ಗಂಗಾವತಿ: ನಗರಸಭೆಯ ಹಣಕಾಸು ಸ್ಥಾಯಿ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದು ಸೋಮವಾರ ಸ್ಥಾಯಿ ಸಮಿತಿ ಆಯ್ಕೆಗಾಗಿ ಕರೆದ ವಿಶೇಷ ಸಾಮಾನ್ಯ ಸಭೆಗೆ ನಗರಸಭೆ ಅಧ್ಯಕ್ಷೆ ಸೇರಿ ಆಡಳಿತ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಗೈರಾಗಿದ್ದರಿಂದ ಸಭೆಯನ್ನು ಪೌರಾಯುಕ್ತರು ಮುಮದೂಡಿದ್ದಾರೆ.
ಸೋಮವಾರದಂದು ನಗರಸಭೆಯ ಸ್ಥಾಯಿ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆ ನಡೆಸಲು ನಗರಸಭೆಯ ಸಭಾಂಗಣದಲ್ಲಿ ಸದಸ್ಯರ ವಿಶೇಷ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪಕುಮಾರ ಕರೆದಿದ್ದರು. ಎಲ್ಲ ೩೪ ಮತ್ತು ಶಾಸಕ, ಸಂಸದರು ಸೇರಿ ೩೬ ಸದಸ್ಯರಿಗೂ ಸಭೆಯ ನೋಟೀಸನ್ನು ಮುಂಚಿತವಾಗಿ ತಲುಪಿಸಲಾಗಿತ್ತು. ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ವಿಪಕ್ಷ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರ ಮಧ್ಯೆ ಸಭೆಗೂ ಮುಂಚೆ ನಡೆದಿದೆ ಎನ್ನಲಾದ ಸಭೆಯಲ್ಲಿ ಒಮ್ಮತ ತೀರ್ಮಾನವಾಗದೇ ಇದ್ದ ಕಾರಣ ಹಣಕಾಸು ಸ್ಥಾಯಿ ಸಭೆಗೆ ಬಹುತೇಕ ಎಲ್ಲಾ ೩೬ ಸದಸ್ಯರು ಗೈರಾಗಿದ್ದರು. ಸಭೆ ನಡೆಸಲು ಪೌರಾಯುಕ್ತರು ವಿಶೇಷ ಕಾಳಜಿ ವಹಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ ಎಲ್ಲಾ ವ್ಯವಸ್ಥೆ ಮಾಡಿದ್ದರು.
ನಗರಸಭೆಯ ಹಣಕಾಸು ಸ್ಥಾಯಿ ಸಮಿತಿ ಸಭೆಗೆ ನಿಯಮಗಳ ಪ್ರಕಾರ ಸಾಮಾನ್ಯ ಸಭೆ ಸೇರಿ ೫-೧೧ ಜನ ಸದಸ್ಯರನ್ನು (ಸೂಚಕರು ಮತ್ತು ಅನುಮೋದಕರು ನಗರಸಭೆಯ ಸದಸ್ಯರಾಗಿರಬೇಕು) ಒರ್ವ ಸೂಚಕ ಮತ್ತೊರ್ವ ಸದಸ್ಯರು ಅನುಮೋದನೆ ಮಾಡುವ ಮೂಲಕ ಆಯ್ಕೆ ಮಾಡಬೇಕು. ಸಂಪ್ರದಾಯದಂತೆ ವಿಪಕ್ಷದ ಸದಸ್ಯರು ಸೇರಿ ಇದುವರೆಗೂ ಐವರನ್ನು ಗಂಗಾವತಿ ನಗರಸಭೆಯ ಹಣಕಾಸು ಸ್ಥಾಯಿ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗುತ್ತಿತ್ತು. ಈ ಭಾರಿ ಬಿಜೆಪಿ ಸದಸ್ಯರು ಪಕ್ಷೇತರ ಸದಸ್ಯರಾದ ಶರಭೋಜಿರಾವ್ ಅಥವಾ ವೆಂಕಟರಮಣ ಇವರನ್ನು ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲು ತೀರ್ಮಾನಿಸಿದ್ದಾರೆನ್ನಲಾಗುತ್ತಿದ್ದು ಇದಕ್ಕೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಆಕ್ಷೇಪವೆತ್ತಿ ಸಭೆಗೆ ಕಾಂಗ್ರೆಸ್ ಸದಸ್ಯರು ಗೈರಾಗುವಂತೆ ಕಾಂಗ್ರೆಸ್ ಪಕ್ಷದ ಗಂಗಾವತಿಯ ಹೈಕಮಾಂಡ್ ಮೌಖಿಕ ಆದೇಶ ನೀಡಿದ್ದರಿಂದ ವಿಶೇಷ ಸಾಮಾನ್ಯಸಭೆಗೆ ಆಡಳಿತಾರೂಢ ಸದಸ್ಯರೆಲ್ಲ ಗೈರಾಗಿದ್ದಾರೆನ್ನಲಾಗಿದೆ.
ಅಧ್ಯಕ್ಷರ ಸೂಚನೆ ಮೇರೆಗೆ ಹಣಕಾಸು ಸ್ಥಾಯಿ ಸಮಿತಿ ಹಾಗೂ ಅಧ್ಯಕ್ಷರ ಆಯ್ಕೆ ಮಾಡಲು ಮುಂಚಿತವಾಗಿ ಎಲಾ ಅರ್ಹ ಸದಸ್ಯರಿಗೆ ನೋಟಿಸ್ ನೀಡಿ ವಿಶೇಷ ಸಾಮಾನ್ಯ ಸಭೆಯನ್ನು ಫೆ.06 ರಂದು ಬೆಳ್ಳಿಗ್ಗೆ ಕರೆಯಲಾಗಿತ್ತು. ಸಭೆಗೆ ಯಾರ ಸದಸ್ಯರೂ ಹಾಜರಾಗಿಲ್ಲ ತಡವಾಗಿ ಅಧ್ಯಕ್ಷರು ವೈಯಕ್ತಿಕ ಕಾರಣ ನೀಡಿ ಸಭೆಯನ್ನು ಫೆ.14 ರಂದು ಪುನಹ ಕರೆಯುವಂತೆ ಸೂಚನೆ ನೀಡಿದ್ದಾರೆ. ಹಣಕಾಸು ಸ್ಥಾಯಿ ರಚನೆ ನಗರಸಭೆಯ ಆಡಳಿತದ ಒಂದು ಪ್ರಕ್ರಿಯೆ ಆಗಿದ್ದು ಆಡಳಿತ ಮಂಡಳಿ ಹಣಕಾಸು ಸ್ಥಾಯಿ ಸಮಿತಿಯನ್ನು ರಚಿಸಬೇಕಿದ್ದು ಇದರಲ್ಲಿ ಆಡಳಿತ ವಿಪಕ್ಷ ಎನ್ನದೇ ಎಲ್ಲಾ ಸದಸ್ಯರನ್ನು ಸಮಿತಿ ಸದಸ್ಯರನ್ನಾಗಿ ಮಾಡಬಹುದಾಗಿದೆ. ಸಮಿತಿಯಲ್ಲಿ5-11 ಜನರಿಗೆ ಅವಕಾಶವಿದ್ದು ಇದರಲ್ಲಿ ಒರ್ವ ಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ದೈನಂದಿನ ಹಣಕಾಸು ಖರ್ಚು ವೆಚ್ಚಗಳಿಗೆ ಸದಸ್ಯ ಯಾವುದೇ ತೊಂದರೆ ಇಲ್ಲ.
-ವಿರೂಪಾಕ್ಷಮೂರ್ತಿ ಪೌರಾಯುಕ್ತರು .