Advertisement

ಕರಾವಳಿಯ ರಸ್ತೆಗೂ ಎಲೆಕ್ಟ್ರಿಕ್‌ ಬಸ್‌; ಮಂಗಳೂರಿನಿಂದ ಭಟ್ಕಳ, ಕಾಸರಗೋಡಿಗೆ ಚಿಂತನೆ

11:37 PM Oct 30, 2022 | Team Udayavani |

ಮಂಗಳೂರು: ಬೆಂಗಳೂರಿನಂತೆ ಕರಾವಳಿಯಲ್ಲೂ ಎಲೆಕ್ಟ್ರಿಕ್‌ ಬಸ್‌ ಸಂಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಬಿಎಂಟಿಸಿ ಬಳಿಕ ಈಗ ಕೆಎಸ್ಸಾರ್ಟಿಸಿಯೂ ಮೊದಲ ಹಂತದಲ್ಲಿ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಮುಂದಾಗಿದ್ದು, ಕೆಲವನ್ನು ಕರಾವಳಿಗೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ನವೆಂಬರ್‌ ಅಂತ್ಯಕ್ಕೆ ಕರಾವಳಿಯ ರಸ್ತೆಗಿಳಿಯುವ ನಿರೀಕ್ಷೆ ಇದೆ. ಚಾಸಿ, ಇನ್ನುಳಿದ ರಚನ ವಿನ್ಯಾಸ ಸದ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

Advertisement

ಕರಾವಳಿಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸುವುದಾದರೆ ಮಂಗಳೂರು ವಿಭಾಗದಿಂದ ಈಗಾಗಲೇ ಎರಡು ರೂಟ್‌ಗಳ ಬಗ್ಗೆ ಚಿಂತನೆ ನಡೆಯುತ್ತಿದೆ. ಭಟ್ಕಳದಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಕಾಸರಗೋಡು ರೂಟ್‌ ಪರಿಚಯಿಸುವ ಸಾಧ್ಯತೆ ಇದೆ. ಎಲೆಕ್ಟ್ರಿಕ್‌ ಬಸ್‌ ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 250 ಕಿ.ಮೀ. ಸಂಚರಿಸಬಲ್ಲುದು. ಹೀಗಾಗಿ ಬೆಂಗಳೂರು-ಮಂಗಳೂರು ಮಾರ್ಗವಾಗಿ ಅದರ ಕಾರ್ಯಾಚರಣೆ ಕಷ್ಟ. ಬೆಂಗಳೂರು ಹೊರತುಪಡಿಸಿ ಹಾಸನ ಸೇರಿದಂತೆ ಇತರ ಡಿಪೋಗಳಿಂದಲೂ ಈ ಬಸ್‌ ಕಾರ್ಯಾಚರಣೆ ನಡೆಸುವ ಬಗ್ಗೆಯೂ ಚಿಂತನೆ ಇದೆ.

ಡಿಪೋದಲ್ಲಿ ಇ.ವಿ. ಸ್ಟೇಶನ್‌
ಯಾವೆಲ್ಲ ಡಿಪೋದಿಂದ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ ನಡೆಸಲಾಗುತ್ತದೋ ಅಲ್ಲೆಲ್ಲ ಹಂತ ಹಂತವಾಗಿ ಇ.ವಿ. ಸ್ಟೇಶನ್‌ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ. ಮಂಗಳೂರಿನಲ್ಲಿ ಸದ್ಯ ಎಲೆಕ್ಟ್ರಿಕ್‌ ವಾಹನಗಳಿಗೆಂದು ಮೆಸ್ಕಾಂನಿಂದ ಇ.ವಿ. ಸ್ಟೇಶನ್‌ ನಿರ್ಮಾಣಗೊಂಡಿದೆ. ಇವು ಮಣ್ಣಗುಡ್ಡ, ಜಪ್ಪು ಸೆಕ್ಷನ್‌ ಆಫೀಸ್‌, ಉಳ್ಳಾಲ, ಕಾವೂರು ಸೇರಿದಂತೆ ಜಿಲ್ಲೆಯ ಉಪ ವಿಭಾಗೀಯ ಕಚೇರಿಗಳಲ್ಲಿ ಇವೆ. ಅದೇ ರೀತಿ ಬಿಜೈ ಕಾರ್ಪೊರೆಟ್‌ ಕಚೇರಿಯಲ್ಲಿ ಫಾಸ್ಟ್‌ ಚಾರ್ಜಿಂಗ್‌ ಪಾಯಿಂಟ್‌ ನಿರ್ಮಿಸಲಾಗಿದೆ.

43 ಆಸನ; 1.8 ಕೋಟಿ ರೂ.
ಎಲೆಕ್ಟ್ರಿಕ್‌ ಬಸ್‌ನಲ್ಲಿ 43 ಆಸನಗಳಿರಲಿದ್ದು, ವೋಲ್ವೊ ಮಾದರಿಯಲ್ಲಿ ಪುಷ್‌ಬ್ಯಾಕ್‌, ಹವಾನಿಯಂತ್ರಿತ ವ್ಯವಸ್ಥೆ ಇರಲಿದೆ. ಒಂದು ಬಸ್ಸನ್ನು ದಿನಕ್ಕೆ ಸುಮಾರು 450 ಕಿ.ಮೀ. ವರೆಗೆ ಕಾರ್ಯಾಚರಿಸಲು ನಿರ್ಧರಿಸಲಾಗಿದೆ. ಒಂದು ಬಸ್‌ಗೆ ಸುಮಾರು 1.8 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ಬಸ್‌ಗಳ ನಿರ್ವಹಣೆಯನ್ನು ಒಲೆಕ್ಟ್ರಾ ಸಂಸ್ಥೆಯೇ ಮಾಡಲಿದ್ದು, ಚಾಲಕರನ್ನು ಕೂಡ ನಿಯೋಜಿಸಲಿದೆ. ನಿರ್ವಾಹಕರನ್ನು ಕೆಎಸ್ಸಾರ್ಟಿಸಿ ನಿಯೋಜಿಸುತ್ತದೆ.

ಕೆಎಸ್ಸಾರ್ಟಿಸಿಯು ಮೊದಲನೇ ಹಂತದಲ್ಲಿ 50 ಎಲೆಕ್ಟ್ರಿಕ್‌ ಬಸ್‌ ಖರೀದಿ ಮಾಡಲಿದೆ. ಕೆಲವು ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಮಾಸಾಂತ್ಯಕ್ಕೆ ಬರುವ ನಿರೀಕ್ಷೆ ಇದೆ. ಬಳಿಕ ಬಸ್‌ಗಳ ಹಂಚಿಕೆ ನಡೆಯಲಿದ್ದು, ಕರಾವಳಿಗೂ ಆದ್ಯತೆ ನೀಡುತ್ತೇವೆ.
– ವಿ. ಅನ್ಬುಕುಮಾರ್‌, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

Advertisement

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next