Advertisement
ನಗರಸಭೆ ಸೇರಿದಂತೆ ಬಹುತೇಕ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿಯು ಮಾರ್ಚ್ 9ಕ್ಕೆ ಮುಕ್ತಾಯಗೊಳ್ಳಲಿದೆ. ಯಾವುದೇ ಸ್ಥಳೀಯ ಸಂಸ್ಥೆಯ ಚುನಾವಣೆ ಆಡಳಿತಾವಧಿ ಮುಕ್ತಾಯವಾಗುವುದರೊಳಗಾಗಿ ನಡೆಸಬೇಕೆಂದು ಸುಪ್ರಿಂ ಕೋರ್ಟ್ ಆದೇಶಿಸಿದೆ. ಆದರೆ, ಈ ಆದೇಶ ಪಾಲನೆಯಾಗುವುದೂ ಅನುಮಾನ ಎನ್ನಲಾಗುತ್ತಿದೆ.
Related Articles
Advertisement
ಮೇಲ್ಮನವಿ ಸಾಧ್ಯತೆ: ರಾಜ್ಯ ಸರಕಾರವು ದೋಷಪೂರಿತ ಮೀಸಲು ಪಟ್ಟಿಯನ್ನು ಸರಿಪಡಿಸಿ ನೀಡಬೇಕು. ಇಲ್ಲವೇ ತನ್ನ ಪಟ್ಟಿಯೇ ಸರಿಯಾಗಿದೆಯೆಂದು ವಾದಿಸಲು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವು ಇದೆ. ಈ ಕುರಿತು ಇದುವರೆವಿಯೂ ಸರಕಾರದ ಹಂತದಲ್ಲಿ ಯಾವುದೇ ನಿರ್ಧಾರವಾದಂತಿಲ್ಲ. ಕೆಲವು ವದಂತಿಗಳ ಪ್ರಕಾರ ಸರಕಾರವು ದ್ವಿ ಸದಸ್ಯ ಪೀಠದ ಮುಂದೆ ತನ್ನ ಮೇಲ್ಮನವಿಯನ್ನು ಸಲ್ಲಿಸಲಿದೆಯೆಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಆದಲ್ಲಿ, ನ್ಯಾಯಾಲಯ ಹಂತದಲ್ಲಿಯೇ ಮತ್ತಷ್ಟು ಕಾಲ ಕಳೆಯಬೇಕಾಗುತ್ತದೆ. ಇದರಿಂದಲೂ ಸರಕಾರಕ್ಕೆ ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ನಡೆಸುವ ಆಸಕ್ತ ಇಲ್ಲವೆಂದೇ ಭಾವಿಸಬೇಕಾಗುತ್ತದೆ.
ಕೋಲಾರದಿಂದಲೂ ಹೊಸ ಅರ್ಜಿ ಸಲ್ಲಿಕೆ: ಕೋಲಾರ ನಗರಸಭೆಗೆ ಸಂಬಂಧಪಟ್ಟಂತೆಯೂ ತೀರಾ ಇತ್ತೀಚಿಗೆ ನಗರದ ನಿಸಾರ್ ಅಹಮದ್ ಎನ್ನುವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ನಗರಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಸರಿಯಾಗಿ ವಾರ್ಡುಗಳ ಮರು ವಿಂಗಡಣೆಯಾಗಿಲ್ಲ. ವಾರ್ಡುವಾರು ಮೀಸಲಾತಿಯೂ ಸಮರ್ಪಕವಾಗಿ ನಿಗಧಿಪಡಿಸಿಲ್ಲ, ರೋಸ್ಟರ್ ಪಾಲಿಸಿಲ್ಲವೆಂಬ ಆಕ್ಷೇಪವನ್ನು ಅವರು ತಮ್ಮ ಅರ್ಜಿಯ ಮೂಲಕ ಎತ್ತಿದ್ದಾರೆ.
ನಿಸಾರ್ ಅಹಮದ್‌ರ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ರಾಜ್ಯ ಸರಕಾರ ಮತ್ತು ಕೋಲಾರ ನಗರಸಭೆ ಆಯುಕ್ತರಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ನೋಟೀಸ್ ಜಾರಿ ಮಾಡಿದೆ. ಕೋಲಾರ ನಗರಸಭೆಯು ನ್ಯಾಯಾಲಯದಿಂದ ಜ.24 ರಂದು ಗುರುವಾರ ನೋಟೀಸ್ ಸ್ಪೀಕರಿಸಿದ್ದು, ನೋಟೀಸ್ ಸ್ಪೀಕರಿಸಿದ ದಿನದಿಂದ ಹತ್ತು ದಿನಗಳೊಳಗೆ ನ್ಯಾಯಾಲಯದ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸರಕಾರ ಹಾಗೂ ನಗರಸಭೆ ಕೋಲಾರ ನಗರಸಭೆ ವಾರ್ಡು ಮರು ವಿಂಗಡನೆ ಮತ್ತು ಮೀಸಲು ನಿಗಧಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಮುಂದೆ ವಿವರಣೆ ನೀಡಬೇಕಾಗಿದೆ. ಜ.28 ರಂದು ಸೋಮವಾರದಿಂದ ಈ ಅರ್ಜಿಯ ವಾದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಜ್ಯ ಇತ್ಯರ್ಥವಾಗುವವರೆಗೂ ನಗರಸಭೆ ಚುನಾವಣೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಆಕಾಂಕ್ಷಿಗಳಲ್ಲಿ ನಿರುತ್ಸಾಹ: ಕೋಲಾರ ನಗರಸಭೆ ಚುನಾವಣೆ ಮೀಸಲು ಪಟ್ಟಿ ರಾಜ್ಯ ಪತ್ರದಲ್ಲಿ ಪ್ರಕಟವಾದಾಗಿನಿಂದಲೂ ವಿವಿಧ ವಾರ್ಡುಗಳಲ್ಲಿ ಹಲವಾರು ಆಕಾಂಕ್ಷಿಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದರು. ದೀಪಾವಳಿ, ಹೊಸ ವರ್ಷಾಚರಣೆ, ಅಯ್ಯಪ್ಪಸ್ವಾಮಿ ಮತ್ತು ಓಂಶಕ್ತಿ ಯಾತ್ರೆಗಳಿಗೆ ಭಕ್ತರನ್ನು ಕಳುಹಿಸುವುದು, ಇತ್ತೀಚಿಗೆ ಸಂಕ್ರಾಂತಿಯ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ, ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ರಾಸುಗಳಿಗೆ ಮೇವು ಒದಗಿಸಿದ್ದು, ಪ್ಲಾಸ್ಟಿಕ್ ಬಕೆಟ್ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡಿದ್ದು, ವಾರ್ಡುಗಳಲ್ಲಿ ಸ್ವಚ್ಚತಾ ಕಾರ್ಯ, ನೀರಿನ ಟ್ಯಾಂಕರ್‌ಗಳ ಬಿಟ್ಟಿರುವುದು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವುದು ಇತ್ಯಾದಿ ಸೇವಾ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ಸೇವಾ ಕಾರ್ಯಕ್ರಮಗಳ ಜೊತೆಗೆ ವಾರ್ಡಿನ ಯುವಕರ ಗುಂಪುಗಳಿಗೆ ಆಕಾಂಕ್ಷಿಗಳು ಸಮಯ ಸಿಕ್ಕಾಗಲೆಲ್ಲಾ ಡಾಬಾಗಳಲ್ಲಿ ಬಾಡೂಟ ಕಾರ್ಯಕ್ರಮಗಳು ಎಗ್ಗಿಲ್ಲದಂತೆ ನಡೆಯುತ್ತಿದೆ. ಆಕಾಂಕ್ಷಿಗಳು ಈಗಾಗಲೇ ಲಕ್ಷಾಂತರ ರೂಪಾಯಿಗಳ ಬಂಡವಾಳವನ್ನು ವಾರ್ಡುಗಳ ಮತದಾರರ ಮೇಲೆ ಸುರಿದಿದ್ದಾರೆ. ಇದೀಗ ಚುನಾವಣೆ ಮುಂದೂಡಲ್ಪಟ್ಟರೆ ಇದೇ ರೀತಿಯಲ್ಲಿ ಮತದಾರರನ್ನು ಸೆಳೆದಿಟ್ಟುಕೊಳ್ಳಲು ಮತ್ತಷ್ಟು ಲಕ್ಷಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಇಲ್ಲವೇ ಸಿಕ್ಕ ಸಮಯವನ್ನು ಸದ್ಬಳಕೆ ಮಾಡಿಕೊಂಡು ಮತ್ತಷ್ಟು ಆಕಾಂಕ್ಷಿಗಳು ವಾರ್ಡುಗಳಿಗೆ ಇಳಿಯುವ ಸಾಧ್ಯತೆಗಳೂ ಇವೆ. ಇದರಿಂದ ಚುನಾವಣಾ ಮುಂದೂಡಿಕೆ ವಿಚಾರವೇ ಆಕಾಂಕ್ಷಿಗಳ ಪ್ರಚಾರದ ಉತ್ಸಾಹಕ್ಕೆ ತಣ್ಣೀರು ಎರಚುವಂತಾಗಿದೆ.
ಮೀಸಲು ಪಟ್ಟಿ ಬದಲಾವಣೆಗೆ ಪ್ರಯತ್ನ: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹಾಗೂ ನಿಸಾರ್ ಅಹಮದ್ ಇತರರು ಹೈಕೋರ್ಟ್‌ನಲ್ಲಿ ದಾವೆ ಹೂಡಿರುವ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಕಟಿಸಿರುವ ಮೀಸಲು ಪಟ್ಟಿ ಪರಿಷ್ಕರಣೆಯಾಗುವ ಇಕ್ಕಟ್ಟಿಗೆ ಸಿಕ್ಕಿದೆ. ಒಂದು ವೇಳೆ ಮೀಸಲು ಪಟ್ಟಿ ಬದಲಾವಣೆಯಾದಲ್ಲಿ ತಮಗೆ ಅನುಕೂಲವಾಗುವಂತೆ ವಾರ್ಡುವಾರು ಮೀಸಲು ಪಟ್ಟಿಯನ್ನು ನಿಗದಿಪಡಿಸುವಂತೆ ಸರಕಾರದ ಹಂತದಲ್ಲಿ ಕೋಲಾರದ ಅನೇಕ ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಮುಖಂಡರಿಗೆ ಉತ್ಸಾಹವಿಲ್ಲ: ಲೋಕಸಭಾ ಚುನಾವಣೆಗೆ ಮುನ್ನ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಲ್ಲಿ, ಲೋಕಸಭೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಹಣಕಾಸು ಪ್ರಾಯೋಜನೆ ಮಾಡಲೇಬೇಕಾಗುತ್ತದೆ. ಏಕೆಂದರೆ, ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುತ್ತಿದ್ದಂತೆಯೇ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ಅವರನ್ನು ತಮ್ಮ ಪರ ನಿಲ್ಲಿಸಿಕೊಳ್ಳಬೇಕಾಗುತ್ತದೆ.
ಲೋಕಸಭಾ ಚುನಾವಣೆ ನಂತರ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆದಲ್ಲಿ ಅಭ್ಯರ್ಥಿಗಳು ಸ್ವಂತ ಶಕ್ತಿಯ ಮೇಲೆ ಮಾತ್ರವೇ ಚುನಾವಣೆ ಎದುರಿಸಬೇಕಾಗುತ್ತದೆ. ಆಗಾ ತಮ್ಮ ಚುನಾವಣೆಗಳನ್ನು ಮುಗಿಸಿಕೊಂಡ ಶಾಸಕರಾಗಲಿ, ಸಂಸದರಾಗಲಿ ಅಭ್ಯರ್ಥಿಗಳಿಗೆ ಬಿ ಫಾರಂ ನೀಡುವ ಜವಾಬ್ದಾರಿ ಬಿಟ್ಟು ಬೇರೇನನ್ನು ಹೊತ್ತುಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದು ಶಾಸಕ ಸಂಸದರಿಗೆ ಬೇಕಾಗಿಲ್ಲ.
* ಕೆ.ಎಸ್.ಗಣೇಶ್