ಚಿಕ್ಕಬಳ್ಳಾಪುರ: ಜಿಲ್ಲೆಯ ಮೂರು ತಾಲೂಕುಗಳ ಮೊದಲ ಹಂತದ ಗ್ರಾಪಂ ಚುನಾವಣೆ ಶಾಂತಿ ಯುತವಾಗಿ ಮುಗಿದು ದ್ವಿತೀಯ ಹಂತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಬೆನ್ನಲ್ಲೇ ಮೊದಲ ಹಂತದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಮತಗಟ್ಟೆ ಅಧಿಕಾರಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಆತಂಕ ಮನೆ ಮಾಡಿದೆ.
ಶಿಡ್ಲಘಟ್ಟ ತಾಲೂಕಿನ 24 ಗ್ರಾಪಂಗಳ ಚುನಾವಣೆ ಹಿನ್ನೆಲೆಯೆಲ್ಲಿ ಡಿ.21 ರಂದು ನಡೆದ ಮಸ್ಟರಿಂಗ್ ವೇಳೆಯಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಲಾಗಿತ್ತು.
ಸಂಪರ್ಕಿತರ ಪತ್ತೆಗೆ ಮನವಿ: ಈ ಪೈಕಿ ಮತಗಟ್ಟೆ ಅಧಿಕಾರಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು, ಅವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮತ್ತು ಸಿಬ್ಬಂದಿಗಳನ್ನು ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ನಡೆಸಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಶಿಡ್ಲಘಟ್ಟ ತಾಲೂಕು ಆರೋಗ್ಯ ಅಧಿಕಾರಿ ತಾಲೂಕು ದಂಡಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕಳೆದ ಮಳೆಗಾಲದಲ್ಲಿ ಕುಸಿದ ಮನೆಗೆ ಬಂದ ಪರಿಹಾರ ಕೇವಲ 3,200 ರೂ.!
ಈ ಕುರಿತು ಶಿಡ್ಲಘಟ್ಟ ತಹಶೀಲ್ದಾರ್ ಅನಂತರಾಮು ಅವರನ್ನು ಉದಯವಾಣಿ ಸಂಪರ್ಕಿಸಿದಾಗ, ಮತಗಟ್ಟೆ ಅಧಿಕಾರಿ ಒಬ್ಬರಿಗೆ
ಕೊರೊನಾ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಅವ ರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಅಧಿಕಾರಿ ಮತ್ತು
ಸಿಬ್ಬಂದಿಗಳನ್ನು ಪತ್ತೆಹಚ್ಚಿ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಮತಗಳ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.