Advertisement
ರಾಜ್ಯದ ಪಾಲಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರು ಬಳಕೆ ಕಥೆ-ವ್ಯಥೆ ಇಂದು ನಿನ್ನೆಯದಲ್ಲ. ಸರಿಸುಮಾರು ನಾಲ್ಕುವರೆ ದಶಕಗಳದ್ದಾಗಿದೆ. ಪ್ರತಿ ಚುನಾವಣೆ ಬಂದಾಗಲೊಮ್ಮೆ ಇನ್ನೇನು ಯೋಜನೆ ಪೂರ್ಣಗೊಂಡೇ ಬಿಟ್ತು ಎನ್ನುವಂತೆ ಬಿಂಬಿಸಲಾಗುತ್ತದೆ. ಚುನಾವಣೆ ಪ್ರಚಾರದಲ್ಲಿ ಆಡಳಿತ-ವಿಪಕ್ಷಗಳಿಗೆ ಚುನಾವಣಾ ಸರಕಾಗುವ ಯುಕೆಪಿ-3 ಸರಕಾರ ರಚನೆಯಾದ ಕೂಡಲೇ ಮರೆಯಾಗುವುದು ಈ ಭಾಗಕ್ಕೆ ವಾಡಿಕೆಯಂತಾಗಿದೆ.
Related Articles
Advertisement
ನಂತರದಲ್ಲಿ ಬಂದ ಸಮ್ಮಿಶ್ರ ಸರಕಾರವೂ ಯೋಜನೆ ವಿಚಾರದಲ್ಲಿ ಭರವಸೆ ನೀಡಿತಾದರೂ ಏನನ್ನೂ ಸಾಧಿಸಲಾಗಲಿಲ್ಲ. ಸಮ್ಮಿಶ್ರ ಸರಕಾರ ಪತನ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸಹ ಯೋಜನೆ ಅನುಷ್ಠಾನಕ್ಕೆ ಬದ್ಧ ಎಂದು ಹೇಳಿತ್ತಾದರೂ ಇದುವರೆಗೂ ವಿಶ್ವಾಸ ಮೂಡಿಸುವ ಯಾವ ಕೆಲಸವೂ ಆಗಿಲ್ಲ. ಸರಕಾರ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ಯುಕೆಪಿ-3 ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು, ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಲಾಶಯ ಹೆಚ್ಚಳದಿಂದ ಮುಳುಗಡೆಯಾಗುವ ಸುಮಾರು 22 ಗ್ರಾಮಗಳಿಗೆ ಪುನರ್ವಸತಿ, ಪುನರ್‌ನಿರ್ಮಾಣ(ಆರ್ ಆ್ಯಂಡ್ ಆರ್) ಕಲ್ಪಿಸಲಾಗುವುದು. ಯುಕೆಪಿ-3ನೇ ಹಂತದ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಿಸಲು ಕೇಂದ್ರದ ಮನವೊಲಿಸಲಾಗುವುದು ಎಂಬ ಭರವಸೆಯೂ ಇಂದಿಗೂ ಈಡೇರಿಲ್ಲ. ಮತ್ತೂಂದು ವಿಧಾನಸಭೆ ಚುನಾವಣೆ ಎದುರಾಗುತ್ತಿದೆ.
ಇಚ್ಛಾಶಕ್ತಿ ಕೊರತೆ: ಇಲ್ಲಿವರೆಗೆ ಆಡಳಿತ ನಡೆಸಿದವರು, ಆಡಳಿತದಲ್ಲಿದ್ದವರಿಗೆ ಯೋಜನೆ ಪೂರ್ಣದ ಇಚ್ಛಾಶಕ್ತಿ ಇದ್ದಿದ್ದರೆ ಈ ವೇಳೆಗಾಗಲೇ ಯುಕೆಪಿ-3ನೇ ಹಂತದ ಯೋಜನೆ ಅನುಷ್ಠಾನದಲ್ಲಿ ಮುಳುಗಡೆಯಾಗುವ 22 ಗ್ರಾಮ, ಒಂದು ಲಕ್ಷ ಎಕರೆ ಭೂಮಿ ಹಾಗೂ ಜಲಾಶಯಕ್ಕೆ ಗೇಟ್‌ಗಳನ್ನು ಅಳವಡಿಸುವ ಮೂರು ಪ್ರಮುಖ ಕಾರ್ಯದಲ್ಲಿ ಯಾವುದಾದರೂ ಒಂದಾದರೂ ಕನಿಷ್ಠ ಮಟ್ಟದ ಚಾಲನೆ ಪಡೆದುಕೊಳ್ಳಬೇಕಾಗಿತ್ತು.
22 ಮುಳುಗಡೆ ಗ್ರಾಮಗಳ ಸ್ಥಳಾಂತರಕ್ಕೆ ಪೂರಕವಾಗಿ ಆರ್ ಆ್ಯಂಡ್ ಆರ್‌ಗೆ ಪೂರಕ ಸಿದ್ಧತೆ, ಸಂತ್ರಸ್ತರಾಗುವ ಜನರಿಗೆ ವಿಶ್ವಾಸ ಮೂಡಿಸುವ ಕಾಮಗಾರಿ ಆರಂಭಗೊಳ್ಳಬೇಕಿತ್ತು. ಅದು ಆಗಿಲ್ಲ. ಆಲಮಟ್ಟಿ ಜಲಾಶಯ ಎತ್ತರ 524 ಮೀಟರ್ ಹೆಚ್ಚಳದ ಹಿನ್ನೀರಿನಿಂದ ಮುಳುಗಡೆಯಾಗುವ ಸುಮಾರು ಒಂದು ಲಕ್ಷ ಎಕರೆ ಜಮೀನು ಸ್ವಾಧೀನಕ್ಕೆ ಪರಿಹಾರ ನೀಡಿಕೆಗೆ ಚಾಲನೆ ನೀಡುವ ಕೆಲಸವಾಗಲಿ ಯಾವುದೂ ಆರಂಭವಾಗಿಲ್ಲ. ಆದರೆ ಯೋಜನಾ ವೆಚ್ಚ ಮಾತ್ರ ಗಗನಮುಖಿಯಾಗುತ್ತಲೇ ಸಾಗುತ್ತಿದೆ.
ಸರಕಾರಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಇದಕ್ಕೆಲ್ಲ ಕಾರಣವಾಗುತ್ತಿದೆ. ಏನೇ ಬರಲಿ ಯೋಜನೆ ಪೂರ್ಣಗೊಳಿಸಿಯೇ ಸಿದ್ಧ ಎಂಬ ಬದ್ಧತೆ ಯಾವ ರಾಜಕೀಯ ಪಕ್ಷದಲ್ಲಿಯೂ ಕಾಣುತ್ತಿಲ್ಲ. ರಾಜ್ಯ ಮತ್ತೂಂದು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ಯುಕೆಪಿ-3ನೇ ಹಂತದ ಯೋಜನೆ ಮತ್ತೆ ಮುನ್ನೆಲೆಗೆ ಬರಲಿದೆ. ಪುಂಖಾನುಪುಂಕವಾಗಿ ಭರವಸೆಗಳು, ವಾಗ್ಧಾನಗಳು ಹರಿದು ಬರುವುದು ಖಚಿತ. ಅವರೇನೂ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ ಯೋಜನೆ ಅನುಷ್ಠಾನಗೊಳಿಸಿಯೇ ಸಿದ್ಧ ಎಂದು ಸಾರಲು ರಾಜಕೀಯ ಪಕ್ಷಗಳು ಸಜ್ಜಾಗಿವೆ. ಅಂತಹ ಇಂಪಾದ ವಾಗ್ಧಾನ ಕೇಳಿ ಯೋಜನೆ ಮುಗಿಯಿತು, ನೀರು ಬಂತೆಂಬ ಹಗಲುಗನಸು ಕಾಣಲು ಜನರೂ ಸಿದ್ಧರಾದಂತೆ ಭಾಸವಾಗುತ್ತಿದೆ.
ಮೊನಚು ಕಳೆದುಕೊಳ್ತಾ ಹೋರಾಟ?
ಆಲಮಟ್ಟಿ ಜಲಾಶಯ ನಿರ್ಮಾಣ, ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣ ತೀರ್ಪಿನನ್ವಯ ರಾಜ್ಯದ ಪಾಲಿನ ನೀರು ಬಳಕೆ ಕ್ರಮಕ್ಕೆ ಒತ್ತಾಯಿಸಿ ಕೈಗೊಂಡ ಹೋರಾಟ ಅಷ್ಟಿಷ್ಟಲ್ಲ. ರಾಜ್ಯದ ಇತರೆ ನೀರಾವರಿ ಹೋರಾಟಗಳಿಗೂ ಆ ಹೋರಾಟ ಮಾದರಿ ಎನ್ನುವಷ್ಟರ ಮಟ್ಟಿಗೆ ಗಟ್ಟಿತನ ಪಡೆದುಕೊಂಡಿತ್ತು, ರಾಜ್ಯದ ಗಮನ ಸೆಳೆಯುವಂತಾಗಿತ್ತು. ಆದರೆ ಕೆಲ ವರ್ಷಗಳಿಂದ ಯುಕೆಪಿ ಕುರಿತ ಹೋರಾಟ ಮೊನಚು ಕಳೆದುಕೊಂಡಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೋರಾಟಗಳ ಶಕ್ತಿ ಕುಂದಿತೋ, ಸರಕಾರಗಳ ಮೊಂಡುತನ, ನಿರ್ಲಕ್ಷé ಹೆಚ್ಚಿತೋ, ಹೋರಾಟಗಾರರ ಕಳಕಳಿಗೆ ರೈತರ ಸಾಥ್ ತಪ್ಪಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಮೊದಲಿದ್ದ ಹೋರಾಟ ಧ್ವನಿ ಮೊಳಗುತ್ತಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಹಲವು ವರ್ಷಗಳಿಂದ ಯುಕೆಪಿ-3 ಯೋಜನೆ ನಿಂತಲ್ಲೇ ನಿಲ್ಲುವಂತಾಗಿದೆ.
ಸರಕಾರ ಯಾವುದೇ ಪಕ್ಷದ್ದಾಗಿರಲಿ ಯುಕೆಪಿ-3 ಹಂತದ ಯೋಜನೆ ಅನುಷ್ಠಾನಕ್ಕೆ ಕಾಲಮಿತಿ ಬದ್ಧತೆ ತೋರಬೇಕಾಗಿದೆ. ಆಲಮಟ್ಟಿ ಜಲಾಶಯ ಹೆಚ್ಚಿನ ಭಾಗ ಬಯಲು ಪ್ರದೇಶದಲ್ಲಿ ವ್ಯಾಪಿಸಿದೆ. ಹೀಗಾಗಿ 100 ಲೀಟರ್ ನೀರಿನ ಜತೆ ಸುಮಾರು ಎರಡು ಲೀಟರ್‌ನಷ್ಟು ಮಣ್ಣು ಹರಿದು ಬರುತ್ತದೆ. ಇದೇ ಸ್ಥಿತಿ ಮುಂದುವರಿದರೆ ಆಲಮಟ್ಟಿ ಜಲಾಶಯಕ್ಕೆ ತುಂಗಭದ್ರಾ ಜಲಾಶಯದ ಸ್ಥಿತಿ ಬರಲಿದೆ. ಕಾಲಮಿತಿಯಲ್ಲಿ ಯುಕೆಪಿ-3 ನೇ ಹಂತದ ಯೋಜನೆ ಪೂರ್ಣಗೊಳ್ಳಬೇಕಾಗಿದೆ. –ಬಸವರಾಜ ಕುಂಬಾರ, ನೀರಾವರಿ ಹೋರಾಟಗಾರ
ಅಮರೇಗೌಡ ಗೋನವಾರ