ಕಲಬುರಗಿ : ರವಿವಾರ ನಡೆದ ಪ್ರತಿಷ್ಠಿತ ಹೈ.ಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ)ಗೆ ನಡೆದ ಚುನಾವಣೆಯಲ್ಲಿ ಪ್ರಶಾಂತ ಮಾನಕರ ನೇತೃತ್ವದ ಪೆನಲ್ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಚುನಾವಣೆಯಲ್ಲಿ ನಾಗಪ್ಪ ಹೊನ್ನಳ್ಳಿ ನೇತೃತ್ವದ ಪೆನಲ್ ಸಂಪೂರ್ಣ ಐತಿಹಾಸಿಕ ಗೆಲುವು ಸಾಧಿಸಿದೆ.
ಎದುರಾಳಿ ಪೆನಲ್‌ನವರು ಒಂದೂ ಸ್ಥಾನ ಗೆಲ್ಲಲಾಗದೇ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಎಚ್‌ಕೆಸಿಸಿಐ ಚುನಾವಣಾ ಇತಿಹಾಸದಲ್ಲಿ ಹೀಗೆ ಒಂದೇ ಪೆನಲ್‌ದವರು ಗೆಲುವು ಸಾಧಿಸಿರಲಿಲ್ಲ. ಅಧ್ಯಕ್ಷ ಸ್ಥಾನ ಸ್ಪರ್ಧಿಸಿದ್ದ ಪ್ರಶಾಂತ ಮಾನಕರ ಅಧ್ಯಕ್ಷರಾಗಿ ಗೆದ್ದಿದ್ದಲ್ಲದೇ ತನ್ನೆಲ್ಲ ಪೆನಲ್‌ನ ಎಲ್ಲರೂ ಗೆಲುವು ಸಾಧಿಸಿರುವುದು ನಿಜಕ್ಕೂ ಐತಿಹಾಸಿಕದ ಗೆಲುವಾಗಿದೆ. ಎದುರಾಳಿ ಪೆನಲ್ ದವರು ಕನಿಷ್ಠ ನಾಲ್ಕೈದು ಸ್ಥಾನಗಳನ್ನು ಗೆಲ್ಲುತ್ತಿದ್ದಾದರೂ ಈ ತರಹ ಒಂದೂ ಸ್ಥಾನ ಪಡೆಯದ ರೀತಿಯಲ್ಲಿ ಹೀನಾಯ ಸೋಲು ಅನುಭವಿಸಿರಲಿಲ್ಲ.
ಅದೇ ರೀತಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಚುನಾವಣೆಯಲ್ಲೂ ಹಾಲಿ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ ತಾವು ಗೆದ್ದು ಬರುವುದರ ಜತೆಗೆ ತನ್ನೆಲ್ಲ ಪೆನಲ್‌ನ 17 ನಿರ್ದೇಶಕರೂ ಗೆಲುವು ಸಾಧಿಸಿರುವುದು ಸಹ ಒಂದು ಅವಿಸ್ಮರಣೀಯ ಜಯ ಎಂದೇ ಹೇಳಬಹುದಾಗಿದೆ. ಕಳೆದ ವರ್ಷವೇ ನಡೆಯಬೇಕಿದ್ದ ಸಂಸ್ಥೆಯ ಚುನಾವಣೆ ಕೋವಿಡ್ ಹಿನ್ನೆಲೆಯಲ್ಲಿ ಹಾಗೂ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರಿಂದ ವಿಳಂಬಗೊಂಡು ವರ್ಷದ ನಂತರ ಚುನಾವಣೆ ನಡೆದಿದ್ದು, ಚುನಾಯಿತ ಆಡಳಿತ ಮಂಡಳಿ ಅವಧಿ ಎರಡು ವರ್ಷದ್ದಾಗಿದೆ.
ಒಬ್ಬರೂ ಮಹಿಳಾ ಪ್ರತಿನಿಧಿಗಳಿಲ್ಲ: 3485 ಮತದಾರರಲ್ಲಿ ಶೇ.15ರಷ್ಟು ಮಹಿಳಾ ಮತದಾರರಿದ್ದಾರೆ. ಆದರೆ 24 ಸ್ಥಾನಗಳಲ್ಲಿ ಒಬ್ಬರೂ ಮಹಿಳಾ ಪ್ರತಿನಿಧಿಗಳಿಲ್ಲ. ಹೆಸರಿಗೆ ಎನ್ನುವಂತೆ ತದನಂತರ ಮಹಿಳಾ ಉದ್ಯಮಿಯೊಬ್ಬರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಆದರೆ ಒಂದು ಸ್ಥಾನ ಮಹಿಳೆಯರಿಗೆ ಮೀಸಲಿಡಬೇಕೆಂಬ ಮಾತು ಕೇಳಿ ಬರುತ್ತಿದೆ. ನಗರದ ರೋಟರಿ ಶಾಲೆಯಲ್ಲಿ ಚುನಾವಣೆ ನಡೆದು ಸಂಜೆ ಮತ ಎಣಿಕೆ ಆರಂಭಗೊಂಡು ಮಧ್ಯರಾತ್ರಿ ಫಲಿತಾಂಶ ಹೊರ ಬಂತು. ನಿವೃತ್ತ ಡಿವೈಎಸ್ಪಿ ಬಸವರಾಜ ಇಂಗಿನ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸುಗೂರ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು.