ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮೈತ್ರಿಕೂಟ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಆದರೆ 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವ ಬಗ್ಗೆ ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಎಜೆಎಸ್ ಯು(ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್) ಮುಖಂಡ ಸುದೇಶ್ ಮಹತೋ ಹಾಗೂ ಜೆವಿಎಂ(ಜಾರ್ಖಂಡ್ ವಿಕಾಸ್ ಮೋರ್ಚಾದ) ಬಾಬುಲಾಲ್ ಮರಾಂಡಿಗೆ ಬಿಜೆಪಿ ಕರೆ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದು, ಇದರಿಂದ ಪ್ರಸಕ್ತ ಚುನಾವಣೆಯಲ್ಲಿ ಈ ಇಬ್ಬರು ಕಿಂಗ್ ಮೇಕರ್ ಆಗುವ ಸಾಧ್ಯತೆ ದಟ್ಟವಾಗಿದೆ.
ಒಂದು ವೇಳೆ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ಲಭಿಸದೆ,ಅತಂತ್ರ ಸ್ಥಿತಿ ನಿರ್ಮಾಣವಾದರೆ ಪ್ರಾದೇಶಿಕ ಪಕ್ಷ ಹಾಗೂ ಪಕ್ಷೇತರರು ಕಿಂಗ್ ಮೇಕರ್ ಆಗಲಿದ್ದಾರೆ.
2014ರ ವಿಧಾನಸಭಾ ಚುನಾವಣೆಯಲ್ಲಿ ಎಜೆಎಸ್ ಯು ಮತ್ತು ಬಿಜೆಪಿ ಮೈತ್ರಿಕೂಟ ಜಾರ್ಖಂಡ್ ನಲ್ಲಿ ಅಧಿಕಾರದ ಗದ್ದುಗೆ ಏರಿತ್ತು. ಆದರೆ ಈ ಬಾರಿ ಸುದೇಶ್ ಮಹತೋ ನೇತೃತ್ವದ ಎಜೆಎಸ್ ಯು ಏಕಾಂಗಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿತ್ತು. ಏತನ್ಮಧ್ಯೆ ಎಜೆಎಸ್ ಯು ಬೆಂಬಲ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಮತ್ತೊಂದೆಡೆ 2006ರಲ್ಲಿ ಬಿಜೆಪಿ ತೊರೆದಿದ್ದ ಬಾಬುಲಾಲ್ ಮರಾಂಡಿಗೆ ಕರೆ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದನ್ನು ತಳ್ಳಿಹಾಕವುದಿಲ್ಲ ಎಂದು ಮರಾಂಡಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.