Advertisement

ಚುನಾವಣೆ ಶುರು: ಅಕ್ರಮ ಮರಳುಗಾರಿಕೆ ಜೋರು

07:59 AM Mar 12, 2019 | Team Udayavani |

ಕಲಬುರಗಿ: ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿ ಪ್ರಕ್ರಿಯೆಗಳು ಆರಂಭವಾಗಿವೆ. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಚುನಾವಣಾ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿವೆ. ಆದರೆ ಇದೇ ಒಳ್ಳೆಯ ಸಮಯ ಎಂದು ತಿಳಿದುಕೊಂಡು ಮರಳು ದಂಧೆಕೋರರು ತಮ್ಮ ಕಾರ್ಯ ವೇಗ ಹೆಚ್ಚಿಸಿಕೊಂಡಿದ್ದಾರೆ.

Advertisement

ಎರಡೂವರೆ ತಿಂಗಳ ಕಾಲ ನಡೆಯುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಕಡಿವಾಣ ಹಾಕಲು ಯಾರೂ ಮುಂದೆ ಬರುವುದಿಲ್ಲ ಎಂದು ಮರಳು ದಂಧೆಕೋರರಲು ತಿಳಿದುಕೊಂಡಿದ್ದರಿಂದ ಅಕ್ರಮ ಮರಳುಗಾರಿಕೆ ದಂಧೆ ವ್ಯಾಪಕವಾಗಿದೆ. ಚುನಾವಣೆ ಘೋಷಣೆಯಾದ ರವಿವಾರ ರಾತ್ರಿಯೇ ನಿತ್ಯಗಿಂತ ಎರಡು ಪಟ್ಟು ಹೆಚ್ಚಿಗೆ ಲಾರಿಗಳು ರಾಜ್ಯಾದ್ಯಂತ ಅಕ್ರಮ ಮರಳುಗಾರಿ ಕೆಗೆನದಿ ಪಾತ್ರಕ್ಕೆ ಇಳಿದಿವೆ.
 
2018ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆದಿತ್ತು. ಹೀಗಾಗಿ ನದಿಗಳ ಎರಡೂ ಬದಿಯ ಹೊಲ ಗದ್ದೆಗಳಲ್ಲಿ ರಾಶಿಗಟ್ಟಲೇ ಅಕ್ರಮ ಮರಳು ದಾಸ್ತಾನು ಮಾಡಲಾಗಿತ್ತು. ಚುನಾವಣೆ ನಂತರ ಮೇ ತಿಂಗಳ ಕೊನೆ ವಾರ ಹಾಗೂ ಜೂನ್‌ ತಿಂಗಳಿನ ಮೊದಲ ವಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಆಗಿನ ಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆಸಿ 40 ಸಾವಿರ ಮೆಟ್ರಿಕ್‌ ಟನ್‌ ಅಕ್ರಮ ಮರಳು ಜಪ್ತಿ ಮಾಡಿಕೊಳ್ಳಲಾಗಿತ್ತು. ಆದರೆ ತದನಂತರ ಜಪ್ತಿ ಮಾಡಿಕೊಂಡ ಮರಳನ್ನು ಹಿಂಬಾಗಿಲಿನಿಂದ ಮಾರಾಟ ಮಾಡಲಾಯಿತು.

ಇದೇ ರೀತಿ ವಾತಾವರಣ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಭೀಮಾ, ಕೃಷ್ಣಾ, ಕಾಗಿಣಾ ಸೇರಿದಂತೆ ರಾಜ್ಯದ ಇತರ ನದಿಗಳಲ್ಲಿ ಮಳೆಗಾಲ ಇಲ್ಲದಕ್ಕೆ ಈಗಾಗಲೇ ಬರಿದಾಗಿದ್ದರೂ ನೀರಿನೊಳಗೆ ಯಂತ್ರಗಳನ್ನು ಬಿಟ್ಟು ಮರಳು ಎತ್ತುವಳಿ ಮಾಡುವ ಕಾರ್ಯಕ್ಕೆ ಇಳಿಯಲಾಗಿದೆ.
 
ಭೀಮಾ ನದಿಗೆ ನೀರು: ಅಕ್ರಮ ಮರಳುಕೋರರಿಗೆ ಶುಕ್ರದೆಸೆ ಎನ್ನುವಂತೆ ಭೀಮಾ ನದಿಗೆ ನಾಲ್ಕು ದಿನಗಳ ಹಿಂದೆ ನಾರಾಯಣಪುರ ಅಣೆಕಟ್ಟಿನಿಂದ ನೀರು ಬಿಡಲಾಗಿದೆ. ಕಳೆದ 15 ದಿನಗಳ ಹಿಂದೆ ಭೀಮಾ ನದಿ ಮೇಲಿನ ಬ್ಯಾರೇಜ್‌ಗಳಿಂದ ನೀರು ಖಾಲಿ ಮಾಡಿಸಿ ಅಕ್ರಮ ಮರಳು ಎತ್ತುವಳಿ ಮಾಡಲಾಗಿತ್ತು. ಈಗ ನೀರು ಬರುವುದರಿಂದ ಮರಳುಗಾರಿಕೆಗೆ ಮತ್ತಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಅಕ್ರಮ ಮರಳುಗಾರಿಕೆಯಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜತೆಗೆ ಅವರ ಹಿಂಬಾಲಕರೇ ಭಾಗಿಯಾಗಿರುವುದರಿಂದ ನಿರಾತಂಕವಾಗಿ ನಡೆಯಲು ಮಗದೊಂದು ಕಾರಣವಾಗಿದೆ. ಭೀಮಾ ನದಿಯಲ್ಲಿ ಶಿವಪುರ, ಘತ್ತರಗಾ, ಅಲಕೋಡ, ಮದ್ರಿ ಬಳಿ ಮಾತ್ರ ಮರಳು ಎತ್ತುವಳಿಗೆ ಟೆಂಡರ್‌ ನೀಡಲಾಗಿದೆ. ಅದೇ ರೀತಿ ಫಿರೋಜಾಬಾದ್‌ ಕುಂದನೂರ, ಪೊತಂಗಲಾ ಬಳಿ ಸರ್ಕಾರಿ ಪಾಯಿಂಟ್‌ಗಳಿವೆ. ಆದರೆ ನದಿಯುದ್ದಕ್ಕೆ ಐವತ್ತಕ್ಕೂ ಹೆಚ್ಚು ಕಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕೃಷ್ಣಾ ಸೇರಿದಂತೆ ರಾಜ್ಯದ ಇತರ ನದಿಗಳುದ್ದಕ್ಕೂ ನಡೆಯುತ್ತಿದೆ. ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

 ತೆಲಂಗಾಣ ಕಡೆ ಸಂಪತ್ಬರಿತ: ಗಡಿ ಭಾಗವಾದ ಚಿಂಚೋಳಿ ತಾಲೂಕಿನ ಪೊತಂಗಲ್‌ ಬಳಿ ಈ ಕಡೆ ಕರ್ನಾಟಕದ ಭಾಗದದುದ್ದಕ್ಕೂ ಮರಳು ಬರಿದಾಗಿದ್ದರೆ, ಆ ಕಡೆ ತೆಲಂಗಾಣ ರಾಜ್ಯದ ಕಡೆ ನದಿಯಲ್ಲಿ ಮರಳು ಹಾಗೆ ಇದೆ. ಯಾರೂ ಅಕ್ರಮ ಮರಳು ಎತ್ತುವಳಿ ಮಾಡೋದಿಲ್ಲ. ಏಕೆಂದರೆ ಅಲ್ಲಿ ಸರಳವಾಗಿ ನದಿ ಪಾತ್ರದಿಂದ ಸಾರ್ವಜನಿಕರು ಮರಳು ತೆಗೆದುಕೊಂಡು ಹೋಗಬಹುದಾಗಿದೆ.

Advertisement

ಆದರೆ ನಮ್ಮಲ್ಲಿ ಟೆಂಡರ್‌ ನಿಯಮಾವಳಿ ಇದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮ ಮರಳುಕೋರರು ಹಗಲಿರಳು ಮರಳು ಎತ್ತುವಳಿ ಮಾಡಿ ರೈತರ ಹೊಲದಲ್ಲಿ ಸಂಗ್ರಹಿಸಿದ್ದರೆ ಜಿಲ್ಲಾಡಳಿತ ಮರಳುಕೋರರ ವಿರುದ್ಧ ಕ್ರಮ ಕೈಗೊಳ್ಳದೇ ಜಮೀನಿನ ರೈತರ ವಿರುದ್ಧ ಮೊಕದ್ದಮೆ ದಾಖಲಿಸುವ ಮೂಲಕ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವಂತೆ ನಡೆದುಕೊಂಡಿತು. 

ಹೊಸ ಮರಳು ನೀತಿಗೆ ಸಿದ್ಧತೆ
ರಾಜ್ಯಾದ್ಯಂತ ಮರಳುಗಾರಿಕೆಗೆ ಆಗಿರುವ ಟೆಂಡರ್‌ ಸಂಪೂರ್ಣ ಅವೈಜ್ಞಾನಿಕವಾಗಿದೆ. ಕೆಲವು ಕಡೆ ಒಂದು ಟನ್‌ಗೆ 8000 ಸಾವಿರ ಆಗಿದೆ. ಅಂದರೆ ಒಂದು ಲಾರಿ ಮರಳಿಗೆ 80 ಸಾವಿರ ರೂ. ಗುತ್ತಿಗೆದಾರನೇ ಸರ್ಕಾರಕ್ಕೆ ರಾಯಲ್ಟಿ ಕಟ್ಟಬೇಕಾಗುತ್ತದೆ. ಅವನೇ 80 ಸಾವಿರ ತುಂಬಿದರೆ ಗ್ರಾಹಕನಿಗೆ ಎಷ್ಟು ಮೊತ್ತದಲ್ಲಿ ಕೊಡಬೇಕು. ಹೀಗಾಗಿ ಒಂದು ಲಾರಿ ರಾಯಲ್ಟಿ ಕಟ್ಟಿ ಹತ್ತಾರು ಲಾರಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಹೀಗಾಗಿ ಹೊಸ ಮರಳು ನೀತಿ ಜಾರಿಗೆ ತರಲು ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಹಂತದ ಸಭೆಯೊಂದನ್ನು ನಡೆಸಲಾಗಿದೆ. ಇನ್ನೊಂದು ಸಭೆ ನಡೆಸಿ ನಿಯಮಾವಳಿ ರೂಪಿಸಿ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಾಸ್ತಾವಿಸಿ ಹೊಸ ಮರಳು ನೀತಿ ಜಾರಿಗೆ ತಂದು ಜನರಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಮರಳು ಸಿಗಬೇಕು ಎಂಬ ಉದ್ದೇಶ ಹೊಂದಲಾಗಿದೆ. ಇದೆಲ್ಲ ಲೋಕಸಭಾ ಚುನಾವಣೆ ನಂತರ ಆಗುತ್ತೇ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ತಿಳಿಸಿದ್ದಾರೆ.

ಅಕ್ರಮ ಮರಳುಗಾರಿಕೆಗೆ ನಿರ್ಲಕ್ಷ್ಯ ವಹಿಸುವುದಿಲ್ಲ. ಚುನಾವಣಾ ಕಾರ್ಯದ ಜತೆಗೆ ಈ ದಂಧೆ ವಿರುದ್ಧವೂ ತೀವ್ರ ನಿಗಾವಹಿಸಲಾಗುವುದು. ಅಕ್ರಮ ಮರಳು ದಂಧೆಯಲ್ಲಿ ಪೊಲೀಸ್‌ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎಂಬುದನ್ನು ಸಹ ಪತ್ತೆ ಹಚ್ಚಿ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ.
 ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಎಸ್‌ಪಿ ಕಲಬುರಗಿ

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next