Advertisement

Electric bus: ಚಲಿಸುತ್ತಿದ್ದ ಎಲೆಕ್ಟ್ರಿಕ್‌ ಬಸ್‌ ಮಳೆಯಲ್ಲೇ ಧಗ ಧಗ

11:23 AM Aug 07, 2024 | Team Udayavani |

ಬೆಂಗಳೂರು: ಮಳೆ ನಡುವೆಯೇ ಚಲಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ನಲ್ಲಿ ಮಾರ್ಗ ಮಧ್ಯೆಯೇ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ನಾಗವಾರ-ಹೆಬ್ಟಾಳ ಸರ್ವೀಸ್‌ ರಸ್ತೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆ.ಆರ್‌.ಪುರ ಡಿಪೋಗೆ ಸೇರಿದ ಎಲೆಕ್ಟ್ರಿಕ್‌ ಬಸ್‌ ಸೋಮವಾರ ತಡರಾತ್ರಿ 11.30ರ ಸುಮಾರಿಗೆ ಕೆ.ಆರ್‌.ಪುರದಿಂದ ಗೊರಗುಂಟೆಪಾಳ್ಯ ಕಡೆ ಚಲಿಸುತ್ತಿತ್ತು. ಮಾರ್ಗ ಮಧ್ಯೆ ಅಮೃತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಗವಾರ- ಹೆಬ್ಟಾಳ ಸರ್ವೀಸ್‌ ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ಜತೆಗೆ ರಾತ್ರಿ ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದರಿಂದ ಬಸ್‌ ನ ನಿರ್ವಾಹಕ ಕೂಡಲೇ ಮತ್ತೂಂದು ಬಸ್‌ಗೆ ಪ್ರಯಾಣಿಕರನ್ನು ಹತ್ತಿಸಿ ಕಳುಹಿಸಿದ್ದಾರೆ.

Advertisement

ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ: ಆದರೆ, ಮಳೆ ಪ್ರಮಾಣ ಹೆಚ್ಚಾದಂತೆ ರಸ್ತೆಯಲ್ಲಿ ನೀರಿನ ಹರಿವು ಅಧಿಕವಾಗಿತ್ತು. ಪರಿಣಾಮ ಬಸ್‌ಗೆ ಒಳಭಾಗದಲ್ಲಿ ನೀರು ನುಗ್ಗಿದ್ದು, ಕೆಲ ಕ್ಷಣಗಳಲ್ಲೇ ಬಸ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಬಸ್‌ನ ಚಾಲಕ ಹಾಗೂ ನಿರ್ವಾಹಕ ಹೊರ ಬಂದಿದ್ದಾರೆ. ಬಳಿಕ ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಬಸ್‌ಗೆ ಆವರಿಸಿದ್ದು, ಬಸ್‌ ಸಾರ್ವಜನಿಕವಾಗಿ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಬಸ್‌ ನ ಎಂಜಿನ್‌ಗೆ ಮಳೆ ನೀರು ನುಗ್ಗಿ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

8 ಕಿ.ಮೀ. ಸಂಚಾರ ದಟ್ಟಣೆ: ಬಿಎಂಟಿಸ್‌ ಬಸ್‌ಗೆ ಬೆಂಕಿ ಹೊತ್ತಿಕೊಂಡಿ ದ್ದರಿಂದ ಹೆಬ್ಟಾಳ-ನಾಗವಾಗ ಸರ್ವೀಸ್‌ ರಸ್ತೆಯಲ್ಲಿ ಸುಮಾರು 8 ಕಿಲೋ ಮೀಟರ್‌ ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತಿ. ಇದರಿಂದ 2 ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡುವಂತಾಯಿತು. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next