Advertisement

ನೀರು ಹರಿಸದಿದ್ದರೇ ಚುನಾವಣೆ ಬಹಿಷ್ಕಾರ

09:48 PM Apr 01, 2019 | Team Udayavani |

ಚಾಮರಾಜನಗರ: ತಾಲೂಕಿನ ಸುವರ್ಣಾವತಿ ಜಲಾಶಯದಿಂದ ಹಳೆ ಅಚ್ಚುಕಟ್ಟು ಪ್ರದೇಶದಗಳಿಗೆ ನೀರು ಹರಿಸದಿದ್ದರೆ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವುದಾಗಿ ಅಚ್ಚುಕಟ್ಟು ಪ್ರದೇಶದ ರೈತರು ಎಚ್ಚರಿಕೆ ನೀಡಿದ್ದಾರೆ.

Advertisement

ತಾಲೂಕಿನ ಹಳೇ ಆಲೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಸುವರ್ಣಾವತಿ ಜಲಾಶಯದ ಅಚ್ಚುಕಟ್ಟುದಾರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಆಲೂರಿನಲ್ಲಿ ಸಭೆ: ತಾಲೂಕಿನ ಸುವರ್ಣಾವತಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಗಳಿಗೆ ಇದುವರೆಗೆ ಎರಡು ಬಾರಿ ನೀರು ಕೊಡಬೇಕಾಗಿತ್ತು. ಆದರೆ ಈ ಬಾರಿ ಒಂದು ಬಾರಿಯೂ ನೀರು ಬಿಡದಿರುವುದರಿಂದ ಬೆಳೆಗಳು ಒಣಗುತ್ತಿವೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ರೈತರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ನೀರು ಹರಿಸಲು ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಸ್ಪಷ್ಟ ಭರವಸೆ ದೊರಕದ ಹಿನ್ನೆಲೆಯಲ್ಲಿ ಸೋಮವಾರ ಆಲೂರಿನಲ್ಲಿ ಸಭೆ ನಡೆಸಿದರು.

ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ಸಭೆಯಲ್ಲಿ ಮಾತನಾಡಿದ ರೈತರು, ಈಗಾಗಲೇ ನೀರಿನ ಕೊರತೆಯಿಂದಾಗಿ ಸುವರ್ಣಾವತಿ ಹಳೆಯ ಅಚ್ಚುಕಟ್ಟು ಪ್ರದೇಶದಲ್ಲಿ ತೆಂಗಿನ ತೋಟ, ಇತರೆ ಬೆಳೆಗಳು ಒಣಗಿದ್ದು, ನಾಶವಾಗುವ ಹಂತ ತಲುಪಿವೆ. ಇನ್ನೊಂದೆಡೆ ಅಂತರ್ಜಲ ಕ್ಷೀಣಿಸಿದೆ. ಬೆಳೆದ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ನೀರಾವರಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು. ಸುವರ್ಣಾವತಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ, ಲೋಕಸಭಾ ಚುನಾವಣೆಯ ಮತದಾನವನ್ನು ಅಚ್ಚುಕಟ್ಟುದಾರರು ಬಹಿಷ್ಕರಿಸೋಣ ಎಂಬ ನಿರ್ಧಾರ ಕೈಗೊಂಡರು.

Advertisement

ಎಂಜಿನಿಯರ್‌ ಭರವಸೆ: ಸಭೆ ನಡೆಯುತ್ತಿರುವ ವಿಷಯ ತಿಳಿದ ಸುವರ್ಣಾವತಿ ಕಾರ್ಯಪಾಲಕ ಎಂಜಿನಿಯರ್‌ ರಾಜೇಂದ್ರಪ್ರಸಾದ್‌ ಸ್ಥಳಕ್ಕೆ ಆಗಮಿಸಿ, ರೈತರ ಅಹವಾಲುಗಳನ್ನು ಆಲಿಸಿದರು. ಈ ಭಾಗದ ರೈತರ ತೆಂಗಿನ ತೋಟ, ಬಹುವಾರ್ಷಿಕ ಬೆಳೆ ಇತರ ಫ‌ಸಲುಗಳು ಒಣಗುತ್ತಿದ್ದು, ಇನ್ನೂ ಸ್ವಲ್ಪ ದಿನಗಳು ಕಳೆದರೆ ಬೆಳೆಗಳಿಗೆ ನಾಶವಾಗಲಿದೆ.

ಸುವರ್ಣಾವತಿ ಜಲಾಶಯದಿಂದ ನಾಲೆಗೆ ಕೂಡಲೇ ನೀರು ಹರಿಸಿ ತಮ್ಮ ಬೆಳೆಗಳನ್ನು ಉಳಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಅಚ್ಚುಕಟ್ಟು ಪ್ರದೇಶದ ರೈತರ ಬೇಡಿಕೆಯಂತೆ ಮಂಗಳವಾರದಿಂದಲೇ ನಾಲೆಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.

ನೀರು ಬಿಡದಿದ್ದರೆ ಮತದಾನ ಬಹಿಷ್ಕಾರ ಖಚಿತ: ಇಷ್ಟಕ್ಕೇ ಸುಮ್ಮನಾಗದ ರೈತರು, ಕಾರ್ಯಪಾಲಕ ಎಂಜಿನಿಯರ್‌ ತಮ್ಮ ಭರವಸೆಯಂತೆ ಒಂದು ವೇಳೆ ನಾಳೆಯೇ ನೀರು ಹರಿಸದಿದ್ದರೆ ಏ.18 ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುವರ್ಣಾವತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವೀಶ್‌, ಸಹಾಯಕ ಎಂಜಿನಿಯರ್‌ ಮಹೇಶ್‌ ಹಾಗೂ ಆಲೂರು, ಸರಗೂರುಮೋಳೆ, ಕೂಡೂರು, ಕರಿಯನಕಟ್ಟೆ, ಹೊಮ್ಮ, ಕೋಟಂಬಳ್ಳಿ, ಮಲ್ಲೂಪುರ, ಹಂಡ್ರಕಳ್ಳಿಮೋಳೆ, ಕಣ್ಣೇಗಾಲ, ಬೂದಿತಿಟ್ಟು, ಲಿಂಗರಾಜಪುರ ಗ್ರಾಮಗಳ ಅಚ್ಚುಕಟ್ಟುಪ್ರದೇಶದ ರೈತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next