ಕೊಳ್ಳೇಗಾಲ: ನಗರದ ವಾಸವಿ ಪ್ರಥಮ ದರ್ಜೆ ಜೂನಿಯರ್ ಕಾಲೇಜಿನಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲೋಕಸಭೆ ಚುನಾವಣೆ ಸಿಬ್ಬಂದಿಗೆ ನೀಡುತ್ತಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಕರ್ತವ್ಯದಲ್ಲಿ ಲೋಪ ಎದುರಾಗದಂತೆ ಎಚ್ಚರಿಕೆಯಿಂದ ನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಎಲ್ಲಾ ಸಿಬ್ಬಂದಿ ಚಾಚು ತಪ್ಪದೆ ನಿಯೋಜನೆಗೊಂಡಿರುವ ಕೆಲಸಗಳನ್ನು ಪಾಲನೆ ಮಾಡಬೇಕು. ಏ.18 ರಂದು ನಡೆಯುವ ಮತದಾನದಲ್ಲಿ ನೂರಕ್ಕೆ ನೂರು ಮಂದಿ ಭಾಗವಹಿಸಬೇಕು ಎಂದು ತಿಳಿಸಿದರು.
ತರಬೇತಿ: ಹನೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಬಿ.ಎಂ.ಪ್ರಕಾಶ್ ಮಾತನಾಡಿ, ನಗರದ ವಾಸವಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತರಬೇತಿಗೆ ಪಿಆರ್‌ಒ 183 ಸಿಬ್ಬಂದಿ, ಎಪಿಆರ್‌ಒ 304 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಅಲ್ಲದೇ, ಸುಮಾರು 13 ಕೊಠಡಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಅಲ್ಲದೇ, 2ನೇ ಹಂತದ ತರಬೇತಿ ಏ.11 ರಂದು ನೀಡಲಾಗುವುದು. ಮಧ್ಯಾಹ್ನ 2 ಗಂಟೆಯಿಂದ 3 ಗಂಟೆವರೆಗೆ ಮತಯಂತ್ರಗಳ ವೀಕ್ಷಣೆ ಮತ್ತು ಅದರ ನಿರ್ವಹಣೆ ಬಗ್ಗೆ ಸೂಕ್ತ ತರಬೇತಿ ನೀಡಲಾಗುವುದೆಂದರು.
ಇದೇ ವೇಳೆ ಉಪವಿಭಾಗ ಅಧಿಕಾರಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ನಿಖೀತಾ ಚಿನ್ನಸ್ವಾಮಿ, ಹನೂರಿನ ತಹಶೀಲ್ದಾರ್ ನಾಗರಾಜು ಹನೂರಿನ ಬಿಒಒ ಸ್ವಾಮಿ, ಉಪತಹಶೀಲ್ದಾರ್ ನಂದಕಿಶೋರ್, ಶಿರಸ್ತೇದಾರ್ ಶ್ರೀನಿವಾಸ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.