ಬೆಂಗಳೂರು: 2 ಸ್ಟ್ರೋಕ್ ಆಟೋಗಳನ್ನು ಇನ್ಮುಂದೆ ಗುಜರಿಗೆ ಹಾಕಬೇಕಿಲ್ಲ. ಎಲೆಕ್ಟ್ರಿಕ್ ಬ್ಯಾಟರಿಗಳನ್ನು ಅಳವಡಿಸಿಕೊಂಡರೆ ಸಾಕು. ಇದಕ್ಕೆ ಸರ್ಕಾರದ ಸಬ್ಸಿಡಿ ಕೂಡ ಸಿಗಲಿದೆ. 2 ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ.
ಇದಕ್ಕೆ ಅನುಮತಿ ದೊರಕಿದರೆ, ಇದರಡಿ 2 ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕಲು ಇಷ್ಟವಿಲ್ಲದವರು, ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಸಿಕೊಳ್ಳಬಹುದು. ಇದಕ್ಕೂ 30 ಸಾವಿರ ರೂ. ಸಬ್ಸಿಡಿ ಒದಗಿಸಲಾಗುವುದು ಎಂದು ಸಾರಿಗೆ ಆಯುಕ್ತ ಬಿ. ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಬಂಧ ವಾಹನ ನೀತಿಗೆ ತಿದ್ದುಪಡಿ ತಂದು, ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಸಿಕೊಳ್ಳುವ ಆಟೋಗಳಿಗೂ 30 ಸಾವಿರ ರೂ. ಸಹಾಯಧನಕ್ಕೆ ಅವಕಾಶ ಕಲ್ಪಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಬ್ಯಾಟರಿ ಅಳವಡಿಕೆಗೆ ಸುಮಾರು 1.2 ಲಕ್ಷ ರೂ.ವರೆಗೂ ಖರ್ಚಾಗುತ್ತದೆ. ನಗರದಲ್ಲಿ ಈಗಾಗಲೇ ಎರಡು ಎಲೆಕ್ಟ್ರಿಕ್ ರೆಟ್ರೋ ಫಿಟಿಂಗ್ ಕೇಂದ್ರಗಳು ಇವೆ. ಅಲ್ಲಿ ಈ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
4 ಆರ್‌ಟಿಒಗಳಲ್ಲಿ ವಾಹನ್-4: ಇದಲ್ಲದೆ, ರಾಮನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ “ವಾಹನ್-4′ ವ್ಯವಸ್ಥೆಗೆ ಸ್ಪಂದನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಬರುವ ತಿಂಗಳು ಬೆಂಗಳೂರಿನ ನಾಲ್ಕು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಇದೇ ವೇಳೆ ಬಿ. ದಯಾನಂದ ಮಾಹಿತಿ ನೀಡಿದರು.
ಸೇವೆಯಲ್ಲಿ ವ್ಯತ್ಯಯ:ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ ಮತ್ತು ಕಸ್ತೂರಿನಗರದಲ್ಲಿರುವ ಬೆಂಗಳೂರು ಪೂರ್ವ ಆರ್‌ಟಿಒ ಕಚೇರಿಗಳಲ್ಲಿ ವಾಹನ್-4 ಪರಿಚಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆ. 2ರಿಂದ 24ರವರೆಗೆ ವಿವಿಧ ದಿನಗಳಲ್ಲಿ ಉದ್ದೇಶಿತ ಈ ಆರ್‌ಟಿಒಗಳಲ್ಲಿ ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದರು.
ಚಂದಾಪುರದಲ್ಲಿ ಫೆ. 2ರಿಂದ 6ರವರೆಗೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ 3ರಿಂದ 11, ಯಲಹಂಕದಲ್ಲಿ 16ರಿಂದ 21 ಮತ್ತು ಕಸ್ತೂರಿನಗರದಲ್ಲಿ ಫೆ. 19ರಿಂದ 25ರವರೆಗೆ ಹಣ ಪಾವತಿ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ. ವಾಹನ ಅರ್ಹತಾ ಪ್ರಮಾಣಪತ್ರ, ಪರವಾನಗಿ ದ್ವಿಪ್ರತಿ ಸೇರಿದಂತೆ ಮತ್ತಿತರ ಸೇವೆಗಳು ಲಭ್ಯ ಇರಲಿವೆ. ಸಾರ್ವಜನಿಕರು ಹತ್ತಿರದ ಆರ್‌ಟಿಒಗಳಲ್ಲಿ ಈ ಸೇವೆಗಳನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.
15.93 ಲಕ್ಷ ವಾಹನಗಳ ನೋಂದಣಿ: ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 15,93,974 ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ 11,40,174 ದ್ವಿಚಕ್ರ ವಾಹನಗಳೇ ಆಗಿದೆ. 2017ರ ಜ. 1ರಿಂದ ಡಿಸೆಂಬರ್ ಅಂತ್ಯದವರೆಗೆ 15.93 ಲಕ್ಷ ವಾಹನಗಳು ನೋಂದಣಿಯಾಗಿದ್ದು, 7.77 ಲಕ್ಷ ವಾಹನ ಚಾಲನಾ ಪರವಾನಗಿ ವಿತರಿಸಲಾಗಿದೆ. ಇದರಲ್ಲಿ 4,64,218 ಲಕ್ಷ ದ್ವಿಚಕ್ರ ವಾಹನಗಳ ಚಾಲನಾ ಪರವಾನಗಿ ವಿತರಿಸಲಾಗಿದೆ ಎಂದು ಬಿ. ದಯಾನಂದ ಮಾಹಿತಿ ನೀಡಿದರು.