Advertisement

ವಿದ್ಯುತ್‌ ಪ್ರಸರಣ ಜಾಲ: ಹೈಟೆಕ್‌ ಯೋಜನೆ

09:05 AM Feb 10, 2018 | Team Udayavani |

ಕಾಸರಗೋಡು: ವಿದ್ಯುತ್‌ ಉತ್ಪಾದನೆ, ಪೂರೈಕೆ, ವಿತರಣೆ ಜಾಲವನ್ನು 2022ರ ಹೊತ್ತಿಗೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೇರಿಸಲು ವಿದ್ಯುತ್‌ ಮಂಡಳಿಯು ತೀರ್ಮಾನಿಸಿದ ಹಿನ್ನೆಲೆಯಲ್ಲಿ  ಕಾಸರಗೋಡು ಜಿಲ್ಲೆಯಲ್ಲೂ  ಅದರ ಕಾರ್ಯಚಟುವಟಿಕೆ ಆರಂಭಗೊಂಡಿದೆ. ಕಾಸರಗೋಡು ಎಲೆಕ್ಟ್ರಿಕಲ್‌ ಸರ್ಕಲ್‌ ಡೆಪ್ಯೂಟಿ ಚೀಫ್‌ ಎಂಜಿನಿಯರ್‌ ಅವರ ನೇತೃತ್ವದಲ್ಲಿ ಹೊಸದಾಗಿ ರಚಿಸಲಾದ ಪ್ರಾಜೆಕ್ಟ್  ಮೆನೇಜ್‌ಮೆಂಟ್‌ ಘಟಕದ ಆಶ್ರಯದಲ್ಲಿ  ಈ ಸಂಬಂಧ ಯೋಜನೆ ತಯಾರಿಸಲಾಗುತ್ತಿದೆ. ಎಲೆಕ್ಟ್ರಿಕಲ್‌ ಸರ್ಕಲ್‌ನ ಓರ್ವ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಹಾಗೂ ಕಾಸರಗೋಡು, ಕಾಂಞಂಗಾಡು ಡಿವಿಶನ್‌ಗಳ ತಲಾ ಒಬ್ಬ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ರನ್ನು ಮತ್ತು ಸದಸ್ಯರನ್ನು ಒಳಗೊಂಡ ಪ್ರಾಜೆಕ್ಟ್  ಮೆನೇಜ್‌ಮೆಂಟ್‌ ಘಟಕ ರಚಿಸಲಾಗಿದೆ.

Advertisement

ವಿವಿಧ ಸಬ್‌ಸ್ಟೇಶನ್‌ಗಳಿಂದ ಬರುವ ಫೀಡರ್‌ಗಳನ್ನು  ಪರಸ್ಪರ ಜೋಡಿಸಿ ರಿಂಗ್‌ಮೈನ್‌ ವ್ಯವಸ್ಥೆಯನ್ನು  ಕಲ್ಪಿಸಿ ವಿದ್ಯುತ್‌ ಮೊಟಕು ಹೆಚ್ಚಾಗಿ ಅನುಭವಕ್ಕೆ ಬರುವ ಸ್ಥಳಗಳ ಲೈನ್‌ಗಳನ್ನು ಅಗತ್ಯವಿದ್ದರೆ ಬದಲಿಸಿ ಸ್ಥಾಪಿಸಲಾಗುವುದು. ಅಗತ್ಯದ ಸ್ಥಳಗಳಲ್ಲಿ  ಎಬಿಸಿ ಕವರ್ಡ್‌ ಕಂಡಕ್ಟರ್‌, ಭೂಗರ್ಭ ಕೇಬಲ್‌ ಮೊದಲಾದ ನೂತನ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಸಬ್‌ ಸ್ಟೇಶನ್‌ಗಳ ಮೂಲಕ ಹೆಚ್ಚಿನ 11 ಕೆವಿ ಫೀಡರ್‌ಗಳನ್ನು ಸ್ಥಾಪಿಸಲಾಗುವುದು. ಹಳೆಯದಾದ ಹಾಗೂ ಸಾಮರ್ಥ್ಯ ಕಡಿಮೆಯಾದ ವಿದ್ಯುತ್‌ ತಂತಿಗಳನ್ನು  ಬದಲಿಸಿ ಸ್ಥಾಪಿಸಲಾಗುವುದು. ಫೀಡರ್‌ಗಳ ಲೋಡ್‌ಗಳನ್ನು  ನಿಯಂತ್ರಿಸುವುದರ ಮೂಲಕ ವಿದ್ಯುತ್‌ ವಿತರಣೆಯ ಅಡೆತಡೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ.

ಟ್ರಾನ್ಸ್‌ಫಾರ್ಮರ್‌ ಸ್ಟೇಶನ್‌ಗಳನ್ನು ನವೀಕರಿಸಿ ಸ್ಟಾಂಡಡೈìಸ್‌ ಮಾಡುವುದು, ಲೋಡ್‌ ಬ್ಯಾಲನ್ಸ್‌  ಮಾಡುವುದು ಇದರ ಅಂಗವಾಗಿ ನಡೆಯಲಿದೆ. ಎಲ್‌ಟಿ ನೆಟ್‌ವರ್ಕ್‌ ಚುರುಕು ಗೊಳಿಸುವುದರ ಅಂಗವಾಗಿ ಈಗಿರುವ ಸಿಂಗಲ್‌ ಫೇಸ್‌ಲೈನ್‌ಗಳನ್ನು ತ್ರೀ ಫೇಸ್‌ ಲೈನ್‌ಗಳಾಗಿ ಮಾರ್ಪಾಡುಗೊಳಿಸಲಾಗುವುದು. ಯೋಜನೆಯ ಅಂಗವಾಗಿ ಹಳೆಯದಾದ ಹಾಗೂ ಸಾಮರ್ಥ್ಯ ಕಡಿಮೆಯಾದ ತಂತಿಗಳನ್ನು  ಬದಲಾಯಿಸಲು ನಿರ್ಧರಿಸಲಾಗಿದೆ.
ಈ ಎಲ್ಲ  ಕಾಮಗಾರಿಗಳನ್ನು  ಸಾಕಾರಗೊಳಿಸುವುದೊಂದಿಗೆ ವಿದ್ಯುತ್‌ ಪೂರೈಕೆ ವಲಯದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಲು, ವಿದ್ಯುತ್‌ ವಿತರಣೆ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ. 

ಈ ಯೋಜನೆಯನ್ನು ತಯಾರಿಸಲು ಕಡಿಮೆ ವೋಲ್ಟೇಜ್‌ ಇರುವ ಹಾಗೂ ಹೆಚ್ಚಿನ ವಿದ್ಯುತ್‌ ಮೊಟಕು ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳ ಕುರಿತಾದ ಮಾಹಿತಿಗಳನ್ನು  ಆಯಾ ಸೆಕ್ಷನ್‌ ಕಚೇರಿಗಳಲ್ಲಿ  ಸ್ವೀಕರಿಸಲಾಗುವುದು. ವಿದ್ಯುತ್‌ ಮೊಟಕು, ವೋಲ್ಟೇಜ್‌ ಕೊರತೆ ಇತ್ಯಾದಿ ವಾಣಿಜ್ಯ ಕ್ಷೇತ್ರದಲ್ಲಿ  ಮಾತ್ರವಲ್ಲದೆ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೂ ಬಾಧಕವಾಗುತ್ತಿದೆ. ಇದನ್ನೆಲ್ಲಾ  ಮನಗಂಡು ವಿದ್ಯುತ್‌ ವಲಯವನ್ನು ಜಾಗತಿಕ ಶ್ರೇಣಿಗೇರಿಸಲು ಹಾಗೂ ಈ ಮೂಲಕ ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿದ್ಯುತ್‌ ಇಲಾಖೆಯು ಯೋಜನೆ ಹಾಕಿಕೊಂಡಿದೆ.

2022ರ ಬಳಿಕ ನಿರಂತರ ವಿದ್ಯುತ್‌ : ಮಳೆಗಾಲ, ಚಳಿಗಾಲ ಮತ್ತು  ಬೇಸಿಗೆಕಾಲ ಎನ್ನದೆ ವರ್ಷಪೂರ್ತಿ ನಿರಂತರ ವಿದ್ಯುತ್‌ ಮೊಟಕು, ವೋಲ್ಟೇಜ್‌ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡಿನ ಜನತೆಗೆ ಇನ್ನು ನೆಮ್ಮದಿಯಿಂದ ಉಸಿರಾಡಬಹುದು. 2022ರಲ್ಲಿ ವಿದ್ಯುತ್‌ ವಲಯವು ಜಾಗತಿಕ ಗುಣಮಟ್ಟಕ್ಕೇರಲಿದೆ. ಜಿಲ್ಲೆಯ ನಗರ ಪ್ರದೇಶಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಕೈಕೊಡುವುದು ಸಾಮಾನ್ಯವಾಗಿದೆ. ಬೇಸಿಗೆಕಾಲದಲ್ಲಿ  ಉಷ್ಣಾಂಶ ಹೆಚ್ಚಿರುವ ಈ ಜಿಲ್ಲೆಯಲ್ಲಿ  ವಿದ್ಯುತ್‌ ಮೊಟಕುಗೊಳ್ಳುವುದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಗಾಳಿಯಿಂದಾಗಿ ವಿದ್ಯುತ್‌ ಸಮಸ್ಯೆ ಎದುರಾಗುತ್ತಿದ್ದು, ಐದಾರು ದಿನಗಳ ಕಾಲ ವಿದ್ಯುತ್‌ ಸ್ಥಗಿತಗೊಳ್ಳುವುದು ಸಾಮಾನ್ಯ ಎನಿಸಿಬಿಟ್ಟಿದೆ. ಇದಕ್ಕೆಲ್ಲಾ 2022ರ ವೇಳೆಗೆ ಪರಿಹಾರ ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

Advertisement

ವಿತರಣಾ ಕ್ಷೇತ್ರವನ್ನು ಚುರುಕುಗೊಳಿಸಿ ಯಾವುದೇ ಅಡೆತಡೆಗಳಿಲ್ಲದೆ, ಗುಣಮಟ್ಟದ, ಸುರಕ್ಷಿತವಾದ ವಿದ್ಯುತ್ತನ್ನು ಸಾಧ್ಯವಾದಷ್ಟು ಮಿತದರದಲ್ಲಿ ಬಳಕೆದಾರರಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಈಗಿರುವ ಎಚ್‌ಟಿ ಲೈನ್‌ಗಳ ಭೂಶಾಸ್ತ್ರ  ಪರವಾದ ಮ್ಯಾಪಿಂಗ್‌ ಪ್ರಕ್ರಿಯೆ ಆರಂಭಗೊಂಡಿದೆ. ವೋಲ್ಟೇಜ್‌ ಕಡಿಮೆಯಾದ, ವಿದ್ಯುತ್‌ ಅಡೆತಡೆಗಳು ಹೆಚ್ಚಿರುವ ಪ್ರದೇಶಗಳನ್ನು ಪತ್ತೆಹಚ್ಚುವ ಸಮೀಕ್ಷೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next