Advertisement

ಅನುದಾನ, ಸಾಲಮನ್ನಾ ಮಹದಾಯಿ ; ಧಾರವಾಡ ಕ್ಷೇತ್ರದ ಚುನಾವಣೆ ಅಸ್ತ್ರ 

01:56 AM Mar 04, 2019 | |

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಸಮರಕ್ಕೆ ಧಾರವಾಡ ಕ್ಷೇತ್ರ ಸಜ್ಜಾಗುತ್ತಿದೆ. ಈ ಬಾರಿ ಪ್ರಚಾರದ ವೇಳೆ ಮಹದಾಯಿ, ವಿವಿಧ ಅಭಿವೃದಿಟಛಿ ಕಾರ್ಯಗಳು, ಕೇಂದ್ರದಿಂದ ಹರಿದು ಬಂದ ಅನುದಾನ, ರಾಜ್ಯದ ಹಿತ ಕಾಯುವಲ್ಲಿ ಸಂಸದರ ವೈಫ‌ಲ್ಯ, ರೈತರ ನಿರ್ಲಕ್ಷ್ಯ, ರಾಜ್ಯ ಸರ್ಕಾರದ ಅನುದಾನ ತಾರತಮ್ಯ…ಇನ್ನಿತರ ವಿಷಯಗಳು ಮಾರ್ದನಿಸುವ ಸಾಧ್ಯತೆ ಇದೆ. ಜತೆಗೆ, ಈ ಹಿಂದಿನ ಚುನಾವಣೆಗಳಂತೆ ವಿಷಯಾ  ಧಾರಿತದಿಂದ ದೂರ ಸರಿದು ಭಾವನಾತ್ಮಕ, ಪ್ರಭಾವಾತ್ಮಕ, ವಿವಾದಾತ್ಮಕ ವಿಷಯಗಳು, ಪರಸ್ಪರ ದೋಷಾರೋಪಣೆಗಳೇ ಪ್ರಧಾನವಾಗಿ ವ್ಯಕ್ತಿಗತ ನಿಂದನೆ, ಜಾತಿಯೂ ಸಹ ತನ್ನದೇ ಆದ ಪ್ರಭಾವ ಬೀರುವ ಸಾಧ್ಯತೆ ಇಲ್ಲದಿಲ್ಲ.

Advertisement

ಬಿಜೆಪಿ ಅಸ್ತ್ರವೇನು?:ಕಳೆದ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಗಾಗಿ ಧಾರವಾಡ ಕ್ಷೇತ್ರಕ್ಕೆ ಇತಿಹಾಸದಲ್ಲೇ ಕೇಂದ್ರ ಸರ್ಕಾರದಿಂದ ದಾಖಲೆ ರೂಪದ ಅನುದಾನ ಬಂದಿದೆ. ನಗರದ ಪ್ರಮುಖ ರಸ್ತೆಗಳನ್ನು ಸಿಮೆಂಟ್‌ ರಸ್ತೆಗಳನ್ನಾಗಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆ ನಡೆಯುತ್ತಿದೆ. ಫ್ಲೈಓವರ್‌ಗೆ ಹಸಿರು ನಿಶಾನೆ ಸಿಕ್ಕಿದೆ. ಟೆಂಡರ್‌ ಶ್ಯೂರ್‌ ರಸ್ತೆ ಪ್ರಗತಿಯಲ್ಲಿದೆ. ಸ್ಮಾರ್ಟ್‌ ಸಿಟಿ ಅನುಷ್ಠಾನಗೊಂಡಿದೆ. ಮನೆ, ಮನೆಗೆ ಅಡುಗೆ ಅನಿಲ ಸಂಪರ್ಕ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಬಡವರಿಗೆ ಅಡುಗೆ ಅನಿಲ ಸಂಪರ್ಕ ನೀಡಲಾಗುತ್ತಿದೆ ಎಂಬಿತ್ಯಾದಿ ವಿಷಯಗಳನ್ನು ಬಿಜೆಪಿ, ತನ್ನ ಚುನಾವಣಾ ಪ್ರಚಾರಕ್ಕೆ ಬಳಸುವ ಸಾಧ್ಯತೆಯಿದೆ.

ಮಹದಾಯಿ ವಿಷಯವಾಗಿ ಬಿಜೆಪಿಯವರು ಮೊದಲಿನಿಂದಲೂ ನ್ಯಾಯಾಧಿಕರಣದ ಕಡೆ ಕೈ ತೋರಿಸಿ ಪ್ರಧಾನಿ
ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಇದೀಗ ನ್ಯಾಯಾಧಿಕರಣ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಹದಾಯಿ ನೀರು ಪಡೆಯಲು ಮೇಲ್ಮನವಿ ಅಥವಾ ಕಾಮಗಾರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದನ್ನು ಪ್ರಸ್ತಾಪಿಸಬಹುದು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಪಿಂಚಣಿ ಬಾಕಿಯಾಗಿ ಬರ ಬೇಕಾದ 121 ಕೋಟಿ ರೂ.ಗಳ ವಿಷಯ, ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿಚಾರವನ್ನು ಪ್ರಸ್ತಾಪಿಸಬಹುದಾಗಿದೆ.

ಕಾಂಗ್ರೆಸ್‌ ಅಸ್ತ್ರವೇನು?
ಇನ್ನು ಕಾಂಗ್ರೆಸ್‌, 2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ವಿದೇಶದಲ್ಲಿನ ಕಪ್ಪು ಹಣ ವಾಪಸ್‌ ತಂದು ಪ್ರತಿ ಖಾತೆಗೆ 15 ಲಕ್ಷ ರೂ.ಜಮೆ, ಭಯೋತ್ಪಾದನೆ ನಿರ್ಮೂಲನೆ ವಿಚಾರ, ಎರಡು ಕೋಟಿ ಉದ್ಯೋಗ ಸೃಷ್ಟಿ, ಸ್ವಾಮಿನಾಥನ್‌ ವರದಿ ಜಾರಿ ಸೇರಿದಂತೆ ರೈತರಿಗೆ ವಿಶೇಷ ಕಾರ್ಯಕ್ರಮ, ಅಚ್ಛೇ ದಿನದಂತಹ ಭರವಸೆಗಳು ಈಡೇರಿಲ್ಲ ಎಂಬುದನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ವಿಶೇಷವಾಗಿ, ರೈತರ ಸಾಲಮನ್ನಾ ವಿಷಯವಾಗಿ ಬಿಜೆಪಿ ಹಾಗೂ ಪ್ರಧಾನಿ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ ನಡೆಸುವ ಸಾಧ್ಯತೆ ಇದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಹಕಾರಿ ಸಂಘಗಳಲ್ಲಿದ್ದ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿತ್ತು. ಇದೀಗ, ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ 2 ಲಕ್ಷ ರೂ.ವರೆಗಿನ ಸಾಲಮನ್ನಾಕ್ಕೆ ಕ್ರಮ ಕೈಗೊಂಡಿದೆ. ಈ ಹಿಂದೆ ನಮ್ಮ ಸಾಲಮನ್ನಾವನ್ನು “ಲಾಲಿಪಪ್‌’ ಎಂದು ಮೂದಲಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಇದೀಗ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ನೀಡಲು ಮುಂದಾಗಿರುವುದು ಯಾವ “ಲಾಲಿಪಪ್‌’ ಎಂದು ಪ್ರಶ್ನಿಸುವ ಯತ್ನ ಮಾಡಬಹುದಾಗಿದೆ.

Advertisement

ಕರ್ನಾಟಕದ ಹಿತ ಕಾಯುವಲ್ಲಿ ರಾಜ್ಯದ 16 ಜನ ಬಿಜೆಪಿ ಸಂಸದರು ವಿಫ‌ಲರಾಗಿದ್ದಾರೆ ಎಂಬುದನ್ನು ಕಾಂಗ್ರೆಸ್‌ ಪ್ರಸ್ತಾಪಿಸುವ ಸಾಧ್ಯತೆ ಇದ್ದು, ಮಹದಾಯಿ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ತರುವಲ್ಲಿ ಧಾರವಾಡ ಸಂಸದರು ಸೇರಿದಂತೆ ಬಿಜೆಪಿ ಸಂಸದರ ವೈಫ‌ಲ್ಯವಿದೆ ಎಂಬುದನ್ನು ಬಿಂಬಿಸುವ ಸಾಧ್ಯತೆ ಇದೆ.

ಪುಲ್ವಾಮಾ ದಾಳಿಯ ಪ್ರತಿಧ್ವನಿ ಸಾಧ್ಯತೆ
ದೇಶದ ರಕ್ಷಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ, ರಾಜಕಾರಣ ಬೇಡ ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತಿವೆ. ಆದರೆ, ಚುನಾವಣೆ ಸಂದರ್ಭ ದೇಶ ರಕ್ಷಣೆ ವಿಚಾರವೂ ವಿಷಯವಾಗುವ ಸಾಧ್ಯತೆ ಇಲ್ಲದಿಲ್ಲ. ಇತ್ತೀಚೆಗಿನ ಪುಲ್ವಾಮಾ ದಾಳಿ ನಂತರದ ವಿದ್ಯಮಾನವೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಳಿದಾಡಲಿದ್ದು,
ಧಾರವಾಡದಲ್ಲೂ ಅದು ಪ್ರತಿಧ್ವನಿಸುವ ಸಾಧ್ಯತೆ ಇದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next