Advertisement

BJP ಬಾಹುಳ್ಯದ 94 ಕ್ಷೇತ್ರಗಳಲ್ಲಿ ಇಂದು ಚುನಾವಣೆ

12:50 AM May 07, 2024 | Team Udayavani |

ಹೊಸದಿಲ್ಲಿ: 10 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ 94 ಕ್ಷೇತ್ರಗಳಿಗೆ ಮಂಗಳವಾರ 3ನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ವಿಶೇಷವೆಂದರೆ, ಈ ಹಂತದಲ್ಲಿ ಮತದಾನ ನಡೆಯುತ್ತಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಲ ಹೊರತುಪಡಿಸಿ ಬಹುತೇಕ ರಾಜ್ಯಗಳು ಬಿಜೆಪಿಯ ಭದ್ರಕೋಟೆಯಾಗಿವೆ.
ಅದರಲ್ಲೂ, ಕಳೆದ ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಿದ್ದರೆ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲೂ ತಲಾ 1 ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಸೀಟುಗಳನ್ನೂ ಕಮಲ ಪಕ್ಷ ಬಾಚಿಕೊಂಡಿತ್ತು. 3ನೇ ಹಂತದಲ್ಲಿ ಈ ಮೂರೂ ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಗೆಲುವಿನ ನಗೆ ಬೀರುವ ನಿಟ್ಟಿನಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಹರಸಾಹಸ ಪಟ್ಟಿದ್ದಾರೆ. ಇನ್ನೊಂದೆಡೆ, ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕಲು ಇಂಡಿಯಾ ಒಕ್ಕೂಟವೂ ಶಕ್ತಿಮೀರಿ ಶ್ರಮಿಸಿದೆ.

Advertisement

3ನೇ ಹಂತದ ಚುನಾವಣೆ ಮುಕ್ತಾಯದೊಂದಿಗೆ 280 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾ ಯವಾಗಲಿದ್ದು, ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾನ ಮುಗಿದಂತಾಗುತ್ತದೆ. ಉಳಿದ ಹಂತಗಳಲ್ಲಿ ಬಾಕಿ ಇರುವ 263 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಬಿಜೆಪಿ ಪಾರುಪತ್ಯ: ಮಂಗಳವಾರ ಗುಜರಾತ್‌ನ ಎಲ್ಲ 25 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 1 ಕ್ಷೇತ್ರ(ಸೂರತ್‌)ದಲ್ಲಿ ಬಿಜೆಪಿ ಈಗಾಗಲೇ ಜಯಗಳಿಸಿದೆ. ಕಳೆದ ಚುನಾವಣೆಯಲ್ಲೂ ಬಿಜೆಪಿ ಇಲ್ಲಿನ ಎಲ್ಲ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. 1995ರಿಂದಲೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಬಾರಿಯೂ ಕ್ಲೀನ್‌ಸ್ವೀಪ್‌ನ ವಿಶ್ವಾಸದೊಂದಿಗೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ರಾಜ್ಯದ ಗಾಂಧಿನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಹ್ಮದಾಬಾದ್‌ ನಗರದ ಬೂತ್‌ಗಳಲ್ಲಿ ಪ್ರಧಾನಿ ಮೋದಿ ಮತ್ತು ಸಚಿವ ಅಮಿತ್‌ ಶಾ ಹಕ್ಕು ಚಲಾಯಿಸಲಿದ್ದಾರೆ.

ಇನ್ನು, ಕರ್ನಾಟಕ, ಗೋವಾ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲೂ ಮತದಾನ ನಡೆಯಲಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಯೋಜನೆ ಹಾಕಿಕೊಂಡಿರುವ ಎನ್‌ಡಿಎ ಮೈತ್ರಿಕೂಟಕ್ಕೆ ಈ ಹಂತದ ಮತದಾನ ಮಹತ್ವದ್ದಾಗಿದೆ.
ಇದೇ ವೇಳೆ, ಉತ್ತರಪ್ರದೇಶದಲ್ಲಿ ಈ ಹಂತವು ಮುಲಾಯಂ ಸಿಂಗ್‌ ಕುಟುಂಬಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಪತ್ನಿ ಡಿಂಪಲ್‌ ಯಾದವ್‌, ರಾಮ್‌ಗೋಪಾಲ್‌ ಯಾದವ್‌ ಅವರ ಪುತ್ರ ಅಕ್ಷಯ ಯಾದವ್‌, ಪಕ್ಷದ ಪ್ರಧಾನ ಕಾರ್ಯದರ್ಶಿ ಶಿವಪಾಲ್‌ ಯಾದವ್‌ ಪುತ್ರ ಆದಿತ್ಯ ಯಾದವ್‌ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಗುಜರಾತ್‌, ಮಹಾರಾಷ್ಟ್ರದಲ್ಲಿ ಹೆಚ್ಚು ನಾಮಪತ್ರ: ಈ ಹಂತದಲ್ಲಿ ಬರೋಬ್ಬರಿ 2963 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದು ಈ ವರ್ಷ ಮೊದಲೆರಡು ಹಂತಕ್ಕಿಂತ ಗರಿಷ್ಠ ಎಂದು ಚುನಾವಣ ಆಯೋಗ ಹೇಳಿದೆ. ಗುಜರಾತ್‌ನ 26 ಕ್ಷೇತ್ರಗಳಿಗೆ ಈ ಬಾರಿ 658 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಹಾಗೆಯೇ ಮಹಾರಾಷ್ಟ್ರದ 11 ಕ್ಷೇತ್ರಗಳಿಗೇ 519 ನಾಮಪತ್ರಗಳು ಸಲ್ಲಿಕೆಯಾಗಿದ್ದವು.

Advertisement

ಎಲ್ಲೆಲ್ಲಿ ಚುನಾವಣೆ?
ಗುಜರಾತ್‌ನ 25(1 ಅವಿರೋಧ ಆಯ್ಕೆ), ಕರ್ನಾಟಕ 14, ಅಸ್ಸಾಂ 4, ಬಿಹಾರ 5, ಛತ್ತೀಸ್‌ಗಢ 7, ಗೋವಾ 2, ಮಧ್ಯ ಪ್ರದೇಶ 8, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ಪಶ್ಚಿಮ ಬಂಗಾಲ 4, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್‌ ಮತ್ತು ದಿಯು 2 ಕ್ಷೇತ್ರಗಳಿಗೆ ಮತ್ತು ಜಮ್ಮು – ಕಾಶ್ಮೀರದ 1 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಕಣದಲ್ಲಿರುವ ಪ್ರಮುಖರು
ಕೇಂದ್ರ ಗೃಹ ಸಚಿವ ಅಮಿತ್‌ ಶಾ (ಗಾಂಧಿನಗರ), ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುಣ), ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್‌ ಯಾದವ್‌ (ಮೈನ್‌ಪುರಿ), ಮಧ್ಯ ಪ್ರದೇಶದ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌(ವಿಧಿಶಾ), ಎನ್‌ಸಿಪಿ (ಶರದ್‌ ಪವಾರ್‌) ನಾಯಕಿ ಸುಪ್ರಿಯಾ ಸುಳೆ (ಬಾರಾಮತಿ), ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (ಬಹರಾಮ್‌ಪುರ್‌), ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next