Advertisement

Lok Sabhe Result 2024: ಈ ಸಲ ಕಳೆದ ಬಾರಿಗಿಂತ ಕಡಿಮೆ ಮಹಿಳೆಯರು ಆಯ್ಕೆ!

11:08 AM Jun 06, 2024 | Team Udayavani |

ನವದೆಹಲಿ: 18ನೇ ಲೋಕಸಭೆಗೆ ಒಟ್ಟು 73 ಮಹಿಳೆಯರು ಆಯ್ಕೆಯಾಗಿದ್ದಾರೆ. 2019ರ ಚುನಾವಣೆಗೆ ಹೋಲಿಸಿದರೆ 4 ಸ್ಥಾನ ಕಡಿಮೆಯಾಗಿದೆ. ಆಗ 78 ಮಹಿಳೆಯರು ಆಯ್ಕೆಯಾಗಿದ್ದರು. ಈಗ ಪಶ್ಚಿಮ ಬಂಗಾಳದಿಂದ ಅತಿ ಹೆಚ್ಚು ಅಂದರೆ 11 ಮಹಿಳೆಯರು ಆಯ್ಕೆಯಾಗಿದ್ದಾರೆ.

Advertisement

ಒಟ್ಟು 797 ಮಹಿಳೆಯರು ಕಣದಲ್ಲಿದ್ದರು. ಈ ಪೈಕಿ ಬಿಜೆಪಿ 69 ಹಾಗೂ ಕಾಂಗ್ರೆಸ್‌ 41 ಮಹಿಳೆಯರಿಗೆ ಟಿಕೆಟ್‌ ನೀಡಿತ್ತು. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಪಾಸು ಮಾಡಿದ ಬಳಿಕ ನಡೆದ ಮೊದಲ ಚುನಾವಣೆ ಇದು. ಈ ಕಾಯ್ದೆಯು ಇನ್ನಷ್ಟೇ ಜಾರಿಯಾಗಬೇಕಿದೆ.

ಚುನಾವಣಾ ಆಯೋಗದ ದತ್ತಾಂಶಗಳ ಪ್ರಕಾರ, ಈ ಚುನಾವಣೆಯಲ್ಲಿ ಬಿಜೆಪಿಯಿಂದ 40, ಕಾಂಗ್ರೆಸ್‌ 14 ಹಾಗೂ ಟಿಎಂಸಿಯಿಂದ
11 ಮಹಿಳೆಯರು ಆಯ್ಕೆಯಾಗಿದ್ದಾರೆ. ಉಳಿದಂತೆ ನಾಲ್ವರು ಸಮಾಜವಾದಿ ಪಕ್ಷದಿಂದ, ಮೂವರು ಡಿಎಂಕೆ ಹಾಗೂ ಜೆಡಿಯು ಮತ್ತು ಎಲ್‌ಜೆಪಿ(ಆರ್‌)ನಿಂದ ತಲಾ ಒಬ್ಬರು ಮಹಿಳೆ ಗೆದ್ದಿದ್ದಾರೆ. ಇದರೊಂದಿಗೆ 18ನೇ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಪ್ರಮಾಣ ಶೇ.13.44ರಷ್ಟು ಇರಲಿದೆ. 17ನೇ ಲೋಕಸಭೆಯಲ್ಲಿ ಅಂದರೆ ಕಳೆದ ಬಾರಿ ಒಟ್ಟು 78 ಮಹಿಳೆಯರು ಆಯ್ಕೆಯಾಗಿದ್ದರು ಮತ್ತು ಒಟ್ಟು ಲೋಕಸಭೆಯ ಬಲದಲ್ಲಿ ಅವರ ಪ್ರಮಾಣ ಶೇ.14ರಷ್ಟಿತ್ತು. 16ನೇ ಲೋಕಸಭೆಯಲ್ಲಿ 64  ಮಹಿಳಾ ಸದಸ್ಯರಿದ್ದರೆ, 15ನೇ ಲೋಕಸಭೆಗೆ 52 ಮಹಿಳೆಯರು ಆಯ್ಕೆಯಾಗಿದ್ದರು.

ಸೀಟು ಉಳಿಸಿಕೊಂಡ ಸಂಸದೆಯರು:
ಬಿಜೆಪಿ ಹೇಮಾ ಮಾಲಿನಿ, ಟಿಎಂಸಿಯ ಮಹುವಾ ಮೊಯಿತ್ರಾ, ಎನ್‌ಸಿಪಿಯ ಸುಪ್ರಿಯಾ ಸುಳೆ, ಎಸ್‌ಪಿ ಡಿಂಪಲ್‌ ಯಾದವ್‌ ಅವರು ತಮ್ಮ ಸ್ಥಾನಗಳನ್ನು ಉಳಿಸಿಕೊಂಡರೆ, ನಟಿ ಕಂಗನಾ ರಣಾವತ್‌ ಮತ್ತು ಆರ್‌ಜೆಡಿಯ ಮಿಸಾ ಭಾರ್ತಿ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕಿರಿಯ ಸಂಸದೆಯರು: ಸಮಾಜವಾದಿ ಪಕ್ಷದಿಂದ ಮಚ್ಲಿ ಶಹರ್‌ನಿಂದ ಸ್ಪರ್ಧಿಸಿದ್ದ 25 ವರ್ಷದ ಪ್ರಿಯಾ ಸರೋಜ್‌ ಮತ್ತು ಕೈರಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ 29 ವರ್ಷದ ಇಕ್ರಾ ಚೌಧರಿ ಅವರು ಚುನಾವಣೆ ಗೆದ್ದ ಮಹಿಳೆಯರ ಅತಿ ಕಿರಿಯರಾಗಿದ್ದಾರೆ.

Advertisement

ಮಹಿಳೆಯರಿಗೆ ಹೆಚ್ಚು ಟಿಕೆಟ್‌: ವಿಶೇಷ ಎಂದರೆ ನಾಮ್‌ ತಮಿಳರ್‌ ಕಚಿ ಶೇ.50ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೇ ನೀಡಿದ್ದು ವಿಶೇಷವಾಗಿತ್ತು. ಇನ್ನುಳಿದಂತೆ ರಾಮ್‌ ವಿಲಾಸ್‌ ಲೋಕ ಜನಶಕ್ತಿ ಪಾರ್ಟಿ ಮತ್ತು ಎನ್‌ಸಿಪಿ ತಲಾ ಶೇ.40ರಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡಿದ್ದವು. ಜಾರ್ಖಂಡ್‌ ಮುಕ್ತಿ ಮೋರ್ಚಾ(ಜೆಎಂಎಂ), ಬಿಜು ಜನತಾ ದಳ(ಬಿಜೆಡಿ) ಉಭಯ ಪಕ್ಷಗಳು ಶೇ.33ರಷ್ಟು ಮಹಿಳಾ ಪ್ರಾತಿನಿಧ್ಯ ಹೊಂದಿದರೆ, ಆರ್‌ಜೆಡಿ ಶೇ.29, ಸಮಾಜವಾದಿ ಪಾರ್ಟಿ ಶೇ.20 ಹಾಗೂ ಟಿಎಂಸಿ ಶೇ.25ರಷ್ಟು ಹೊಂದಿದೆ.

ಸೋತ ತೃತೀಯ ಲಿಂಗಿಗಳು!
2024ರ ಚುನಾವಣೆಯಲ್ಲಿ ಒಟ್ಟು 8360 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಮೂವರು ತೃತೀಯಲಿಂಗಿಗಳು
ಸ್ಪರ್ಧಿಸಿದ್ದರಾದರೂ, ಒಬ್ಬರು ಗೆಲುವು ಕಂಡಿಲ್ಲ. ಮೊದಲ ಮತ್ತು ಎರಡನೇ ಲೋಕಸಭೆಯಲ್ಲಿ ತಲಾ 24 ಮಹಿಳಾ ಸಂಸದರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next