Advertisement

ಹುಣಸೂರು ನಗರಸಭೆಗೆ ಫೆ.9ಕ್ಕೆ ಚುನಾವಣೆ

09:41 PM Jan 15, 2020 | Lakshmi GovindaRaj |

ಹುಣಸೂರು: ಹುಣಸೂರು ನಗರಸಭೆಗೆ ಫೆಬ್ರವರಿ 9 ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಸೀಮಿತವಾಗಿರುವಂತೆ ಚುನಾವಣಾ ಮಾದರಿ ನೀತಿ ಸಂಹಿತೆ ಜ.14 ರಿಂದ ಫೆ.11ರ ವರೆಗೆ ಜಾರಿಯಲ್ಲಿರಲಿದೆ ಎಂದು ಉಪ ವಿಭಾಗಾಧಿಕಾರಿ ಬಿ.ಎನ್‌.ವೀಣಾ ತಿಳಿಸಿದರು. ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಪಕ್ಷಗಳ ಮುಖಂಡರ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ, ಚುನಾವಣೆ ವೇಳಾಪಟ್ಟಿ ಕುರಿತು ಮಾಹಿತಿ ನೀಡಿದರು.

Advertisement

ವೇಳಾಪಟ್ಟಿ: ನಗರಸಭೆಗೆ ಜ.21 ರಂದು ಚುನಾವಣಾ ಅಧಿಸೂಚನೆ ಹೊರಡಲಿದ್ದು, 21 ರಿಂದ ಜ.28ರ ವರೆಗೆ ನಾಮಪತ್ರ ಸಲ್ಲಿಸಬಹುದು. ಜ.29ಕ್ಕೆ ನಾಮಪತ್ರ ಪರಿಶೀಲನೆ, ಜ.31 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆದಿನ, ಫೆ.9 ರ ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಫೆ.11ರಂದು ಮತ ಎಣಿಕೆ ನಡೆಯಲಿದೆ.

ಎಲ್ಲೆಲ್ಲಿ ನಾಮಪತ್ರ ಸ್ವೀಕಾರ: ಒಟ್ಟು 31 ವಾರ್ಡ್‌ಗಳ ನಾಮಪತ್ರ ಸ್ವೀಕಾರಕ್ಕಾಗಿ 1ರಿಂದ 8ನೇ ವಾರ್ಡ್‌ ವರೆಗೆ ಸೇತುವೆಯ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಚೇರಿ, 9 ರಿಂದ 16ನೇ ವಾರ್ಡ್‌ವರೆಗೆ ತಾಲೂಕು ಪಂಚಾಯ್ತಿ ಕಚೇರಿ, 17ರಿಂದ 24ನೇ ವಾರ್ಡ್‌ವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ 25 ರಿಂದ 31ನೇ ವಾರ್ಡ್‌ವರೆಗೆ ಕೃಷಿ ಇಲಾಖೆಯ ಡಿ.ಡಿ. ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು.

ಅಭ್ಯರ್ಥಿಗಳು ತಮ್ಮ ನಾಮಪತ್ರದೊಂದಿಗೆ ತಮ್ಮ ಹಿನ್ನೆಲೆ, ಸ್ವ ವಿವರ, ವಿದ್ಯಾ ಅರ್ಹತೆ, ಆದಾಯದ ಮೂಲ, ಚರಾಸ್ತಿ-ಸ್ಥಿರಾಸ್ತಿ ವಿವರಗಳನ್ನು ಪರಿಷ್ಕೃತ ನಮೂನೆಯಲ್ಲಿ ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು, ನಾಲ್ಕನೇ ಶನಿವಾರವೂ ನಾಮಪತ್ರ ಸ್ವೀಕರಿಸಲಾಗುವುದು. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ಅವಧಿಯೊಳಗೆ ಲೆಕ್ಕಪತ್ರ ಸಲ್ಲಿಸಬೇಕು.

41,139 ಮತದಾರರು: ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಂದ ಒಟ್ಟು 41,139 ಮತದಾರರಿದ್ದು, ಈ ಪೈಕಿ 20,749 ಮಹಿಳೆಯರು ಹಾಗೂ 20,390 ಪುರುಷ ಮತದಾರರಿದ್ದು, ಒಟ್ಟಾರೆ 59 ಮಂದಿ ಮಹಿಳಾ ಮತದಾರರೇ ಹೆಚ್ಚಿರುವುದು ಈ ಚುನಾವಣೆ ವಿಶೇಷ.

Advertisement

ನಗರಸಭೆಯಲ್ಲೇ ಮತ ಎಣಿಕೆ: ಈ ಬಾರಿ ಮತದಾನಕ್ಕೆ ಇವಿಎಂ ಮತಯಂತ್ರ ಬಳಕೆ ಮಾಡಲಾಗುತ್ತಿದ್ದು, ಮಸ್ಟರಿಂಗ್‌, ಡಿ.ಮಸ್ಟರಿಂಗ್‌ ಹಾಗೂ ಮತ ಎಣಿಕೆಯು ನಗರಸಭೆಯ ಸಭಾಂಗಣದಲ್ಲೇ ನಡೆಯಲಿದೆ. ಮತಯಂತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಸಹ ಇರಲಿದೆ.

ಫ್ಲೆಕ್ಸ್‌-ಬ್ಯಾನರ್‌ ತೆರವುಗೊಳಿಸಿ: ನಗರ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳವರು, ಸಾರ್ವಜನಿಕರು ಅಳವಡಿಸಿರುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ತಕ್ಷಣದಿಂದಲೇ ತೆರವುಗೊಳಿಸಬೇಕು, ಅದೇ ರೀತಿ ಸರಕಾರಿ ಜಾಹೀರಾತಿನ ಹೋಲ್ಡರ್‌ಗಳಲ್ಲಿನ ಪ್ರಕಟಣೆಗಳನ್ನು ತೆರವುಗೊಳಿಸಲು ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಸಾರ್ವಜನಿಕರಿಗೆ ಸಂಬಂಧಿಸಿದ ಫಲಕ ಮತ್ತಿತರ ಪ್ರಕಟಣೆಯನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಸೂಚಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್‌ ಬಸವರಾಜ್‌, ನಗರಸಭೆ ಪೌರಾಯುಕ್ತ ಮಂಜುನಾಥ್‌ ಉಪಸ್ಥಿತರಿದ್ದರು, ಸಭೆಯಲ್ಲಿ ಕಾಂಗ್ರೆಸ್‌ ನಗರ ಅಧ್ಯಕ್ಷ ಎಚ್‌.ಎಸ್‌.ಶಿವಯ್ಯ, ಜೆಡಿಎಸ್‌ ಮುಖಂಡ ಶರವಣ, ಬಿಜೆಪಿಯ ನಾರಾಯಣ್‌ , ಎಸ್‌ಡಿಪಿಐನ ಸತೀಶ್‌ ಭಾಗವಹಿಸಿದ್ದರು.

ವಾರ್ಡ್‌ಗಳ ಮೀಸಲಾತಿ ವಿವರ: ವಾರ್ಡ್‌-1(ಎಸ್‌ಟಿ), ವಾರ್ಡ್‌-2(ಎಸ್‌ಟಿ ಮಹಿಳೆ), ವಾರ್ಡ್‌-3 ಮತ್ತು 4 (ಬಿಸಿಎಂ (ಎ)ಮಹಿಳೆ), ವಾರ್ಡ್‌-5 (ಬಿಸಿಎಂ(ಎ), ವಾರ್ಡ್‌-6(ಎಸ್‌ಟಿ), ವಾರ್ಡ್‌-7 ಮತ್ತು 8 (ಸಾಮಾನ್ಯ), ವಾರ್ಡ್‌-9 (ಬಿಸಿಎಂ(ಎ)ಮಹಿಳೆ), ವಾರ್ಡ್‌-10(ಎಸ್‌ಸಿ), ವಾರ್ಡ್‌-11.(ಬಿಸಿಎಂ(ಎ), ವಾರ್ಡ್‌-12 (ಸಾಮಾನ್ಯ), ವಾರ್ಡ್‌-13 (ಬಿಸಿಎಂ(ಎ), ವಾರ್ಡ್‌-14 ಮತ್ತು 15 (ಸಾಮಾನ್ಯ ಮಹಿಳೆ),

ವಾರ್ಡ್‌-16(ಸಾಮಾನ್ಯ), ವಾರ್ಡ್‌-17 (ಎಸ್‌ಸಿ), ವಾರ್ಡ್‌-18 (ಬಿಸಿಎಂ(ಬಿ), ವಾರ್ಡ್‌-19 (ಸಾಮಾನ್ಯ), ವಾರ್ಡ್‌-20 (ಸಾಮಾನ್ಯ ಮಹಿಳೆ), ವಾರ್ಡ್‌-21(ಎಸ್‌ಸಿ.ಮಹಿಳೆ), ವಾರ್ಡ್‌-22(ಸಾಮಾನ್ಯ), ವಾರ್ಡ್‌-23(ಎಸ್‌ಸಿ ಮಹಿಳೆ), ವಾರ್ಡ್‌-24(ಸಾಮಾನ್ಯ ಮಹಿಳೆ), ವಾರ್ಡ್‌-25(ಎಸ್‌ಸಿ), ವಾರ್ಡ್‌-26 (ಸಾಮಾನ್ಯ), ವಾರ್ಡ್‌-27, 28, 29 ಮತ್ತು 30 (ಸಾಮಾನ್ಯ ಮಹಿಳೆ) ಹಾಗೂ ವಾರ್ಡ್‌-31 (ಸಾಮಾನ್ಯ).

Advertisement

Udayavani is now on Telegram. Click here to join our channel and stay updated with the latest news.

Next