Advertisement

Bore well ನೀರು ತುಂಬಲು ಹೋದ ಯುವತಿಗೆ ವಿದ್ಯುತ್ ಶಾಕ್: ಚಿಂತಾಜನಕ

06:57 PM Apr 06, 2024 | Team Udayavani |

ರಬಕವಿ-ಬನಹಟ್ಟಿ : ಬನಹಟ್ಟಿ ನಗರದ ಮುಖ್ಯರಸ್ತೆಯಲ್ಲಿನ ವಿಟ್ಠಲಮಂದಿರ ಬಳಿಯ ನಗರಸಭೆಯ ಬೋರವೆಲ್‌ನಿಂದ ಅಂಗಡಿಗೆ ನೀರು ತರಹೋದ ಯುವತಿಗೆ ವಿದ್ಯುತ್ ಆಘಾತಕ್ಕೀಡಾದ ಘಟನೆ ಶನಿವಾರ ನಡೆದಿದೆ.

Advertisement

ಬನಹಟ್ಟಿಯ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಮಪುರ ನಿವಾಸಿ ಶೃತಿ ಹಾಸಿಲಕರ(24) ನೀರು ತರಲೆಂದು ಪಕ್ಕದ ಬೋರವೆಲ್‌ನತ್ತ ತೆರಳಿ, ಗುಂಡಿ ಒತ್ತುತ್ತಿದ್ದಂತೆಯೇ ವಿದ್ಯುತ್ ಸ್ಪರ್ಶದಿಂದ ತೀವೃ ಆಘಾತಗೊಂಡು ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ.

ದಾರಿಹೋಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಪರಿಸ್ಥಿತಿ ಚಿಂತಾಜನಕವಾಗಿದ್ದು, ಪರೀಕ್ಷೆ ನಂತರ ಸ್ಥಿತಿಗತಿಯ ಬಗ್ಗೆ ತಿಳಿಯುತ್ತದೆಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸಾ ವೆಚ್ಚವನ್ನು ನಗರಸಭೆ ವತಿಯಿಂದ ಪಾವತಿಸಲಾಗುತ್ತದೆಂದು ಪೌರಾಯುಕ್ತರು ತಿಳಿಸಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

ಪ್ರಮುಖ ಮಾರುಕಟ್ಟೆ ಮತ್ತು ಜನವಸತಿ ಪ್ರದೇಶದಲ್ಲಿರುವ ಕೊಳವೆಭಾವಿಯಲ್ಲಿನ ವೈರ್‌ಗಳು ಕಳ್ಳತನವಾಗಿದ್ದು, ಸಂಪರ್ಕ ಬೋರ್ಡ್ ಅತೀ ಕೆಳಗಡೆ ಇರುವುದರಿಂದ ಚಿಕ್ಕ ಮಕ್ಕಳಿಗೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಬೋರ್ಡ್ ಗೆ ವಿದ್ಯುತ್ ನಿರೋಧಕ ವ್ಯವಸ್ಥೆಯಿಲ್ಲ. ವಾರ್ಡ್ ಸದಸ್ಯ ಪ್ರಭಾಕರ ಮೊಳೇದ ಮತ್ತು ನಗರಸಭೆ ಸಿಬಂದಿ ಬಂದ ಕೂಡಲೇ ಸಾರ್ವಜನಿಕರು ವಿದ್ಯುತ್ ಸಂಪರ್ಕದಲ್ಲಿನ ದೋಷಗಳ ಕುರಿತಾಗಿ ತರಾಟೆಗೆ ತೆಗೆದುಕೊಂಡರು.

ಜನತೆಗೆ ಜೀವಸೆಲೆಯಾಗಿದ್ದ ಬೋರವೆಲ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಬೋರ್ಡ್ ದುರಸ್ತಿಗಾಗಿ ನಗರಸಭೆ ಸಿಬಂದಿ ವಶಕ್ಕೆ ಪಡೆದಿದ್ದಾರೆ. ವಸತಿ ಮತ್ತು ಮಾರುಕಟ್ಟೆ ಪ್ರದೇಶದ ಈ ಬೋರ್‌ನಿಂದ ಜನತೆಗೆ ನೀರಿನ ಬವಣೆ ತಪ್ಪಿದ್ದು, ಬೋರ್ಡ್ನಲ್ಲಿನ ದೋಷ ಮಾತ್ರ ಸಿಬಂದಿ ಸರಿಪಡಿಸಿರಲಿಲ್ಲವಾದ್ದರಿಂದ ಇಂಥ ಅನಾಹುತ ನಡೆದಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸ್ಥಳೀಯರು ನಗರಸಭೆ ವಿರುದ್ಧ ಹರಿಹಾಯ್ದರು.

ಅನೇಕ ಕಡೆಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಬೇಸಿಗೆ ದಿನಗಳ ಕಾರಣ ಬಹುತೇಕ ಮಹಿಳೆಯರು ನೀರಿಗಾಗಿ ಬೀದಿಗೆ ಬೀಳುವದು ಸಹಜ. ಅನಾಹುತಗಳಿಗೆ ಅವಕಾಶ ನೀಡದೆ, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸೋಮನಾಥ ಗೊಂಬಿ, ರವಿ ಸಂಪಗಾAವಿ, ರಾಜು ಕುಲಕರ್ಣಿ, ರಾಜು ಬಡಿಗೇರ, ಮೋಹನ ಪತ್ತಾರ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಭೇಟಿ

ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ನಗರಸಭಾ ಪೌರಾಯುಕ್ತ ಜಗದೀಶ ಈಟಿ, ಸದಸ್ಯ ಪ್ರಭಾಕರ ಮೊಳೇದ ಸೇರಿದಂತೆ ಅನೇಕ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ಭೀಕರ ಬರದ ದಶಕದ ಹಿಂದಿನ ಕಾಲದಲ್ಲಿ ಜನತೆಗೆ ನೀರೊದಗಿಸುವತ್ತ ಬಂದಿರುವ ಬೋರ್‌ವೆಲ್ ಈಗಲೂ ನೀರಿನ ಬವಣೆ ತಪ್ಪಿಸಿದೆ. ನಮ್ಮ ಸಿಬ್ಬಂದಿ ವಿದ್ಯುತ್ ಸಂಪರ್ಕ ಹೊಂದಿದ ಬೋರ್ಡ್ನ್ನು ಕೊಂಚ ಎತ್ತರದಲ್ಲಿ ಅಳವಡಿಸಬೇಕೆಂದು ಸೂಚಿಸಿದ್ದೇನೆ. ಸಾರ್ವಜನಿಕರು ಜವಾಬ್ದಾರಿಯಿಂದ ಮತ್ತು ಎಚ್ಚರಿಕೆಯಿಂದ ಬಟನ್ ಬಳಸಬೇಕು. ಮಾನವೀಯತೆ ಹಿನ್ನೆಲೆಯಲ್ಲಿ ಬಡಕುಟುಂಬದ ಶೃತಿಯವರ ವೈದ್ಯಕೀಯ ವೆಚ್ಚವನ್ನು ನಗರಸಭೆ ಭರಣಾ ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜಗದೀಶ ಈಟಿ ತಿಳಿಸಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಪ್ರದೇಶದ ನಿವಾಸಿಗಳ ಅನುಕೂಲಕ್ಕಾಗಿ ಕೊರೆಸಿದ ಬೋರ್ ವೆಲ್ ನಿಂದ ನಮಗೆಲ್ಲ ಪ್ರಯೋಜನವಾಗಿದೆ. ಆದರೆ ಈ ತಿಂಗಳಲ್ಲೇ ಎರಡು ಬಾರಿ ದುರಸ್ತಿಗೊಂಡ ಕೊಳವೆಬಾವಿಸೂಕ್ತ ನಿರ್ವಹಣೆ ಮತ್ತು ವೈರ್, ಬಟನ್‌ಗಳನ್ನು ವಿದ್ಯುತ್ ನಿರೋಧಕ ರೀತಿಯಲ್ಲಿ ಬಳಸದ ಕಾರಣ ಪ್ರತಿ ಬಾರಿ ನಮಗೆ ವಿದ್ಯುತ್ ಪ್ರವಹಿಸುವ ಅನುಭವ ಆಗುತ್ತಿತ್ತು. ಹಲವಾರು ಬಾರಿ ಸಿಬಂದಿ ಮತ್ತು ಸದಸ್ಯರಿಗೆ ಸರಿಪಡಿಸಲು ಕೋರಿದ್ದರೂ ಆಗಿರಲಿಲ್ಲ. ಇಂಥ ಘಟನೆ ಮರುಕಳಿಸದಂತೆ ಮತ್ತು ಬಳಕೆದಾರರ ಹಿತ ಕಾಯುವತ್ತ ನಗರಸಭೆ ಕೆಲಸ ನಿರ್ವಹಿಸಿ ಹೊಸ ಪೆಟ್ಟಿಗೆಯನ್ನು ಅಳವಡಿಸಬೇಕು ಎಂದು ಬನಹಟ್ಟಿ ಹಿರಿಯ ನಾಗರಿಕ ಮಹಾಶಾಂತ ಶೆಟ್ಟಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next