Advertisement

ವಿದ್ಯುತ್‌ ಶಾಕ್‌: ಒಂದೇ ಕುಟುಂಬದ ಮೂವರ ಸಾವು

09:19 PM Sep 11, 2019 | Lakshmi GovindaRaju |

ಚನ್ನರಾಯಪಟ್ಟಣ: ವಿದ್ಯುತ್‌ ಶಾಕ್‌ನಿಂದ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ತಾಲೂಕಿನ ಬಾಗೂರು ಹೋಬಳಿ ಅಗರಸರಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ತಾಯಿ ಭಾಗ್ಯಮ್ಮ(54), ಪರಮೇಶ(28), ಪುತ್ರಿ ದಾಕ್ಷಾಯಣಿ (26) ಮೃತ ದುರ್ದೈವಿಗಳು ದಾಕ್ಷಾಯಣಿ ಅವರ ಪುತ್ರಿ ಹಂಸಶ್ರೀ(2) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಮೃತ್ಯುವಾಗಿ ಬಂದ ವಿದ್ಯುತ್‌ ತಂತಿ: ಮನೆ ಮುಂಭಾಗ ಕಟ್ಟಿದ ತಂತಿಯ ಮೇಲೆ ಬಟ್ಟೆ ಒಣಗಿ ಹಾಕಲು ಭಾಗಮ್ಯ ಮುಂದಾಗಿದ್ದಾರೆ. ಈ ವೇಳೆ ತಂತಿಗೆ ವಿದ್ಯುತ್‌ ವೈರ್‌ ತಾಗಿ ತಂತಿಯಲ್ಲಿ ವಿದ್ಯುತ್‌ ಸಂಚಾರ ಆಗುತ್ತಿದ್ದು, ಭಾಗ್ಯಮ್ಮ ಅವರನ್ನು ತಂತಿ ಹಿಡಿದುಕೊಂಡಿದೆ. ಈಕೆ ಜೋರಾಗಿ ಕಿರುಚಿದ್ದರಿಂದ ಕೊಟ್ಟಿಗೆ ಮನೆ ಒಳಗೆ ಇದ್ದ ಪುತ್ರ ಪರಮೇಶ ಕೂಡಲೆ ಹೊರಗೆ ಬಂದು ತನ್ನ ತಾಯಿಯನ್ನು ಎಳೆಯಲು ಹೋಗಿದ್ದಾರೆ ಆತನ್ನು ವಿದ್ಯುತ್‌ ಹಿಡಿದುಕೊಂಡಿದೆ.

ತಾಯಿ ಹಾಗೂ ಸಹೋದರ ಇಬ್ಬರಿಗೂ ವಿದ್ಯುತ್‌ ಶಾಕ್‌ ಹೊಡೆಯುತ್ತಿದ್ದರಿಂದ ಇವರನ್ನು ಬಚಾವ್‌ ಮಾಡಲು ಹೋದ ದಾಕ್ಷಾಯಣಿಗೂ ವಿದ್ಯುತ್‌ ಹೊಡೆದಿದೆ. ಕೂಡಲೆ ಮನೆಯಿಂದ ಹೊರಗೆ ಬಂದ ಎರಡು ವರ್ಷದ ಕಂದಮ್ಮ ತನ್ನ ತಾಯಿನ್ನು ತಬ್ಬಿಕೊಂಡಿದೆ ಮಗುವಿಗೂ ವಿದ್ಯುತ್‌ ತಾಗಿ ತೀರ್ವವಾಗಿ ಗಾಯಗೊಂದಿದೆ ಕೂಡಲೇ ಗ್ರಾಮಸ್ಥರು ಮಗುವನ್ನು ಅಸ್ಪತ್ರೆಗೆ ದಾಖಲು ಮಾಡಿದ್ದಾರೆ.

ತಡವಾಗಿ ಆಗಮಿಸಿದ ಸೆಸ್ಕ್ ಅಧಿಕಾರಿಗಳು: ಇಷ್ಟೆಲ್ಲಾ ಅವಾಂತರ ನಡೆಯುವಾಗ ಮನೆ ಮುಂದಿನ ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ಗ್ರಾಮಸ್ಥರು ತಕ್ಷಣ ಮರದ ದೊಣ್ಣೆಯಿಂದ ವಿದ್ಯುತ್‌ ತಾಗುತ್ತಿದ್ದ ವೈಯರ್‌ ಬೇರ್ಪಡಿಸಿದ್ದಾರೆ. ಅಷ್ಟರಲ್ಲಿ ಮೂರು ಮಂದಿಯ ಪ್ರಾಣ ಪಕ್ಷಿ ಹಾರಿಹೊಗಿತ್ತು, ಕೂಡಲೇ ಸೆಸ್ಕ್ ಅಧಿಕಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವುದರೊಳಗೆ ಮೂರು ಮಂದಿ ಮೃತ ಪಟ್ಟಿದ್ದರು.

ದಾಕ್ಷಾಯಣಿಯನ್ನು ನುಗ್ಗೇಹಳ್ಳಿ ಹೋಬಳಿ ಹತ್ತೀಹಳ್ಳಿ ಗ್ರಾಮಕ್ಕೆ ವಿವಾಹ ಮಾಡಿಕೊಟ್ಟಿದ್ದರು.ಕೆಲ ದಿವಸಗಳಿಂದ ದಾಕ್ಷಾಯಣಿ ತನ್ನ ತಾಯಿ ಮನೆಯಲ್ಲಿ ಮಗುವಿನೊಂದಿಗೆ ವಾಸವಿದ್ದರು,ಭಾಗ್ಯಮ್ಮ ಕುಟುಂಬದ ಎಲ್ಲಾ ಸದಸ್ಯರೂ ಮೃತ ಪಟ್ಟಿದ್ದಾರೆ. ಆದರೆ ಎರಡು ವರ್ಷದ ಹಸುಗೂರು ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಘಟನೆ ನಡೆದ ಗ್ರಾಮಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ನಿಲಾಸ್‌ ಸಪೆಟ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಶಾಸಕ ಸಿ.ಎನ್‌.ಬಾಲಕೃಷ್ಣ ಶವಾಗಾರಕ್ಕೆ ಭೇಟಿ ನೀಡಿದ ನಂತರ ಮಾತನಾಡಿ, ಸಾರ್ವಜನಿಕರು ನೀರು, ವಿದ್ಯುತ್‌ ಹಾಗೂ ಬೆಂಕಿ ಜೊತೆ ಸರಸ ಆಡುವುದು ನಿಲ್ಲಿಸಬೇಕು. ಬೇಜವಾಬ್ದಾರಿಯಿಂದ ವರ್ತಿಸುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ, ವಿದ್ಯುತ್‌ ಅಪಾಯಕ್ಕೆ ತುತ್ತಾದಾಗ ಅವರನ್ನು ಉಳಿಸುವ ವೇಳೆ ಗಾಬರಿಯಲ್ಲಿ ನಾವು ಸಾವಿಗೆ ಕೊರಳು ಕೊಡಬೇಕಾಗುತ್ತದೆ. ಯಾವ ವ್ಯಕ್ತಿಗೆ ವಿದ್ಯುತ್‌ ತಾಗಿರುತ್ತದೆ ಅವರನ್ನು ಬರಿಗೈನಲ್ಲಿ ಮುಟ್ಟುವ ಬದಲಾಗಿ ಒಣಗಿದ ಮರದ ಕೋಲಿನ ಸಹಾಯ ಪಡೆದಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಹೇಳಿದರು. ಗ್ರಾಮಕ್ಕೆ ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಅಂಬಿಕಾ, ಡಿವೈಎಸ್‌ಪಿ ಲಕ್ಷ್ಮೇಗೌಡ, ಜಿಪಂ ಸದಸ್ಯೆ ಶ್ವೇತಾ ಮೊದಲಾದವರು ಭೇಟಿ ನೀಡಿದರು.

ಪರಿಹಾರ – ಶಾಸಕರ ಭರವಸೆ: ಶಾಸಕ ಸಿ.ಎನ್‌.ಬಾಲಕೃಷ್ಣ ಶವಾಗಾರಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಘಟನೆಯಿಂದ ಮೃತ ಪಟ್ಟಿರುವ ಬಗ್ಗೆ ಉಪಮುಖ್ಯ ಮಂತ್ರಿ ಅಶ್ವತ್ಥ ನಾರಾಯಣ ಅವರ ಗಮನಕ್ಕೆ ತರಲಾಗಿದೆ ವಿದ್ಯುತ್‌ ಇಲಾಖೆಯಿಂದ ಪರಿಹಾರ ಕೊಡಿಸಲಾಗುವುದು. ಸೆಸ್ಕ್ ಅಧಿಕಾರಿಗಳೊಂದಿಗೆ ಮಾತನಾಡಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಗುವಿನ ಚಿಕಿತ್ಸೆಗೆ ಹಣ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಮನೆಗೆ ವಿದ್ಯುತ್‌ ಸರಬರಾಜು ಆಗುವ ವೈರ್‌ಗೆ ಬಟ್ಟೆ ಒಣಗಿ ಹಾಕುವ ತಂತಿ ತಾಗಿರುವುದರಿಂದ ವಿದ್ಯುತ್‌ ಶಾಕ್‌ ಉಂಟಾಗಿದೆ. ಇದರಿಂದ ಒಂದೇ ಕುಟುಂಬದ ಮೂರು ಮಂದಿ ಮೃತ ಪಡುವಂತಾಗಿದೆ ಈ ಘಟನೆ ಬಹಳ ನೋವು ತಂದಿದೆ.
-ರಾಮ್‌ ನಿವಾಸ್‌ ಸೆಪೆಟ್‌, ಜಿಲ್ಲಾ ರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next