Advertisement
ಎರಡು ದಿನಗಳ ರಾಜ್ಯ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯದ ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಮುಂಬರುವ 2023 ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಹೇಗೆ ತಳ ಮಟ್ಟದಿಂದ ಸಂಘಟಿಸಬೇಕು ಎನ್ನುವ ಕುರಿತಂತೆ ಪ್ರಮುಖವಾಗಿ ಚರ್ಚೆ ನಡೆಯಲಿದೆ.
Related Articles
Advertisement
ಈಶ್ವರಪ್ಪ ಅವರು ಕೇವಲ ರಾಜೀನಾಮೆ ಸಲ್ಲಿಸಿದರೆ ಮುಗಿಯುವುದಿಲ್ಲ. ಅವರನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವುದರಿಂದ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತಂತೆಯೂ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಲ್ಲದೇ ಕಾಂಗ್ರೆಸ್ ವಿರುದ್ಧ ಹೋರಾಟ ರೂಪಿಸುವ ಕುರಿತಂತೆಯೂ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.
ಸಂಪುಟ ಪುನಾರಚನೆ ಗ್ರೀನ್‌ಸಿಗ್ನಲ್ ನಿರೀಕ್ಷೆ ?:ಪಕ್ಷದಲ್ಲಿ ಬಹುದಿನಗಳಿಂದ ಚರ್ಚೆಯಾಗುತ್ತಿರುವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಏನಾದರೂ ಸೂಚನೆ ನೀಡಬಹುದು ಎಂಬ ನಿರೀಕ್ಷೆ ಸಚಿವಾಕಾಂಕ್ಷಿಗಳಲ್ಲಿದೆ. ಕಳೆದ ವಾರ ಸಿಎಂ ದೆಹಲಿಗೆ ಹೋದ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿಯ ವೇಳೆ ಈ ಕುರಿತು ಚರ್ಚಿಸಿ ತೀರ್ಮಾನ ಮಾಡುವುದಾಗಿ ಸ್ವತಃ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಹೇಳಿದ್ದರು ಎಂದು ಹೇಳಲಾಗಿತ್ತು. ಹೀಗಾಗಿ ಈಗ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಕುರಿತು ಏನಾದರೂ ಒಂದು ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನದ ಜೊತೆಗೆ ಈಗ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯಿಂದ ಮತ್ತೂಂದು ಸ್ಥಾನ ತೆರವಾಗಿದ್ದು, ಖಾಲಿ ಇರುವ ಸ್ಥಾನಗಳನ್ನಾದರೂ ಭರ್ತಿ ಮಾಡಬೇಕೆಂಬ ಒತ್ತಡ ಸಚಿವಾಕಾಂಕ್ಷಿಗಳಿಂದ ಕೇಳಿ ಬರುತ್ತಿದೆ. ಜೆ.ಪಿ. ನಡ್ಡಾ ಅವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅನುಮತಿ ನೀಡಿದರೆ, ಈ ತಿಂಗಳಾಂತ್ಯದಲ್ಲಿ ಸಂಪುಟಕ್ಕೆ ಹೊಸಬರ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.