Advertisement

ಚುನಾವಣೆ ಸಬೂಬು ಸಲ್ಲದು

02:35 PM Apr 19, 2018 | Team Udayavani |

ಬೆಂಗಳೂರು: “ಬೇಸಿಗೆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಕೆಲವೆಡೆ ಸಮಸ್ಯೆ ಇದೆ. ಆದರೆ, ಪರಿಹರಿಸಲು ಜಲಮಂಡಳಿ ಜತೆಗೂಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಚುನಾವಣೆ ಕಾರ್ಯದ ಸಬೂಬು ಹೇಳಿ ಯಾವ ಅಧಿಕಾರಿಯೂ ಜನರಿಗೆ ನೀರೊದಗಿಸುವ ಹೊಣೆಗಾರಿಕೆ ಯಿಂದ ನುಣುಚಿಕೊಳ್ಳುವಂತಿಲ್ಲ,’ ಎಂದು ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ. 

Advertisement

ಕುಡಿಯುವ ನೀರು ಪೂರೈಕೆ ಸಮಸ್ಯೆ ಬಗ್ಗೆ “ಉದಯವಾಣಿ’ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಎಚ್ಚರಿಕೆ ವಹಿಸಿದ್ದೇವೆ. ಆದರೂ ಸಣ್ಣಪುಟ್ಟ ಸಮಸ್ಯೆಗಳು ಇವೆ.
ಆದಷ್ಟೂ ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಬಿಬಿಎಂಪಿ ಹಾಗೂ ಜಲಮಂಡಳಿ ಸಮನ್ವಯತೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ. ಜೂನ್‌ 15 ರವರೆಗೂ ಗಮನಹರಿಸಲಾಗುವುದು ಎಂದು ಹೇಳಿದರು

„ ಉದಯವಾಣಿ ಕಾಳಜಿಗೆ ಮೆಚ್ಚುಗೆ  ಉದಯವಾಣಿ “ಜೀವಜಲ ಜಂಜಾಟ’ ಸರಣಿ ಪ್ರಕಟಿಸಿದ್ದು ಒಳ್ಳೆಯ ಕೆಲಸ. ನಗರದ ಕೇಂದ್ರ ಹಾಗೂ ಹೊರವಲಯಗಳಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಬಿಬಿಎಂಪಿ ಹಾಗೂ ಜಲಮಂಡಳಿಗೆ ಇದರಿಂದ ಮಾಹಿತಿ ಸಿಕ್ಕಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಆಯುಕ್ತರು, ಸಮಸ್ಯೆ ಇರುವ ಕಡೆ ಶೀಘ್ರ ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. 

„ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಿಯಾ ಯೋಜನೆ ರೂಪಿಸಿದರೂ ಸಮಸ್ಯೆ ಯಾಕೆ ಬಗೆಹರಿದಿಲ್ಲ?
 ಈಗಾಗಲೇ ಜಲಮಂಡಳಿ ಹಾಗೂ ಬಿಬಿಎಂಪಿಯಿಂದ ಬೇಸಿಗೆಯಲ್ಲಿ ಸಮಸ್ಯೆ ಉಂಟಾಗದಂತೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದರ ಹೊರತಾಗಿಯೂ ಸಮಸ್ಯೆಯಿರುವ ಬಗ್ಗೆ ಕೆಲವೆಡೆ ದೂರುಗಳು ಕೇಳಿ ಬಂದಿವೆ. ಅಂತಹ ಭಾಗಗಳಲ್ಲಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು.

„ ಕಾವೇರಿ ನೀರು ಪೂರೈಕೆಯಾಗದ ಕಡೆ ನೀರು ಸರಬರಾಜು ಹೇಗೆ?
 ಕಾವೇರಿ ನೀರು ಪೂರೈಕೆಯಾಗದ ಪ್ರದೇಶಗಳಲ್ಲಿ ಜನಪ್ರತಿನಿಧಿಗಳು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದರು.  ಆದರೆ, ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಈಗ ಜನಪ್ರತಿನಿಧಿಗಳು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವಂತಿಲ್ಲ. ಆ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಕಡೆಗಳಲ್ಲಿ ಪಾಲಿಕೆಯಿಂದಲೇ ನೀರು ಪೂರೈಕೆ ಮಾಡುವಂತೆ ಹಾಗೂ ಅಗತ್ಯ ಇರುವ ಕಡೆ ಕೊಳವೆಬಾವಿ ಕೊರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Advertisement

„ ಮಹದೇವಪುರ ಸೇರಿ ವಿವಿಧ ವಲಯಗಳಲ್ಲಿ ಜಲಮಂಡಳಿ ಸಂಪರ್ಕವಿದ್ದರೂ ನೀರಿನ ಸಮಸ್ಯೆ ಇರುವುದೇಕೆ?
 ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಆದ್ಯತೆಯ ಮೇಲೆ ಕ್ರಮಕೈಗೊಳ್ಳುವಂತೆ ಎಲ್ಲ ವಾರ್ಡ್‌ ಅಭಿಯಂತರುಗಳಿಗೆ ಸೂಚಿಸಲಾಗಿದೆ. ಅದರ ಹೊರತಾಗಿಯೂ ಜಲಮಂಡಳಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ.

„ ನೀರು ಪೂರೈಕೆ ಸಂಬಂಧಿತ ಸಮಸ್ಯೆಗಳನ್ನು ತಿಳಿಸಲು ಅಧಿಕಾರಿಗಳು ಸಿಗುತ್ತಿಲ್ಲ ಎಂಬ ದೂರಿದೆ?
 ಹಲವಾರು ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅದರ ಹೊರತಾಗಿಯೂ ಜನರಿಗೆ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳ ಪರಿಹಾರಕ್ಕೆ ಮುಂದಾಗು ವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಚುನಾವಣಾ ಕಾರ್ಯ ಇಲ್ಲದಿದ್ದರೂ ಆ ಸಬೂಬು ಹೇಳಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಅಂತಹ ಪ್ರಕರಣ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.

„ ಕೆಲವೆಡೆ ಪಾಲಿಕೆಯಿಂದ ಕೊರೆಸಿರುವ ಕೊಳವೆಬಾವಿಗಳು ಹಾಳಾಗಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲವೇಕೆ?
 ಬಿಬಿಎಂಪಿ ವ್ಯಾಪ್ತಿಯ ಕೊಳವೆಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಲಾಗಿದ್ದು, ದುರಸ್ತಿಯಾಗಬೇಕಿರುವ ಕೊಳವೆಬಾವಿಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. 

ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next