ಹೊಸದಿಲ್ಲಿ: ಕೊನೆಯ ಹಂತದ ಲೋಕಸಭೆ ಚುನಾ ವಣೆಗೆ ಗುರುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಂತದಲ್ಲಿ 8 ರಾಜ್ಯ ಹಾಗೂ ಕೇಂದ್ರಾ ಡಳಿತ ಪ್ರದೇಶಗಳ ಒಟ್ಟು 57 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಒಡಿಶಾದ 6 ಲೋಕಸಭಾ ಸೇರಿದಂತೆ 42 ವಿಧಾನಸಭೆ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.
7ನೇ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 904 ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ಬಿಜೆಪಿಯ ನಟಿ ಕಂಗನಾ ರಣಾವತ್, ರವಿಕಿಶನ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್, ಸತ್ಪಾಲ್ ಸಿಂಗ್ ರೈಝಾದಾ, ಅಜಯ್ ರಾಯ್, ಟಿಎಂಸಿಯ ಅಭಿ ಷೇಕ್ ಬ್ಯಾನರ್ಜಿ, ಸಮಾಜವಾದಿ ಪಾರ್ಟಿಯ ಕಾಜಲ್ ನಿಶಾದ್ ಸೇರಿದಂತೆ ಪ್ರಮುಖ ಕಣದಲ್ಲಿದ್ದಾರೆ.
ಭರ್ಜರಿ ಪ್ರಚಾರ: ಕೊನೆಯ ಹಂತದ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಪಶ್ಚಿಮ ಬಂಗಾಲದಲ್ಲಿ ತೃಣ ಮೂಲ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಸಮಾಜ ವಾದಿ ಪಾರ್ಟಿ, ಪಂಜಾಬ್‌ನಲ್ಲಿ ಆಪ್ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ನಾನಾ ತಂತ್ರಗಳನ್ನು ಹೆಣೆದಿವೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಆಪ್ ನಾಯಕ ಮತ್ತು ದಿಲ್ಲಿ ಸಿಎಂ ಅರ ವಿಂದ್ ಕೇಜ್ರಿವಾಲ, ಟಿಎಂಸಿ ನಾಯಕಿ ಮತ್ತು ಸಿಎಂ ಮಮತಾ ಬ್ಯಾನರ್ಜಿ, ಎಸ್ಪಿ ನಾಯಕ ಅಖೀಲೇಶ್ ಸಿಂಗ್ ಯಾದವ್ ಅವರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಕಳೆದ 6 ಹಂತಗಳಲ್ಲಿ ಒಟ್ಟು 486 ಕ್ಷೇತ್ರಗಳಲ್ಲಿ ಚುನಾವಣೆ ಮುಕ್ತಾಯವಾಗಿದೆ. 7ನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿನ ಮತದಾನದೊಂದಿಗೆ ಚುನಾವಣೆ ಸಂಪನ್ನ ವಾಗಲಿದ್ದು, ಜೂ.4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳ ಇಂಡಿಯಾ ಒಕ್ಕೂಟವು ಚುನಾವಣೆ ಗೆದ್ದು, ಸರಕಾರ ರಚಿಸುವ ಅದಮ್ಯ ವಿಶ್ವಾಸವನ್ನು ಪ್ರದರ್ಶಿಸಿವೆ.
ಎಲ್ಲೆಲ್ಲಿ ಚುನಾವಣೆ?
ಉತ್ತರ ಪ್ರದೇಶ ಹಾಗೂ ಪಂಜಾಬ್‌ನ ತಲಾ 13 ಹಾಗೂ ಬಿಹಾರ್‌ನ 8, ಪಶ್ಚಿಮ ಬಂಗಾಲ 9, ಚಂಡೀಗಢ 1, ಹಿಮಾಚಲ ಪ್ರದೇಶ 4, ಒಡಿಶಾ 6 ಮತ್ತು ಝಾರ್ಖಂಡ್‌ನ 3 ಲೋಕಸಭಾ ಕ್ಷೇತ್ರ ಗಳಲ್ಲಿ ಜೂನ್ 1ಕ್ಕೆ ಮತದಾನ ನಡೆಯ ಲಿದೆ. ಪಂಜಾಬ್‌ನಲ್ಲಿ 328, ಉತ್ತರ ಪ್ರದೇಶ 144, ಬಿಹಾರ 134, ಒಡಿಶಾ 66, ಝಾರ್ಖಂ ಡ್ 52, ಹಿಮಾಚಲ ಪ್ರದೇಶದ 37 ಮತ್ತು ಚಂಢೀ ಗಢದಲ್ಲಿ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇದನ್ನೂ ಓದಿ: 8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ