Advertisement
ಮಸ್ಕಿ ಪಟ್ಟಣ ಸೇರಿ ಕ್ಷೇತ್ರದ 6 ಜಿಲ್ಲಾ ಪಂಚಾಯಿತಿ ವ್ಯಾಪ್ತಿಗಳಲ್ಲೂ ರಾಜಕೀಯ ನಾಯಕರು ಬಿಡುವಿಲ್ಲದೇ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ, ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚರಿಸುತ್ತಿದ್ದು, ಪರಸ್ಪರ ತಂತ್ರ, ಪ್ರತಿ ತಂತ್ರ ಎಣೆಯಲಾಗುತ್ತಿದೆ. ಒಗ್ಗಟ್ಟಿನ ಮಂತ್ರ: ಕಾಂಗ್ರೆಸ್‌ನಲ್ಲಿ ಹಳೆಯ ಎಲ್ಲ ಭಿನ್ನಮತಗಳನ್ನು ಬದಿಗೊತ್ತಿ ನಾಯಕರೆಲ್ಲರೂ ಒಂದುಗೂಡಿ ಪ್ರಚಾರ ನಡೆಸಿದ್ದಾರೆ. ಸಿಂಧನೂರು ಕಾಂಗ್ರೆಸ್ ನಲ್ಲಿ ಎರಡ್ಮೂರು ಬಣಗಳಾಗಿದ್ದವು.
Related Articles
Advertisement
ಇದೀಗ ಅಂದು ಪ್ರತಿಸ್ಪರ್ಧಿಯಾಗಿದ್ದ ವ್ಯಕ್ತಿ, ಪಕ್ಷದ ವಿರುದ್ಧವೇ ಅಖಾಡಕ್ಕಿಳಿದಿರುವ ಆರ್. ಬಸನಗೌಡರು ಪ್ರತಿಪಕ್ಷ ಕಾಂಗ್ರೆಸ್‌ನಿಂದ ಹುರಿಯಾಳಾಗಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೂಡೀಕರಣಕ್ಕೆ ಜನರ ಬಳಿಗೆ ಧಾವಿಸಿದ್ದಾರೆ.
ಈ ನಡುವೆ ಆರ್.ಬಸನಗೌಡ ತುರುವಿಹಾಳ ಹಾಗೂ ಆರ್.ಸಿದ್ದನಗೌಡ ತುರುವಿಹಾಳ ಅವರು ಉಪಸ್ಥಿತರಾಗುವ ಪ್ರಚಾರ ಕಾರ್ಯಕ್ರಮಗಳೆಲ್ಲ ಬಹುತೇಕ “ಬಾವುಕ’ ತಿರುವು ಪಡೆದುಕೊಳ್ಳುತ್ತಿವೆ. ರೈತ ಕುಟುಂಬದ ಹಿನ್ನೆಲೆ ಹೊಂದಿರುವ ನಾವು ಕೋಟ್ಯಂತರ ರೂ. ಹಣ ವ್ಯಯಿಸುವ ಶಕ್ತಿಯುಳ್ಳವರಲ್ಲ ಎಂಬ ಸಂದೇಶ ರವಾನಿಸುವ ಮೂಲಕ ಜನರನ್ನೇ ಶಕ್ತಿಯೆಂದು ತೋರಿಸುವ ಪ್ರಯತ್ನಗಳನ್ನು ಮುಂದುವರಿಸಲಾಗುತ್ತಿದೆ.
ಗ್ರಾಮಸ್ಥರಿಂದಲೇ 50 ಸಾವಿರ ರೂ.!: ಸ್ವಾರಸ್ಯ ಎಂದರೆ, ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಆಯಾ ಗ್ರಾಮಸ್ಥರೇ ಚುನಾವಣೆ ಖರ್ಚಿಗೆ ಎಂದು 50 ಸಾವಿರ ರೂ. ಮೊತ್ತವನ್ನು ನೀಡುವ ಮೂಲಕ ಧೈರ್ಯ ಹೇಳುತ್ತಿರುವ ಬೆಳವಣಿಗೆ ಕುತೂಹಲ ಮೂಡಿಸಿವೆ. ಕೋಳಬಾಳ, ಕಣ್ಣೂರು ಗ್ರಾಮದಲ್ಲಿ ಸೋಮವಾರ ತಲಾ 50 ಸಾವಿರ ರೂ. ದೇಣಿಗೆಯನ್ನು ಆರ್.ಬಸನಗೌಡರ ಉಡಿಗೆ ಗ್ರಾಮಸ್ಥರು ಹಾಕಿದ್ದಾರೆ. ಅಚ್ಚರಿ ಎಂದರೆ, ಈ ಬೆಳವಣಿಗೆಗೆ ಸಾಕ್ಷಿಯಾಗಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರೇ, ದೇಣಿಗೆ ನೀಡಿದ ಜನರಿಗೆ ಮಾತನಾಡಲು ಪ್ರೋತ್ಸಾಹಿಸಿದ್ದಾರೆ.
ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿ, ನೀವು ಏನು ಬೇಕಾದರೂ ಹೇಳಿ? ಎನ್ನುವ ಮೂಲಕ ಜನರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಹುರಿದುಂಬಿಸಿದ್ದಾರೆ. ಜತೆಗೆ, ಬಸನಗೌಡರ ಪರವಾಗಿ ಭರ್ಜರಿ ಬ್ಯಾಟಿಂಗ್ ಆರಂಭಿಸಿರುವ ಹಂಪನಗೌಡರು, ಈ ಬಾರಿ ರಾಜ್ಯ ಸರಕಾರವೇ ಪ್ರತಿಸ್ಪರ್ಧಿಯಾಗಿ ನಿಂತರೂ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರಣತಂತ್ರ ರೂಪಿಸುವುದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಹಜವಾಗಿಯೇ ಸ್ಥಳೀಯ ಮಟ್ಟದಲ್ಲಿ ಮಾಜಿ ಶಾಸಕರ ಪ್ರಯತ್ನ ಕಾರ್ಯಕರ್ತರಲ್ಲಿ ಹೊಸ ಹುಮ್ಮುಸ್ಸು ಮೂಡಿಸಿದೆ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಮಂತ್ರ: ಸ್ವತಃ ಸಿಎಂ ಯಡಿಯೂರಪ್ಪ ಅವರೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿ, ಮಸ್ಕಿ ಉಸ್ತುವಾರಿಯನ್ನು ತಮ್ಮ ಸುಪತ್ರ ಬಿ.ವೈ. ವಿಜಯೇಂದ್ರಗೆ ನೀಡಿ ಹೋದ ಬಳಿಕ ಕಾಂಗ್ರೆಸ್ ಪಾಳಯ ತುಸು ಹೆಚ್ಚಿನ ಸಕ್ರಿಯತೆಯಲ್ಲಿ ತೊಡಗಿದೆ. ಈಗಾಗಲೇ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಪ್ರತಿ ಹಳ್ಳಿಗೂ ಕಾಲಿಟ್ಟು ತಮ್ಮ ಸಮುದಾಯ ಸೇರಿದಂತೆ ಬೆಂಬಲಿಗರನ್ನು ಕಾಂಗ್ರೆಸ್ ಪರ ಕೆಲಸ ಮಾಡುವುದಕ್ಕೆ ಕಟ್ಟಿಹಾಕಲು ಯತ್ನಿಸಿದ್ದಾರೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಸಹ ಅಖಾಡಕ್ಕೆ ಇಳಿದು ತಮ್ಮ ನೆಟ್ ವರ್ಕ್ ಬಳಸಿ, ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಚುರುಕುಗೊಳಿಸಿದ್ದಾರೆ. ಸಿಂಧನೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತ್ರಿಮೂರ್ತಿಗಳು ಕಾಂಗ್ರೆಸ್ ಪರ ಭಾರಿ ಕಸರತ್ತು ಆರಂಭಿಸಿದ್ದು, ಅವಿಭಜಿತ ಮಸ್ಕಿ ಕ್ಷೇತ್ರದಲ್ಲಿ ಸಿಂಧನೂರಿನ ಛಾಪು ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯ ನಾಯಕರ ಮೊರೆ: ಇಡೀ ರಾಜ್ಯ ಸರಕಾರವೇ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬಿಡಾರ ಹೂಡುವ ಮುನ್ಸೂಚನೆ ಅರಿತಿರುವ ಕಾಂಗ್ರೆಸ್‌ನವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಸೇರಿದಂತೆ ಇತರರ ಮೊರೆ ಹೋಗಿದ್ದಾರೆ. ಸ್ಥಳೀಯವಾಗಿ ಬೀಡುಬಿಟ್ಟು ಪಕ್ಷದ ಅಭ್ಯರ್ಥಿಗೆ ಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಉಪಚುನಾವಣೆಗಳಲ್ಲಿ ಬಹುತೇಕ ಕಡೆ ಬಿಜೆಪಿಯೇ ಜಯಬೇರಿ ಬಾರಿಸಿರುವ ಇತಿಹಾಸವನ್ನು ಮುರಿಯಲು ಮಸ್ಕಿ ಅಖಾಡವನ್ನು ಬಳಸಿಕೊಳ್ಳುವ ತಂತ್ರ ಕಾಂಗ್ರೆಸ್ ಪಾಳಯದಲ್ಲಿ ಚುರುಕು ಪಡೆದಿದೆ.