Advertisement

ಸಾಮೂಹಿಕ ಉಪನಯನದ ಮೇಲೆ ಚುನಾವಣೆ ಆಯೋಗದ ಕೆಂಗಣ್ಣು !

11:04 AM Apr 12, 2018 | Harsha Rao |

ಉಡುಪಿ: ಸಾಮೂಹಿಕ ಉಪನಯನ ಸಮಾರಂಭವೊಂದರ ಮೇಲೆ ಚುನಾವಣಾ ಆಯೋಗದ ಕೆಂಗಣ್ಣು ಬಿದ್ದ ಪರಿಣಾಮ ಇತ್ತೀಚೆಗೆ ಉಪನಯನದ ಮನೆಗೆ ಪೊಲೀಸ್‌ ಪಹರೆ ಹಾಕಿ ದಾಳಿ ನಡೆಸಲಾಗಿತ್ತು. ಈಗ ಒಂದು ಹೆಜ್ಜೆ ಮುಂದಡಿ ಇಟ್ಟ ಆಯೋಗ, ಉಪನಯನ ಸಮಾರಂಭದಲ್ಲಿ ಆಯೋಜಿಸಲಾದ ರಿಯಾಯಿತಿ ದರದ ಸಾವಯವ ಸಂತೆ, ಪುಸ್ತಕದ ಮಳಿಗೆಯನ್ನು ರದ್ದುಗೊಳಿಸಿದೆ.

Advertisement

ಎ. 22: ವಟುಗಳು 22
ಕಡಿಯಾಳಿ ಹಿ.ಪ್ರಾ. ಶಾಲಾ ಆವರಣದಲ್ಲಿ ಕನ್ಸಲ್ಟಿಂಗ್‌ ಎಂಜಿನಿಯರ್‌ ರಾಘವೇಂದ್ರ ಕಿಣಿ ಅವರು ಸಾಮೂಹಿಕ ಉಪನಯನವನ್ನು ಆಯೋಜಿಸಿದ್ದರು. ಇದೇ ಸಮಾರಂಭದಲ್ಲಿ ಅವರ ಮಗನ ಉಪನಯನವೂ ನಡೆಯುವುದಿತ್ತು. ಎ. 22ರಂದು ನಿಗದಿಯಾದ ಉಪನಯನದಲ್ಲಿ ವಿವಿಧ ಸಮುದಾಯದ ಒಟ್ಟು  22 ವಟುಗಳಿಗೆ ಉಪನಯನ ನಡೆಯುವುದಿತ್ತು. ಎರಡು ತಿಂಗಳು ಮೊದಲೇ ನಿಗದಿಯಾದ ಕಾರ್ಯಕ್ರಮದಲ್ಲಿ ಸಾವಯವ ಸಂತೆ, ಪುಸ್ತಕದ ಮಳಿಗೆಯನ್ನು ನಿಗದಿಗೊಳಿಸಿ ಶೇ. 20 ರಿಯಾಯಿತಿಯನ್ನು ಘೋಷಿಸಲಾಗಿತ್ತು.

2,500 ಚೀಲ !
ಕಳೆದ ವಾರ ಕಿಣಿ ಅವರ ಮನೆಗೆ ದಾಳಿ ನಡೆಸಿದಾಗ ಚುನಾವಣಾಧಿಕಾರಿಗಳಿಗೆ 32 ಸೀರೆಗಳು, ಸಾವಯವ ಸಾಮಗ್ರಿಗಳನ್ನು ಕೊಂಡೊಯ್ಯಲು ಖರೀದಿಸಲಾದ 2,500 ವಸ್ತ್ರದ ಚೀಲಗಳು ಪತ್ತೆಯಾಗಿದ್ದವು. ಕನ್ನಡ ಬಾರದ ಅಧಿಕಾರಿಗಳಿಗೆ ಸಾಮೂಹಿಕ ಉಪನಯನದ ಕನ್ನಡ ಆಮಂತ್ರಣ ಪತ್ರಿಕೆ ಓದಲಾಗದೆ ಅವರಿಗೆ ಮನವರಿಕೆ ಮಾಡಿಸಲು ಕಿಣಿಯವರೂ ಸುಸ್ತಾಗಿದ್ದರು. ಕೊನೆಗೆ ಅದಕ್ಕೆ ಬಿಲ್‌ ಸಿಕ್ಕಿದಾಗ ಕಿಣಿಯವರಿಗೂ ಜೀವಬಂದಂತಾಯಿತು, ಪ್ರಕರಣ ದಾಖಲಾಗಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಕಿಣಿಯವರು,
ಉಪನಯನದ ದಿನ ಆಯೋಜಿಸಲಾದ ಸಾವಯವ ಸಂತೆ, ಪುಸ್ತಕದ ಮೇಳಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು. ಇದೀಗ ಚುನಾವಣಾಧಿಕಾರಿಯವರು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದಾರೆ.

ಯಥಾಸ್ಥಾನಂ ವ್ಯಾಪಾರ!
ಇದೇ ಜಿಲ್ಲಾಧಿಕಾರಿಯವರ ಮುತುವರ್ಜಿಯಿಂದ ದೊಡ್ಡಣಗುಡ್ಡೆಯಲ್ಲಿ ಆರಂಭಗೊಂಡ ಸಾವಯವ ಸಂತೆ ಪ್ರತಿ ರವಿವಾರ ನಡೆಯುತ್ತಿದ್ದು ಎ. 22ರ ರವಿವಾರವೂ ಉಪನಯನದ ಸ್ಥಳದ ಬದಲು ಮೂಲಸ್ಥಳ ದೊಡ್ಡಣಗುಡ್ಡೆ ಸಂತೆಯಲ್ಲಿಯೇ ವ್ಯಾಪಾರ ನಡೆಸುವಂತೆ ಸಾವಯವ ಕೃಷಿಕರಿಗೆ ಕಿಣಿ ಮನವಿ ಮಾಡಲಿದ್ದಾರೆ. ಪುಸ್ತಕದ ಮೇಳ ನಡೆಸಲು ಚಿತ್ತರಂಜನ್‌ ಸರ್ಕಲ್‌ನ ಸೀತಾ ಬುಕ್‌ ಹೌಸ್‌ನವರಿಗೆ ಕೋರಿ ಕೊಂಡಿದ್ದರು. ಈಗ ಅನುಮತಿ ನಿರಾಕರಿಸಿದ ಕಾರಣ ಎಂದಿನಂತೆ ಸೋಮವಾರ ಸೀತಾ ಬುಕ್‌ ಹೌಸ್‌ನಲ್ಲಿಯೇ ಪುಸ್ತಕಗಳನ್ನು ಖರೀದಿಸಬಹುದಾಗಿದೆ. ಇದು ಪೂಜೆಯ ವೇಳೆ ವಿಗ್ರಹಗಳಿಗೆ ದೇವರನ್ನು ಆಹ್ವಾನಿಸಿದ ಬಳಿಕ ಮುಕ್ತಾಯದಲ್ಲಿ “ಯಥಾಸ್ಥಾನಂ ಉದ್ವಾಸಯಾಮಿ’ (ಮೂಲ ಸ್ಥಳಕ್ಕೆ ಕಳುಹಿಸುವುದು) ಎಂದು ಹೇಳುವಂತೆ ಆಗಿದೆ. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಉಪನಯನದ ದಿನದ ಊಟ ಮಾತ್ರ ಸಾವಯವ ಸಾಮಗ್ರಿಗಳಿಂದ ನಡೆಯಲಿದೆ. ಭೋಜನವನ್ನು ಅಲ್ಯೂಮೀನಿಯಂ, ಹಿಂಡೋಲಿಯಂ ಇತ್ಯಾದಿ ಪಾತ್ರೆಗಳಲ್ಲಿ ತಯಾರಿಸದೆ ತಾಮ್ರದ ಪಾತ್ರೆಯಲ್ಲಿಯೇ ತಯಾರಿಸಲಾಗುತ್ತಿದೆ. ಪ್ಲಾಸ್ಟಿಕ್‌ಮುಕ್ತ ವಾತಾವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next