ದೇವದುರ್ಗ: ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆಯಡಿ 4.50 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಕೈಗೊಂಡ ವಿದ್ಯುತ್ ಕಂಬ, ಎಲ್ಟಿ ವೈರ್ ಮತ್ತು ಹೆಚ್ಚುವರಿ ಟಿಸಿ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿವೆ.
ಕೆಲ ವಾರ್ಡ್‌ಗಳಲ್ಲಿ ಸಾರ್ವಜನಿಕರು ವಿದ್ಯುತ್ ಕಂಬ, ಎಲ್ಟಿ ವೈರ್, ಟಿಸಿ ಅಳವಡಿಕೆ ಅವೈಜ್ಞಾನಿಕವಾಗುತ್ತಿದೆ ಎಂದು ತಕರಾರು ತೆಗೆದಿದ್ದಾರೆನ್ನಲಾಗಿದೆ. ಇದರಿಂದಾಗಿ ಜುಲೈ ಅಂತ್ಯಕ್ಕೆ ಮುಗಿಯಬೇಕಿದ್ದ ಕಾಮಗಾರಿ ಇನ್ನೂ ನಡೆದಿದೆ.
ಬೆಂಗಳೂರು ಮೂಲದ ಹ್ಯಾರಿಸ್ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿದೆ. ದೇವಸ್ಥಾನ, ಮನೆ, ಶಾಲೆಗಳಿರುವ ಪ್ರದೇಶಗಳಲ್ಲಿ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ ಬದಲಿಸಿ ಎಲ್ಟಿ ಕೇಬಲ್ ಹಾಕಲಾಗುತ್ತಿದೆ. ಹೊಸದಾಗಿ 43 ಟಿಸಿ, 250 ಕಂಬ ಅಳವಡಿಸಲಾಗುತ್ತಿದೆ. ಒಟ್ಟು 40 ಕಿಮೀ ಕೇಬಲ್ ಅಳವಡಿಕೆ ಯೋಜನೆ ಒಂದಾಗಿದೆ. ಈಗಾಗಲೇ 35 ಕಿ.ಮೀ. ಕಾಮಗಾರಿ ಮುಗಿದಿದೆ. ವಿದ್ಯುತ್ ಪರಿವೀಕ್ಷಕರ ಇಂಜಿನಿಯರ್ ತಂಡ ಪರಿಶೀಲನೆ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎನ್ನಲಾಗಿದೆ.
ನಗರದ ಅಶೋಕ ವಾರ್ಡ್‌ನಲ್ಲಿ ಕಿರಿದಾದ ರಸ್ತೆ ಇದ್ದು, ವಾಹನ ಸಂಚಾರಕ್ಕೆ ಹರಸಾಹಸಪಡಬೇಕಿದೆ. ಇಂತಹ ರಸ್ತೆ ಪಕ್ಕವೇ ಕಂಬ ಹಾಕಿದ್ದರಿಂದ ನಿವಾಸಿಗಳು ತಕರಾರು ತೆಗೆದಿದ್ದಾರೆ. ಬೇಡವೆಂದರೂ ಗುತ್ತಿಗೆದಾರರು ಕಂಬ ಹಾಕಿದ್ದಾರೆ. ಒಂದಕ್ಕೊಂದು ಕಂಬಕ್ಕೆ ಸಪೋರ್ಟ್ ನೀಡಲು ಖಾಸಗಿ ವ್ಯಕ್ತಿಗಳ ಖಾಲಿ ಜಾಗದಲ್ಲಿ ಕಂಬ ಹಾಕಿದ್ದಾರೆ. ಹೊಸದಾಗಿ ಹಾಕಿದ ಕೇಬಲ್ ಗುಣಮಟ್ಟದ್ದಿಲ್ಲ. ಮೂರು ವರ್ಷ ಬಾಳಿಕೆ ಬರುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿಗಳಿಂದಲೇ ಆರೋಪಗಳು ಕೇಳಿಬರುತ್ತಿವೆ.
ಮರಗಳು ಬಲಿ: ಐಪಿಡಿಎಸ್ ಯೋಜನೆಯಡಿ ಕೇಬಲ್, ವಿದ್ಯುತ್ ಕಂಬ, ಟಿಸಿ ಅಳವಡಿಕೆಗೆ ಅಲ್ಲಲ್ಲಿ ಬೆಳೆದ ಮರಗಳನ್ನು ಕಡಿಯಲಾಗಿದೆ. ಗುತ್ತಿಗೆದಾರರು ಅವೈಜ್ಞಾನಿಕವಾಗಿ ಟಿಸಿ, ವಿದ್ಯುತ್ ಕಂಬ, ಎಲ್ಟಿ ಕೇಬಲ್ ಅಳವಡಿಸುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಮೌನ ವಹಿಸಿದ್ದು ಅನುಮಾನಕ್ಕೆಡೆ ಮಾಡಿದೆ.
ಡಿಜಿಟಲ್ ಮೀಟರ್: ಇನ್ನು ಮನೆಗಳಿಗೆ ಹೊಸದಾಗಿ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದೆ. ಡಿಜಿಟಲ್ ಮೀಟರ್ ಅಳವಡಿಸಿದ ಮನೆಗಳವರಿಗೆ ಹೆಚ್ಚಿನ ಬಿಲ್ ಬರುತ್ತಿದೆ ಎಂಬ ದೂರುಗಳು ಗ್ರಾಹಕರಿಂದ ಕೇಳಿಬರುತ್ತಿವೆ. ಜೆಸ್ಕಾಂ ಅಧಿಕಾರಿಗಳು ಮೀಟರ್ ಅಳವಡಿಕೆ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಕರವೇ ಮುಖಂಡ ಮಲ್ಲಿಕಾರ್ಜುನ.