ಹೊಸದಿಲ್ಲಿ: ಪಂಚ ರಾಜ್ಯ ಪ್ರಚಾರ ಕಣದಲ್ಲಿ ಮಾತಿನ “ಪಂಚ್’ ಜೋರಾಗಿದೆ. ಪ. ಬಂಗಾಲದಲ್ಲಿ ಪ್ರಧಾನಿ ಮೋದಿ ರ್ಯಾಲಿ ನಡೆಸಿದರೆ, ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅಸ್ಸಾಂನಲ್ಲಿ ಪ್ರಿಯಾಂಕಾ ವಾದ್ರಾ ಕೈ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ತ. ನಾಡು, ಕೇರಳ, ಪುದುಚೇರಿಗಳಲ್ಲೂ ಪ್ರಚಾರ ಬಿರುಸಾಗಿದೆ.
ಪಶ್ಚಿಮ ಬಂಗಾಲ :
ಮೋದಿ ಪ್ರಚಾರ ರ್ಯಾಲಿ ಇಲ್ಲಿನ ಹೈಲೈಟ್. ಇನ್ನೊಂದೆಡೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಗೃಹ ಸಚಿವ ಅಮಿತ್ ಶಾ, ಸಿಎಎ ಜಾರಿಗೆ ತರುವುದಾಗಿ ಹೇಳಿದ್ದಾರೆ. ಇಲ್ಲಿ ಸುವೇಂದು ಅಧಿಕಾರಿಯ ತಂದೆ, ಸಂಸದ ಸಿಸಿರ್ ಅಧಿಕಾರಿ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಅತ್ತ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರು ಅಧಿಕಾರಿ ಕುಟುಂಬದ ವಿರುದ್ಧ ತಿರುಗಿಬಿದ್ದಿದ್ದಾರೆ.
ಅಸ್ಸಾಂ :
ಅಸ್ಸಾಂನಲ್ಲಿ ರವಿವಾರ ಕಾಂಗ್ರೆಸ್ ಪ್ರಚಾರ ಬಿರುಸಾಗಿತ್ತು. ಜೋಹ್ರಾತ್‌ನಲ್ಲಿ ಪ್ರಚಾರ ನಡೆಸಿದ ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಕೇರಳ :
ಕೇರಳದಲ್ಲೂ ಪ್ರಚಾರ ಬಿರುಸಾಗಿದ್ದು, ಸೋಮವಾರದಿಂದ ರಾಹುಲ್ ಗಾಂಧಿ ಎರಡನೇ ಹಂತದ ಪ್ರಚಾರ ಕೈಗೊಳ್ಳಲಿದ್ದಾರೆ. ಎಲ್‌ಡಿಎಫ್ ಮತ್ತು ಬಿಜೆಪಿ ಕೂಡ ಇಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿವೆ.
ತಮಿಳುನಾಡು :
ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಸಮರವನ್ನೇ ಸಾರಿರುವ ಬಿಜೆಪಿ, 100 ಅಂಶಗಳ ಕೈಪಿಡಿಯೊಂದನ್ನು ಹೊರತಂದಿದೆ. “ಡಿಎಂಕೆಯನ್ನು ತಿರಸ್ಕರಿಸಲು 100 ಕಾರಣಗಳು’ ಎಂಬ ವಿವರಣೆ ನೀಡಿ ಇದನ್ನು ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪಾಲ್ಗೊಂಡಿದ್ದರು.