Advertisement

ಗುರುತಿನ ಚೀಟಿ, ಆಧಾರ್‌ ಲಿಂಕ್‌ ನಲ್ಲೂ ಲೋಪ? ಕಡ್ಡಾಯವಲ್ಲದಿದ್ದರೂ ಬಲವಂತವಾಗಿ ಕ್ರಮ

12:17 AM Dec 19, 2022 | Team Udayavani |

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಜಾಗೃತಿ ಮೂಡಿಸುವಲ್ಲಾಗಿರುವ ಅಕ್ರಮದ ನಂತರ ಇದೀಗ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆಯಲ್ಲೂ ಸಾಕಷ್ಟು ಲೋಪವುಂಟಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ನಕಲಿ ಮತದಾರರು, ಎರಡೆರಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವುದನ್ನು ಪತ್ತೆ ಮಾಡುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆಗೆ ಕ್ರಮ ಕೈಗೊಳ್ಳುತ್ತಿದೆ. ಈ ಪ್ರಕ್ರಿಯೆ ಕಡ್ಡಾಯವಲ್ಲದಿದ್ದರೂ ಮತದಾರರು ತಮ್ಮ ಇಚ್ಛೆಯಂತೆ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಮಾಡಿಕೊಳ್ಳಬಹುದಾಗಿದೆ.

ಅಲ್ಲದೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಕೂಡ ಆಧಾರ್‌ ಜೋಡಣೆ ಕಡ್ಡಾಯವಲ್ಲ ಎಂದು ತಿಳಿಸಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ 2023ರ ಮಾರ್ಚ್‌ ಒಳಗೆ ಶೇ. 100 ಮತದಾರರ ಗುರುತಿನ ಚೀಟಿಗಳನ್ನು ಆಧಾರ್‌ ಜೋಡಣೆ ಮಾಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿರಿಯ ಚುನಾವಣಾಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯವಲ್ಲ ಹಾಗೂ ಮತದಾರರ ಮೇಲೆ ಯಾರೂ ಒತ್ತಡ ಹೇರಬಾರದು ಎಂದು ತಿಳಿಸಿದೆ. ಆದರೆ, ಅನೌಪಚಾರಿಕವಾಗಿ ಹಿರಿಯ ಚುನಾವಣಾಧಿಕಾರಿಗಳು ಬಿಎಲ್‌ಒ ಸೇರಿ ಇನ್ನಿತರ ಅಧಿಕಾರಿಗಳಿಗೆ 2023ರ ಮಾರ್ಚ್‌ ವೇಳೆಗೆ ಆಧಾರ್‌ ಜೋಡಣೆ ಶೇ. 100 ಪೂರ್ಣಗೊಳ್ಳಬೇಕು ಎಂದು ತಿಳಿಸುತ್ತಿದ್ದಾರೆ. ಅದರಲ್ಲೂ ಬಿಎಲ್‌ಒಗಳ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಈ ಕಾರ್ಯ ಮಾಡುವಂತೆಯೂ ತಿಳಿಸಲಾಗತ್ತಿದೆ.

ಬೆಂಗಳೂರು ನಗರ ಜಿಲ್ಲೆ ಹಿಂದೆ
ಆಧಾರ್‌ ಜೋಡಣೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಂದ ಬರುತ್ತಿರುವ ಒತ್ತಡ ಹಿನ್ನೆಲೆಯಲ್ಲಿ ತಾಲೂಕು, ಗ್ರಾಮ ಮಟ್ಟದ ಅಧಿಕಾರಿಗಳು ಮತದಾರರಿಗೆ ತಿಳಿಯದೆಯೇ ಅವರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುತ್ತಿದ್ದಾರೆ. ಅದರಲ್ಲೂ ವಿವಿಧ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಹಾಗೂ ಕೃಷಿ ಸಾಲ ಸೇರಿ ಇನ್ನಿತರ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್‌ ಗುರುತಿನ ಚೀಟಿ ಜತೆಗೆ ಮತದಾರರ ಗುರುತಿನ ಚೀಟಿಯನ್ನು ಪಡೆಯಲಾಗುತ್ತಿದೆ. ಜತೆಗೆ ಗ್ರಾಮ ಲೆಕ್ಕಿಗರು ಗ್ರಾಮಸ್ಥರ ಬಳಿಗೆ ತೆರಳಿ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯ ಎಂದು ಹೇಳುತ್ತಾ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುತ್ತಾರೆ. ಈ ಕಾರಣದಿಂದಲೇ ಬೆಂಗಳೂರು ನಗರ ಜಿಲ್ಲೆಯಲ್ಲಿ ಆಧಾರ್‌ ಸಂಖ್ಯೆ ಜೋಡಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ.

Advertisement

ಶೇ. 69.52 ಮತದಾರರ ಆಧಾರ್‌ ಜೋಡಣೆ
ಸದ್ಯ ರಾಜ್ಯದಲ್ಲಿ 5,08,53,836 ಮತದಾರರಿದ್ದಾರೆ. ಅದರಲ್ಲಿ ಈಗಾಗಲೇ 3,53,55,654 ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಸಂಖ್ಯೆಗೆ ಜೋಡಣೆ ಮಾಡಲಾಗಿದೆ. ಅದರಂತೆ ಶೇ. 69.52 ಮತದಾರರು ಈಗಾಗಲೆ ತಮ್ಮ ಗುರುತಿನ ಚೀಟಿಯನ್ನು ಆಧಾರ್‌ ಸಂಖ್ಯೆಗೆ ಜೋಡಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ತುಮಕೂರು ಜಿಲ್ಲೆಯಲ್ಲಿ ಶೇ. 89.23 ಪ್ರಗತಿ ಸಾಧಿಸಲಾಗಿದೆ. ಅದೇ ಬೆಂಗಳೂರಿನಲ್ಲಿ ಶೇ. 30 ದಾಟಿಲ್ಲ.

ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?
ತುಮಕೂರು        ಶೇ.89.23
ಬಾಗಲಕೋಟೆ     ಶೇ.87.96
ಉಡುಪಿ               ಶೇ. 85.72
ಉತ್ತರಕನ್ನಡ      ಶೇ.85.59
ಮಂಡ್ಯ               ಶೇ. 85.59

ಅತಿ ಕಡಿಮೆ
ಬೆಂಗಳೂರು ದಕ್ಷಿಣ – ಶೇ.21.13
ಬಿಬಿಎಂಪಿ ಕೇಂದ್ರ   -ಶೇ.27.05
ಬೆಂಗಳೂರು ನಗರ   -ಶೇ.28.32
ಬಿಬಿಎಂಪಿ ಉತ್ತರ   -ಶೇ.31.63
ಮೈಸೂರು                ಶೇ. 62.65

– ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next