Advertisement
ಚುನಾವಣೆ ದಿನ ಘೋಷಣೆಗೂ ಮುನ್ನವೇ ಪಿರಿ ಯಾಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಕೈ-ತೆನೆ ಅಭ್ಯರ್ಥಿಗಳು ಈಗಾಗಲೇ ಅಖಾಡಕ್ಕೆ ಅಗತ್ಯ ಸಿದ್ಧತೆ ನಡೆಸಿದ್ದರೆ, ಬಿಜೆಪಿಯಿಂದ ಇನ್ನೂ ಅಭ್ಯರ್ಥಿ ಯಾರೆಂಬುದು ಸ್ಪಷ್ಟವಾಗಿಲ್ಲ. ಜೆಡಿಎಸ್‌ನಿಂದ ಹಾಲಿ ಶಾಸಕ ಕೆ.ಮಹದೇವ್ ಅವರಿಗೆ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ವೆಂಕಟೇಶ್ 2023ರ ಚುನಾವಣೆಯಲ್ಲಿ ಎದುರಾಳಿಯಾಗಿದ್ದು, ಗುರು- ಶಿಷ್ಯರ ನಡುವೆ ಮತ್ತೂಂದು ಸುತ್ತಿನ ಕದನಕ್ಕೆ ವೇದಿಕೆ ಸಜ್ಜಾಗಿದೆ. ಈ ಮೂಲಕ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಇದರೊಂದಿಗೆ, ಆರೋಪ-ಪ್ರತ್ಯಾರೋಪವೂ ಗರಿಗೆದರಿದ್ದು, ಚುನಾವಣೆ ರಣರೋಚಕ ಘಟ್ಟಕ್ಕೆ ಬಂದುನಿಂತಿದೆ.
Related Articles
Advertisement
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ:
ಮೈಸೂರು: ಬಿಜೆಪಿಯಿಂದ ಸಿ.ಎಚ್. ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿದರೆ ತಾಲೂಕಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಚುನಾವಣೆ ದಿನ ಘೋಷಣೆಯಾಗುವ ಮುನ್ನವೇ ತಾಲೂಕಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ರಾಜಕೀಯ ಚಟುವಟಿಕೆಗಳು ಗರಿಗೆದ್ದರಿವೆ.
ಇಷ್ಟಾದರೂ ಬಿಜೆಪಿ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸದೇ ಇರುವುದು ಆಕಾಂಕ್ಷಿಗಳಲ್ಲಿ ನಿರುತ್ಸಾಹ ಮೂಡಿಸಿದೆ. ಆದರೂ, ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಟಿಕೆಟ್ ದೊರೆಯಬಹುದೆಂಬ ಭರವಸೆ ಇಟ್ಟುಕೊಂಡು ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಇತ್ತ ಬಿಜೆಪಿ ಮುಖಂಡರಾದ ಕೊಣಸೂರು ವಸಂತ್ ಕುಮಾರ್ ಮತ್ತು ಕೆ.ಎನ್. ಸೋಮಶೇಖರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕೆ.ಮಹದೇವ್, ಕಾಂಗ್ರೆಸ್‌ನಿಂದ ಕೆ.ವೆಂಕಟೇಶ್ ಸ್ಪರ್ಧಿಸುವುದು ಖಚಿತವಾಗಿದೆ. ಒಂದು ವೇಳೆ ಬಿಜೆಪಿಯಿಂದ ಸಿ.ಎಚ್. ವಿಜಯಶಂಕರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.
ಕೈ-ತೆನೆ ಪಕ್ಷಗಳ ನಡುವೆ ನೇರ ಹಣಹಣಿ: 1972ರಿಂದ ನಡೆದ 10 ಚುನಾವಣೆಗಳಲ್ಲಿ ಕೆ.ವೆಂಕಟೇಶ್ ನಾಲ್ಕು ಬಾರಿ ಗೆದ್ದಿದ್ದಾರೆ. ಕೆ.ಮಹದೇವ್ ಒಂದು ಸಲ ಜಯಿಸಿ ಇದೀಗ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಕಳೆದ ಬಾರಿ ಸೋಲು ಕಂಡಿರುವ ಕೆ.ವೆಂಕಟೇಶ್ ಕ್ಷೇತ್ರವನ್ನು ತನ್ನತ್ತ ದಕ್ಕಿಸಿಕೊಳ್ಳಲು ಭಾರಿ ಪೈಪೋಟಿಗೆ ಇಳಿದಿದ್ದಾರೆ. ಈ ಇಬ್ಬರ ಕಾಳಗದ ನಡುವೆ ಬಿಜೆಪಿ ಯಾವ ರೀತಿ ಸೆಣಸಲಿದೆ ಎಂಬುದು ಕುತೂಹಲ ಮೂಡಿಸಿದೆ.
– ಸತೀಶ್ ದೇಪುರ