ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಎಸ್‌ಐಟಿ ಮೂಲಕ ಚುನಾವಣ ಬಾಂಡ್ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮತ್ತೆ ಆಗ್ರಹಿಸಿದೆ.
ಯಾರು ಯಾವಾಗ ದೇಣಿಗೆ ನೀಡಿದ್ದಾರೆ, ದಾಳಿ ಬಳಿಕ ಯಾಕೆ ಹಣ ನೀಡಿದ್ದಾರೆ ಎಂಬಿತ್ಯಾದಿ ಮಾಹಿತಿ ಬಹಿರಂಗಗೊಳ್ಳಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಶನಿವಾರ ಮಾತನಾಡಿದ ಕಾಂಗ್ರೆಸ್‌ನ ಜೈರಾಂ ರಮೇಶ್, ಬಿಜೆಪಿಗೆ ಸಂದಾಯವಾದ ದೇಣಿಗೆಯಲ್ಲಿ 4 ನಮೂನೆಗಳಿವೆ. ಪ್ರೀಪೇಯ್ಡ, ಪೋಸ್ಟ್ ಪೇಯ್ಡ, ದಾಳಿ ಬಳಿಕ ಸುಲಿಗೆ ಮತ್ತು ಹಫ್ತಾ ವಸೂಲಿಗಳಾಗಿ ಚುನಾವಣ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ಹರಿದು ಬಂದಿದೆ ಎಂದು ಜೈರಾಂ ಆರೋಪಿಸಿದರು.
ಬಾಂಡ್‌ಗಳ ಹಿಂದೆ ಸದುದ್ದೇಶವಿತ್ತು: ಗಡ್ಕರಿ :
ಚುನಾವಣ ಬಾಂಡ್‌ಗಳನ್ನು ಸರಕಾರವು ಸದುದ್ದೇಶದಿಂದಲೇ ಪರಿಚಯಿಸಿತ್ತು. ನಿಧಿ ಇಲ್ಲದೇ ಪಕ್ಷಗಳನ್ನು ನಡೆಸುವುದು ಅಸಾಧ್ಯ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ವ್ಯವಸ್ಥೆಯಲ್ಲಿ ನ್ಯೂನತೆಗಳಿದ್ದರೆ, ಸುಪ್ರೀಂ ಕೋರ್ಟ್ ಅವುಗಳನ್ನು ಸರಿಪಡಿಸಲು ಸೂಚಿಸಬಹುದಿತ್ತು ಎಂದರು.