ಗದಗ: 2021 ಮೇ ತಿಂಗಳಲ್ಲಿ ಅವಧಿ ಮುಕ್ತಾಯಗೊಂಡಿರುವ ಜಿಲ್ಲೆಯ ನಾಲ್ಕು ಗ್ರಾ.ಪಂ. ಹಾಗೂ ವಿವಿಧ ಕಾರಣಗಳಿಂದ ಆರು ಗ್ರಾ.ಪಂ.ಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಸೋಮವಾರ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆಯಿಂದಲೇ ಗ್ರಾಮಸ್ಥರು ಸರದಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತ ಚಲಾಯಿಸುತ್ತಿದ್ದಾರೆ.
ಗದಗ ತಾಲೂಕಿನ ಹರ್ಲಾಪುರ ಗ್ರಾ.ಪಂ.ಯ 12 ಸದಸ್ಯ ಸ್ಥಾನ, ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾ.ಪಂ. 14 ಸದಸ್ಯ ಸ್ಥಾನ, ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾ.ಪಂ. 13 ಸದಸ್ಯ ಸ್ಥಾನ ಹಾಗೂ ಶಾಂತಗೇರಿ ಗ್ರಾ.ಪಂ. 20 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಅದರೊಂದಿಗೆ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ಬಹಿಷ್ಕರಿಸಿದ್ದ ಗದಗ ತಾಲೂಕಿನ ತಾಲೂಕಿನ ಚಿಂಚಲಿ ಗ್ರಾ.ಪಂ. ವ್ಯಾಪ್ತಿಯ ನೀಲಗುಂದ ಕ್ಷೇತ್ರದ 7ಸದಸ್ಯ ಸ್ಥಾನ ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ ಅಸುಂಡಿ ಗ್ರಾ.ಪಂ., ಕುರ್ತಕೋಟಿ ಗ್ರಾ.ಪಂ.ಯ ತಲಾ ಒಂದು ಸ್ಥಾನ, ರೋಣ ತಾಲೂಕಿನ ಹೊಸಳ್ಳಿ ಗ್ರಾ.ಪಂ. ವ್ಯಾಪ್ತಿಯ ಜಿಗಳೂರ ಕ್ಷೇತ್ರದ 5 ಸದಸ್ಯ ಸ್ಥಾನ, ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾ.ಪಂ. ವ್ಯಾಪ್ತಿಯ ಗುಮ್ಮಗೋಳದ ಖಾಲಿ ಇರುವ 2 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಮತಗಟ್ಟೆಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಿಂದ ಮತಗಟ್ಟೆಗಳಲ್ಲಿ ಮತದಾರರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ. ಸ್ಯಾನಿಟೈಸರ್, ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.