ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿ, ಗುರುವಾರದಿಂದ ಸರಣಿ ಸಭೆಗಳನ್ನು ನಡೆಸಲಿದ್ದು, ಬಿಬಿಎಂಪಿ ಚುನಾವಣೆಯತ್ತಲೂ ಚಿತ್ತ ಹರಿಸಲಿದೆ.
ಗುರುವಾರ ಬೆಳಗ್ಗೆ 10.30ರ ವೇಳೆಗೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಭೆ ನಡೆಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ.
ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳು ಇರುವುದರಿಂದ ಈ ಬಗ್ಗೆ ಚರ್ಚೆಗಳು ನಡೆಯಲಿದ್ದು, ಸಂಘಟನ ಪರ್ವದ ಭಾಗವಾಗಿ ಸಾಂಸ್ಥಿಕ ಚುನಾವಣೆ ಕುರಿತೂ ಸಮಾಚಲೋಚನೆ ನಡೆಯಲಿದೆ.
ಅದೇ ರೀತಿ ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಮಾಜಿ ಶಾಸಕರೊಂದಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಶುಕ್ರವಾರ ಸಭೆ ನಡೆಸಲಿದ್ದು, ಭೋಜನ ಕೂಟವನ್ನೂ ಏರ್ಪಡಿಸಿದ್ದಾರೆ. ಪಂಚಾಯತ್ ಚುನಾವಣೆಗಳು ಕಾರ್ಯಕರ್ತರ ಹಂತದಲ್ಲಿ ನಡೆಯುವ ಚುನಾವಣೆಗಳಾಗಿರುವುದರಿಂದ ಯಾವುದೇ ಸಮಸ್ಯೆಗಳಾಗದಂತೆ ಸ್ಪರ್ಧಾಳುಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನೀಡುವ ಸಾಧ್ಯತೆಗಳಿವೆ.
ನಾವು ಆಗಾಗ ಒಟ್ಟಿಗೆ ಊಟ ಮಾಡುತ್ತೇವೆ. ಅದರಲ್ಲಿ ಮಹತ್ವ ಏನೂ ಇಲ್ಲ. ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಿದೆ. ಈ ತಿಂಗಳಲ್ಲಿ ಸರಿ ಹೋಗಲಿದೆ. ಒಳ್ಳೆಯ ರೀತಿಯಲ್ಲಿ ಎಲ್ಲವೂ ಬಗೆಹರಿಯುವ ವಾತಾವರಣವನ್ನು ಹೈಕಮಾಂಡ್ ತೀರ್ಮಾನಿಸಲಿದೆ.
– ಬಸವರಾಜ ಬೊಮ್ಮಾಯಿ, ಸಂಸದ
ಮಂಗಳವಾರ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆ ಇತ್ತು. ಹೀಗಾಗಿ ಸಭೆ ಅನಂತರ ಮಧ್ಯಾಹ್ನ ಊಟಕ್ಕೆ ಸೇರಿದ್ದೆವು. ಸಮಿತಿಯಲ್ಲಿರುವ ಅನ್ಯಪಕ್ಷದ ಶಾಸಕರೂ ಭಾಗಿಯಾಗುತ್ತಾರೆ. ಇದರಲ್ಲಿ ಹೊಸತೇನೂ ಇಲ್ಲ. ಇನ್ನು ನಮ್ಮಲ್ಲಿನ ಭಿನ್ನಮತದ ಬಗ್ಗೆ ರಾಜ್ಯಾಧ್ಯಕ್ಷರು, ವರಿಷ್ಠರು ಯೋಚಿಸುತ್ತಾರೆ.
-ವಿ.ಸುನೀಲ್ ಕುಮಾರ್, ಬಿಜೆಪಿ ಶಾಸಕ