Advertisement

ಚುನಾವಣಾ ಭ್ರಷ್ಟತೆಗೆ ಕಡಿವಾಣ

11:27 AM May 01, 2017 | |

ಚುನಾವಣೆಗಳಲ್ಲಿ ನಾಗರಿಕರಿಗೆ ಆಮಿಷ, ಹಣ ನೀಡುವುದು ಇತ್ಯಾದಿ ತಡೆಗೆ ಚುನಾವಣಾ ಆಯೋಗ ಪ್ರಜಾಪ್ರಾತಿನಿಧ್ಯ ಕಾಯಿದೆಗೆ ಸೂಕ್ತ ತಿದ್ದುಪಡಿ ತರುವಂತೆ ಕಾನೂನು ಖಾತೆಗೆ ಪತ್ರ ಬರೆಯಲು ತೀರ್ಮಾನಿಸಿದೆ. ಆಯೋಗದ ನಿರ್ಧಾರದಿಂದ ಚುನಾವಣೆಯಲ್ಲಿನ ಕುರುಡು ಕಾಂಚಾಣದ ಕುಣಿತಕ್ಕೆ ಒಂದಿಷ್ಟು ಕಡಿವಾಣದ ನಿರೀಕ್ಷೆ ಇದೆ.

Advertisement

ದೇಶದಲ್ಲಿ ಪ್ರತೀ ಚುನಾವಣೆಗೂ ಅಭ್ಯರ್ಥಿಯೋರ್ವ ವ್ಯಯಿಸಬಹುದಾದ ಹಣವನ್ನು ಚುನಾವಣಾ ಆಯೋಗ ನಿಗದಿಗೊಳಿಸಿದೆಯಾದರೂ ಇದು ಕೇವಲ ಲೆಕ್ಕಪತ್ರ ಮತ್ತು ದಾಖಲೆಗಳಿಗಾಗಿ ಮಾತ್ರ ಸೀಮಿತವಾಗಿದೆ. ಭಾರೀ ಪ್ರಮಾಣದ ಹಣ ಕೇವಲ ಪ್ರಚಾರಕ್ಕೆ ಸೀಮಿತವಾಗಿರದೇ ಇದರಲ್ಲಿ ಬಹುತೇಕ ಮೊತ್ತ ಮತದಾರರಿಗೆ ಲಂಚ ನೀಡಲು ಬಳಕೆಯಾಗುತ್ತಿರುವುದು ಸುಸ್ಪಷ್ಟ. ಕಳೆದ ಕೆಲ ವರ್ಷಗಳಿಂದೀಚೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂಬ ಬಗೆಗೆ ಚರ್ಚೆಗಳು ದೇಶಾದ್ಯಂತ ನಡೆಯಲಾರಂಭಿಸಿವೆ.  ಇದೇ ವೇಳೆ ಚುನಾವಣಾ ಆಯೋಗ, ಮತದಾರನ್ನು ಸೆಳೆಯಲು ಲಂಚ ಅಥವಾ ಹಲವು ತೆರನಾದ ಆಮಿಷಗಳನ್ನು ಒಡ್ಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗುವ ಆರೋಪಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಕಾಣಿಸಿಕೊಂಡಲ್ಲಿ ಅಂತಹ ಅಭ್ಯರ್ಥಿಯನ್ನು 5 ವರ್ಷಗಳ ಕಾಲ ಲೋಕಸಭೆ ಮತ್ತು ವಿಧಾನಸಭೆ ಚುನಾವಣಾ ಸ್ಫರ್ಧೆಯಿಂದ ಅನರ್ಹಗೊಳಿಸಲು ಪ್ರಜಾಪ್ರಾತಿನಿಧ್ಯ ಕಾಯಿದೆಗೆ ಸೂಕ್ತ ತಿದ್ದುಪಡಿ ತರುವಂತೆ ಕಾನೂನು ಖಾತೆಗೆ ಪತ್ರ ಬರೆಯಲು ತೀರ್ಮಾನಿಸಿದೆ. ಆಯೋಗದ ಈ ನಿರ್ಧಾರದಿಂದ ಚುನಾವಣೆಯಲ್ಲಿನ ಕುರುಡು ಕಾಂಚಾಣದ ಕುಣಿತಕ್ಕೆ ಒಂದಿಷ್ಟು ಕಡಿವಾಣದ ನಿರೀಕ್ಷೆ ಇದೆ.

ತಮಿಳುನಾಡಿನಲ್ಲಿ ಜಯಲಲಿತಾ ಅವರ ನಿಧನದಿಂದ ತೆರವಾಗಿದ್ದ ಆರ್‌.ಕೆ.ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲೂ ಕಾಂಚಾಣದ ಕುಣಿತ, ವಿವಿಧ ರೀತಿ ಆಮಿಷ ಅವ್ಯಾಹತವಾಗಿತ್ತು. ನವನವೀನ ವಿಧಾನಗಳ ಮೂಲಕ ಆಮಿಷವೊಡ್ಡಲಾಗುತ್ತಿರುವ ಬಗೆಗೆ ಚುನಾವಣಾ ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಆಯೋಗ ಲಂಚ ನೀಡುವ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸುವ ಸಲಹೆಯನ್ನು ಕೇಂದ್ರದ ಮುಂದಿಡಲು ಮುಂದಾಗಿದೆ. ಚುನಾವಣೆಗಳಲ್ಲಿ ಹಣಬಲ ಬಳಕೆಯಾದ ಸಂದರ್ಭದಲ್ಲಿ ತನ್ನ ಸಾಂವಿಧಾನಿಕ ಅಧಿಕಾರವನ್ನು ಬಳಸುವ ಬದಲಾಗಿ ಕಾನೂನಿನಡಿಯಲ್ಲಿಯೇ ಚುನಾವಣೆಯನ್ನು ರದ್ದುಗೊಳಿಸುವ ಅಧಿಕಾರವನ್ನು ನೀಡುವಂತೆಯೂ ಆಯೋಗ ಕೇಂದ್ರ ಸರಕಾರವನ್ನು ಕೋರಿದೆ.

ಚುನಾವಣಾ ಆಯೋಗದ ಈ ಎರಡೂ ಸಲಹೆಗಳು ಸ್ವಾಗತಾರ್ಹ ಮತ್ತು ಚುನಾವಣಾ ಸುಧಾರಣೆಯ ನಿಟ್ಟಿನಲ್ಲಿ ಒಂದು ಉತ್ತಮ ಹೆಜ್ಜೆಯೇ ಸರಿ. ಹಾಗೆಂದು ಈ ವಿಚಾರದಲ್ಲಿ ಆಯೋಗ ಮತ್ತು ಸರಕಾರ ಎಚ್ಚರಿಕೆಯ ಹೆಜ್ಜೆಯನ್ನಿರಿಸಬೇಕಿದೆ. ಇಂತಹ ಕಾನೂನು ರಚನೆಯಾಗಿ ಜಾರಿಯಾದಲ್ಲಿ ಇದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಯಾವುದೇ ಅಭ್ಯರ್ಥಿಯ ವಿರುದ್ಧ ಮತದಾರರಿಗೆ ಲಂಚ ಅಥವಾ ಆಮಿಷವೊಡ್ಡಿದ ಸಂಬಂಧ ದೂರುಗಳು ದಾಖಲಾದ ಸಂದರ್ಭದಲ್ಲಿ ಅದನ್ನು ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಲ್ಲದೆ ಈ ನಿಯಮ ರಾಜಕೀಯ ದ್ವೇಷ ಸಾಧನೆಗೆ ಬಳಕೆಯಾಗುವ ಸಾಧ್ಯತೆಗಳು ಅಧಿಕವಾಗಿರುವುದರಿಂದ ಈ ನಿಟ್ಟಿನಲ್ಲಿಯೂ ಎಚ್ಚರಿಕೆ ಅಗತ್ಯ.

ಇನ್ನು ಇತ್ತೀಚೆಗೆ ನಡೆದ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಯ ಬಳಿಕ ವಿದ್ಯುನ್ಮಾನ ಮತಯಂತ್ರಗಳ ಸಾಚಾತನದ ಬಗೆಗೆ ವಿಪಕ್ಷಗಳು ಪ್ರಶ್ನೆಗಳೆನ್ನಿತ್ತಿವೆ. ಮತಯಂತ್ರಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಗಳನ್ನು ವಿಪಕ್ಷ ನಾಯಕರು ಪದೇಪದೇ ಮಾಡತೊಡಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸರ್ವಪಕ್ಷಗಳ ನಾಯಕರ ಸಭೆ ಕರೆಯಲು ತೀರ್ಮಾನಿಸಿರುವುದು ಉತ್ತಮ ನಿರ್ಧಾರವಾಗಿದೆ. 

Advertisement

ಚುನಾವಣೆ ಸುಧಾರಣೆಗೆ ಸುಪ್ರೀಂಕೋರ್ಟ್‌ನ ಆದೇಶಗಳ ಹಿನ್ನೆಲೆಯಲ್ಲಿ ಕೆಲ ಸಲಹೆಗಳನ್ನು ಸರಕಾರ ಈಗಾಗಲೇ ಮಾನ್ಯ ಮಾಡಿ ಕಾಯಿದೆಗೆ ತಿದ್ದುಪಡಿ ತಂದಿದೆಯಾದರೂ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವ ಮಹತ್ತರ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ. ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ದೇಶದ ಮುಂದಿರಿಸಿದ್ದು ಈ ದಿಸೆಯಲ್ಲಿ ಸಹಮತ ಮೂಡಿದ್ದೇ ಆದಲ್ಲಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next