆಟ್‌ವರ್ಕ್ ಸಮಸ್ಯೆಯಿಂದ ತರಗತಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ಶೇ. 10ರಷ್ಟು ವಿದ್ಯಾರ್ಥಿಗಳ ಮನೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಅದಕ್ಕಾಗಿ ಶಿಕ್ಷಕರು ಪೋಷಕರ ಮೊಬೈಲ್ ವಾಟ್ಸ್ಯಾಪ್‌ಗಳಿಗೆ ರೆಕಾರ್ಡ್ ಮಾಡಿರುವ ವೀಡಿಯೋಗಳನ್ನು ಕಳುಹಿಸುತ್ತಾರೆ. ಜತೆಗೆ ನೆಟ್‌ವರ್ಕ್ ಇಲ್ಲದ ಪ್ರದೇಶಗಳಿಗೆ ಶಿಕ್ಷಕರು ತೆರಳಿ ಪಾಠ
ಹಾಗೂ ಅಗತ್ಯವಿರುವ ಚಟುವಟಿಕೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಪಾಠದ ಗ್ರಹಿಕೆಯನ್ನೂ ಶಿಕ್ಷಕರು ಪರಿಶೀಲಿಸುತ್ತಿದ್ದಾರೆ.
– ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ ಜಿಲ್ಲೆ. ತೃಪ್ತಿ ಕುಮ್ರಗೋಡು