Advertisement
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ನಂದೀಶ್ ರೆಡ್ಡಿ, ಪ್ರೀತಂ ಗೌಡ ನೇತೃತ್ವದಲ್ಲಿ ಮಂಗಳವಾರ ಎಲ್ಲ ಜಿಲ್ಲಾಧ್ಯಕ್ಷರ ಜತೆಗೆ ವರ್ಚುವಲ್ ಸಭೆ ನಡೆಸಲಾಗಿದೆ. ಆದಷ್ಟು ಬೇಗ ಎಲ್ಲ ಅಧ್ಯಕ್ಷರು ಅಧಿಕಾರ ಸ್ವೀಕರಿಸುವ ಜತೆಗೆ ಜ. 25ರೊಳಗಾಗಿ ಜಿಲ್ಲಾ ಸಮಿತಿಗಳನ್ನು ಪುನಾರಚಿಸಿ ರಾಜ್ಯ ಕಚೇರಿಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಹೀಗಾಗಿ ನೇಮಕದ ಬೆನ್ನಲ್ಲೇ ಚುನಾವಣ ತಯಾರಿಗೆ ಜಿಲ್ಲಾಧ್ಯಕ್ಷರು ಅಣಿಯಾಗಬೇಕಿದೆ.
ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ “ಮೋದಿ ಗ್ಯಾರಂಟಿ’ ಘೋಷವಾಕ್ಯವನ್ನು ಜನಪ್ರಿಯಗೊಳಿಸುವುದಕ್ಕೆ ಸೂಚನೆ ನೀಡಲಾಗಿದೆ. ಕೇಂದ್ರ ಸರಕಾರದ ವಿವಿಧ ಜನಪ್ರಿಯ ಯೋಜನೆಗಳಾದ ಪಿಎಂ ಕಿಸಾನ್, ಮನೆಮನೆ ಗಂಗೆ, ವಿಶ್ವಕರ್ಮ ಯೋಜನೆ, ವಿಕಸಿತ ಭಾರತ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶ ನಡೆಸುವುದಕ್ಕೆ ಸೂಚಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಸಣ್ಣ ಸಣ್ಣ ಸಮಾವೇಶ ನಡೆಸಬೇಕು. ಎಲ್ಲ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಮಾತ್ರ ನಂಬಿಕಾರ್ಹ ಎಂದು ಅಭಿಯಾನದ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ. ಅಭ್ಯರ್ಥಿ ವಿಚಾರಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ ಮೊದಲ ವಾರವೇ ಸ್ಪಷ್ಟನೆ ಸಿಗಲಿದೆ. ಆದಾಗಿಯೂ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಸಭೆಯ ಮಾದರಿಯಲ್ಲಿ ಜಿಲ್ಲಾಮಟ್ಟದಲ್ಲೂ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.