Advertisement

ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಳ ಏಟಿನ ಭೀತಿ

02:49 PM May 30, 2022 | Team Udayavani |

ಬೆಳಗಾವಿ: ವಿಧಾನ ಪರಿಷತ್‌ಗೆ ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಅಖಾಡ ಸಜ್ಜಾಗಿದೆ. ಘಟಾನುಘಟಿ ಸ್ಪರ್ಧಿಗಳ ಚಿತ್ರಣವೂ ಸ್ಪಷ್ಟವಾಗಿದೆ. ಆದರೆ ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಲ್ಲಿ ಕಾಣುತ್ತಿರುವ ಸಮನ್ವಯದ ಕೊರತೆ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಮುಖ್ಯವಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೇ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಸೋಲಿಗೆ ನಮ್ಮವರೇ ಕಾರಣ. ಅಂತಹ ಸ್ಥಿತಿ ನಮ್ಮವರಿಗೆ ಈ ಚುನಾವಣೆಯಲ್ಲಿ ಬರಬಾರದು ಎಂದು ಬಹಿರಂಗವಾಗಿ ಹೇಳಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡಿದೆ. ಇದೇ ಒಳಹೊಡೆತದ ಆತಂಕ ಎರಡೂ ಪಕ್ಷಗಳಲ್ಲಿ ಕಾಡುತ್ತಿದೆ.

ವಾಯವ್ಯ ಶಿಕ್ಷಕರ ಕ್ಷೇತ್ರವು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 33 ವಿಧಾನಸಭೆ ಕ್ಷೇತ್ರ ವ್ಯಾಪ್ತಿಗಳನ್ನು ಹೊಂದಿದೆ. ಶಿಕ್ಷಕರ ಕ್ಷೇತ್ರದ ಈ ಬಾರಿಯ ಚುನಾವಣೆ ಬಹಳ ವಿಭಿನ್ನ ಹಾಗೂ ಪ್ರತಿಷ್ಠೆಯ ಚುನಾವಣೆಯಾಗಿ ಬದಲಾಗಿದೆ. ಶಿಕ್ಷಕರ ಜತೆ ನಿಕಟ ಸಂಪರ್ಕ ಹೊಂದಿರುವ ಅರುಣ ಶಹಾಪುರ ಮತ್ತು ಎನ್‌.ಬಿ.ಬನ್ನೂರ ಇಬ್ಬರು ಅನುಭವಿಗಳ ಜತೆಗೆ ಸುದೀರ್ಘ‌ ವರ್ಷಗಳ ನಂತರ ಮತ್ತೆ ವಿಧಾನಸಭೆಯಿಂದ ಪರಿಷತ್‌ ಚುನಾವಣೆಗೆ ಬಂದಿರುವ ಹಿರಿಯ ಅನುಭವಿ ಪ್ರಕಾಶ ಹುಕ್ಕೇರಿ ಚುನಾವಣೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ.

ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಇದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಆಂತರಿಕ ಮನಸ್ತಾಪ, ಅಭಿಪ್ರಾಯಗಳಲ್ಲಿ ವ್ಯತ್ಯಾಸ ಮತ್ತು ಟಿಕೆಟ್‌ ಹಂಚಿಕೆಯಲ್ಲಿನ ಅಸಮಾಧಾನ ಅಭ್ಯರ್ಥಿಗಳಿಗೆ ಆತಂಕ ತಂದೊಡ್ಡಿದೆ. ಹೀಗಾಗಿ ಇಲ್ಲಿ ಅಭ್ಯರ್ಥಿಗಳು ಮೊದಲು ಶಿಕ್ಷಕ ಮತದಾರರಿಗಿಂತ ತಮ್ಮ ಪಕ್ಷದ ಮುಖಂಡರ ಮನವೊಲಿಸುವ ಕೆಲಸವನ್ನು ಮಾಡಬೇಕಾಗಿದೆ. ತಮ್ಮೊಳಗಿನ ಮನಸ್ತಾಪದ ಕಾರಣ ಕೆಲವು ನಾಯಕರು ಅಂತರ ಕಾಯ್ದುಕೊಳ್ಳುವ ತಂತ್ರ ಅನುಸರಿಸುತ್ತಿರುವುದು ಎದ್ದು ಕಾಣುತ್ತಿದೆ. ಇದು ಪಕ್ಷದ ಅಭ್ಯರ್ಥಿಗಳ ಪಾಲಿಗೆ ಮುಳ್ಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಹಾದಿ ಸುಗಮವಾಗಿಲ್ಲ: ಸತತ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಬೇಕು ಎಂಬ ಬಹುದೊಡ್ಡ ಕನಸು ಕಂಡಿರುವ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಅವರ ಗೆಲುವಿನ ಹಾದಿ ಅಂದುಕೊಂಡಷ್ಟು ಸರಳವಾಗಿಲ್ಲ. ದಾರಿಯುದ್ದಕ್ಕೂ ಅಸಮಾಧಾನ, ಭಿನ್ನಾಭಿಪ್ರಾಯದ ಮುಳ್ಳುಗಳಿವೆ. ಈ ಎಲ್ಲ ಮುಳ್ಳುಗಳನ್ನು ಕಿತ್ತು ಮುಂದೆ ಸಾಗಬೇಕಾದ ಸವಾಲು ಅವರ ಮುಂದಿದೆ.

Advertisement

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ವಾಯವ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಆದರೆ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಪ್ರಭಾವಿ ನಾಯಕರು ತಮ್ಮವರಿಗೆ ಟಿಕೆಟ್‌ ಸಿಗದೆ ನಿರಾಸೆಗೊಂಡಿರುವುದರಿಂದ ಅವರ ನಡೆ ಹಾಗೂ ನಿರ್ಧಾರ ಬಿಜೆಪಿ ವಲಯದಲ್ಲಿ ಬಹಳ ಕುತೂಹಲ ಹುಟ್ಟಿಸಿದೆ. ಈ ನಾಯಕರು ಇದುವರೆಗೆ ಪಕ್ಷದ ಚುನಾವಣಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ ಅರುಣ ಶಹಾಪುರ ಬೆಳಗಾವಿ ಜಿಲ್ಲೆಗೆ ಬಂದಿದ್ದೇ ಅಪರೂಪ. ಅವರಿಗೆ ಮತ್ತೆ ಬಿಜೆಪಿ ಟಿಕೆಟ್‌ ಕೊಟ್ಟು ತಪ್ಪು ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದವು. ಇದು ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದಕ್ಕೆ ಪೂರಕವಾಗಿ ಲಕ್ಷ್ಮಣ ಸವದಿ ಅವರು ಮಹಾಂತೇಶ ಕವಟಗಿಮಠಗೆ ಬಂದ ಸೋಲಿನ ಸ್ಥಿತಿ ಅರುಣ ಶಹಾಪುರಗೆ ಬರಬಾರದು. ಇದಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲೇಬೇಕು ಎಂದು ಹೇಳಿರುವದು ನಾನಾ ರೀತಿಯ ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ. ಹ್ಯಾಟ್ರಿಕ್‌ ಹಾದಿಯಲ್ಲಿರುವ ಅರುಣ ಶಹಾಪುರ ಈ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ.

ಹುಕ್ಕೇರಿಗೆ ಅಸ್ತಿತ್ವದ ಪ್ರಶ್ನೆ:ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ವಿಧಾನಸಭೆ ಹಾಗೂ ಲೋಕಸಭೆಯನ್ನು ಪ್ರತಿನಿಧಿಸಿರುವ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಒಂದು ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದ ಮೇಲೆ ಕಣ್ಣಿಟ್ಟು ನಿರಾಸೆ ಹೊಂದಿದ್ದ ಅವರು ರಾಜಕೀಯವಾಗಿ ಅಕ್ಷರಶಃ ಅನಾಥರಾಗಿದ್ದಾರೆ. ಸುದೀರ್ಘ‌ ರಾಜಕೀಯ ಅನುಭವ ಇದ್ದರೂ ಈಗ ತಮ್ಮ ಅಸ್ತಿತ್ವ ಹುಡುಕಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇಲ್ಲಿ ಸೋತರೆ ರಾಜಕೀಯ ಜೀವನ ಅಂತ್ಯ ಎಂಬ ಅಂಜಿಕೆ ಅವರಲ್ಲಿ ಕಾಣುತ್ತಿದೆ.

ಈ ಆತಂಕದ ಬೆಂಕಿಗೆ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಎನ್‌.ಬಿ.ಬನ್ನೂರ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಮೇಲಾಗಿ ಪಕ್ಷದ ಕೆಲವು ಪ್ರಭಾವಿ ನಾಯಕರು ಸಹ ಚುನಾವಣಾ ಕಾರ್ಯದಲ್ಲಿ ಅಷ್ಟೊಂದು ಆಸಕ್ತಿಯಿಂದ ಪಾಲ್ಗೊಳ್ಳದೇ ಇರುವದು ಹುಕ್ಕೇರಿಗೆ ಸಮಸ್ಯೆ ತಂದಿಟ್ಟಿದೆ. ಕಾಂಗ್ರೆಸ್‌ ಮತಗಳು ಬನ್ನೂರ ಪಾಲಾಗದಂತೆ ನೋಡಿಕೊಳ್ಳುವ ದೊಡ್ಡ ಸವಾಲು ಹುಕ್ಕೇರಿ ಮುಂದಿದೆ. ಇದರ ಜತೆಗೆ ಬಿಜೆಪಿಯಲ್ಲಿನ ಭಿನ್ನಮತದ ಲಾಭಕ್ಕೆ ಹುಕ್ಕೇರಿ ಎದುರು ನೋಡುತ್ತಿದ್ದಾರೆ.

ಬನ್ನೂರ ಯಾರಿಗೆ ಮುಳ್ಳು? ಕಳೆದ ಬಾರಿ ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡಿ ತೀವ್ರ ಪೈಪೋಟಿಯೊಡ್ಡಿದ್ದ ಬನ್ನೂರ ಈ ಬಾರಿಯೂ ಸಹ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆ ಮಾಡಿದ್ದರು. ಆದರೆ ಪಕ್ಷದ ನಾಯಕರು ಕೈಕೊಟ್ಟಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರ ಸ್ಪರ್ಧೆ ಕಾಂಗ್ರೆಸ್‌ ಮತ್ತು ಬಿಜೆಪಿ ಇಬ್ಬರೂ ಅಭ್ಯರ್ಥಿಗಳ ನಿದ್ದೆಗೆಡಿಸಿರುವದು ಸತ್ಯ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅರುಣ ಶಹಾಪುರ ಬಹಳ ಪ್ರಯಾಸದಿಂದ ಕಾಂಗ್ರೆಸ್‌ನ ಬನ್ನೂರ ಅವರನ್ನು ಸೋಲಿಸಿದ್ದರು. ಎಲಿಮಿನೇಷನ್‌ ಸುತ್ತಿನಲ್ಲಿ ಅರುಣ ಶಹಾಪುರ ಜಯದ ಗೆರೆ ತಲುಪಿದ್ದರು. ಈಗ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವ ಬನ್ನೂರ ಅವರು ಯಾರಿಗೆ ಮುಳ್ಳಾಗಲಿದ್ದಾರೆ ಎಂಬ ಚರ್ಚೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳನ್ನು ಬಾಚಿಕೊಂಡಿದ್ದ ಬನ್ನೂರ ಈ ಬಾರಿ ಕಾಂಗ್ರೆಸ್‌ ಜತೆಗೆ ಬಿಜೆಪಿ ಮತಗಳನ್ನು ಸೆಳೆಯುವ ವಿಶ್ವಾಸ ಹೊಂದಿದ್ದಾರೆ.

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next