ನಿರ್ಮಾಪಕರ ಸಂಘಕ್ಕೆ ಇದೀಗ ಚುನಾವಣೆ ಸಮಯ. ಹೌದು 2019- 2021ಅವಧಿಯ ಆಡಳಿತ ಮಂಡಳಿ ಚುನಾವಣೆಗೆ ಇನ್ನೊಂದು ವಾರವಷ್ಟೇ ಬಾಕಿ ಇದೆ. 2011ರಲ್ಲಿ ನಡೆದಿದ್ದ ನಿರ್ಮಾಪಕರ ಸಂಘದ ಚುನಾವಣೆ ಇಲ್ಲಿಯವರೆಗೂ ನಡೆದಿರಲಿಲ್ಲ. ಎರಡು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಚುನಾವಣೆ ಎಂಟು ವರ್ಷದ ಬಳಿಕ ನಡೆಯುತ್ತಿದೆ. ಚುನಾವಣೆ ನಡೆಸಬೇಕು ಎಂಬ ಅನೇಕ ಪದಾಧಿಕಾರಿಗಳ ಒತ್ತಾಯ ಕೇಳಿಬಂದಿದ್ದರೂ, ಚುನಾವಣೆ ನಡೆದಿರಲಿಲ್ಲ.
ಈಗ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 29 ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಸ್ಪರ್ಧಿಸಿರುವ ಆಕಾಂಕ್ಷಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಂದಹಾಗೆ, ನಿರ್ಮಾಪಕರ ಸಂಘದ ಚುನಾವಣೆ ಕಣದಲ್ಲಿ ಸ್ಪರ್ಧೆಗೆ ಸಜ್ಜಾಗಿರುವ ಪದಾಧಿಕಾರಿಗಳ ವಿವರ ಇಂತಿದೆ.
ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಮುನಿರತ್ನ, ರಾಜೇಂದ್ರ ಸಿಂಗ್ ಬಾಬು ಮತ್ತು ರಾಮಕೃಷ್ಣ ಡಿ.ಕೆ. (ಪ್ರವೀಣ್‌ಕುಮಾರ್) ಸ್ಪರ್ಧೆಗಿಳಿದಿದ್ದಾರೆ. ಈ ಮೂವರ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದ್ದು, ಯಾರು ನಿರ್ಮಾಪಕರ ಸಂಘದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಇನ್ನು, ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ ಎಸ್, (ದಿನೇಶ್ ಗಾಂಧಿ), ರಾಮಮೂರ್ತಿ, ಎಂ.ಜಿ. ಮತ್ತು ಶ್ರೀನಿವಾಸ್ ಹೆಚ್.ಸಿ.(ಶಿಲ್ಪ) ಇವರುಗಳು ಸ್ಪರ್ಧಿಸಿದ್ದಾರೆ.
ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಕೇಶವ ಬಿ.ಆರ್ ಹಾಗು ಕೆ.ಮಂಜು ನಡುವೆ ಸ್ಪರ್ಧೆ ನಡೆಸಯಲಿದೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರಮೇಶ್ ಯಾದವ್ ಎಂ. ಅವರು ಒಬ್ಬರೇ ಕಣದಲ್ಲಿರುವುದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಹಾಗೆಯೇ ಖಜಾಂಚಿ ಸ್ಥಾನಕ್ಕೂ ಆರ್.ಎಸ್.ಗೌಡ ಅವರೊಬ್ಬರೇ ಕಣದಲ್ಲಿರುವುದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸ್ಥಾನಕ್ಕೆ 24 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಈ ಪೈಕಿ 12 ಜನರು ಮಾತ್ರ ಆಯ್ಕೆಯಾಗಲಿದ್ದಾರೆ.