Advertisement
ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಾಧ್ಯಾಸಾಧ್ಯತೆ ವಿಷಯಕ್ಕಿಂತ ಪಕ್ಷದೊಳಗಿನ ಅಸಮಾಧಾನವೇ ಹೆಚ್ಚು ಸುದ್ದಿಯಾಗುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ಗಳೆರಡರಲ್ಲೂ ಇದೆ. ಹೀಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳಲ್ಲಿ ಸಾಕಷ್ಟು ಆತಂಕ ಕಾಣುತ್ತಿದೆ. ರಾಷ್ಟ್ರೀಯ ಪಕ್ಷಗಳಲ್ಲಿನ ಈ ಅಸಮಾಧಾನದ ಲಾಭ ಪಡೆಯಲು ಮುಂದಾ ಗಿರುವ ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರ ಒಂದು ರೀತಿ ಯಲ್ಲಿ ಈ ಚುನಾವಣೆಯಲ್ಲಿ ಕಪ್ಪುಕುದುರೆಯಂತೆ ಕಾಣುತ್ತಿ ದ್ದಾರೆ. ಅನಿರೀಕ್ಷಿತ ಬೆಳವಣಿಗೆಗಳು ನಡೆದು ಬನ್ನೂರ ವಿಜಯದ ಮಾಲೆ ಧರಿಸಿದರೂ ಅಚ್ಚರಿ ಪಡಬೇಕಿಲ್ಲ.
Related Articles
ಕಳೆದೆರಡು ಚುನಾವಣೆಗಳನ್ನು ಯಾವುದೇ ಸಮಸ್ಯೆಯಿಲ್ಲದೆ ಗೆದ್ದಿದ್ದ ಬಿಜೆಪಿಯ ಅರುಣ ಶಹಾಪುರಗೆ ಈ ಬಾರಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗಿವೆ.
Advertisement
ಮುಖ್ಯವಾಗಿ ಅಸಮಾಧಾನ ಪಕ್ಷದೊಳಗೆ ಹಾಗೂ ಹೊರಗಡೆ ತೀವ್ರವಾಗಿರುವುದು ಅವರಿಗೆ ಸಂಕಷ್ಟ ತಂದಿಟ್ಟಿದೆ. ಇದು ಬೆಳಗಾವಿ, ವಿಜಯಪುರ, ಬಾಗಲಕೋಟೆ ಮೂರೂ ಜಿಲ್ಲೆಗಳಲ್ಲೂ ಕಾಣಿಸಿಕೊಂಡಿರುವುದು ಗಮನಿಸಬೇಕಾದ ಅಂಶ.
ಇನ್ನೊಂದು ಕಡೆ ಕೆಲವು ಶಿಕ್ಷಕರ ಸಂಘಟನೆಗಳು ಒಂದಾಗಿ ಶಹಾಪುರ ವಿರುದ್ಧ ಪ್ರಚಾರ ಮಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಪಕ್ಷದ ಜತೆಗೆ ಶಿಕ್ಷಕ ಸಮುದಾಯದಲ್ಲಿ ಅರುಣ ಶಹಾಪುರ ಬಗ್ಗೆ ಮೊದಲಿದ್ದ ಅಭಿಪ್ರಾಯ ಬದಲಾಗಿದೆ. ಅತ್ಯಂತ ಕಷ್ಟದ ಸಮಯದಲ್ಲಿ ನೆರವಿಗೆ ಬರಲಿಲ್ಲ. ಕೊರೊನಾ ಸಮಯದಲ್ಲಿ ಸಾಕಷ್ಟು ಶಿಕ್ಷಕರು ಕೆಲಸ ಕಳೆದುಕೊಂಡರು. ಅವರಿಗೆ ಮರಳಿ ಕೆಲಸ ಕೊಡಿಸಲು ಮುಂದಾಗಲಿಲ್ಲ. ಬಡ್ತಿ ಮತ್ತು ವೇತನ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲಿಲ್ಲ ಎಂಬ ನೋವು ಶಿಕ್ಷಕರಲ್ಲಿದೆ.
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಶಹಾಪುರ ಹೊರಗಿನವರು ಎಂಬ ಭಾವನೆ ಇದ್ದರೆ ವಿಜಯಪುರ ಜಿಲ್ಲೆಯಲ್ಲಿ ನಮ್ಮವರಿದ್ದರೂ ಏನೂ ಮಾಡಲಿಲ್ಲ ಎಂಬ ಬೇಸರ ಇದೆ. ಈ ಎಲ್ಲ ಅಂಶಗಳು ಶಹಾಪುರಗೆ ಮುಳುವಾಗುವ ಸಾಧ್ಯತೆಗಳಿವೆ.
ಹುಕ್ಕೇರಿಗೆ ಹಿರಿಯರ ವಿಶ್ವಾಸಇದುವರೆಗೆ ವಿಧಾನಸಭೆಯಿಂದ ಶಾಸಕರಾಗಿ, ನಂತರ ಸಂಸದರಾಗಿ ಒಳ್ಳೆಯ ಹೆಸರು ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಈಗ ವಿಧಾನ ಪರಿಷತ್ ಮೂಲಕ ಮತ್ತೂಂದು ರಾಜಕೀಯ ಇನಿಂಗ್ಸ್‌ಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಪ್ರಕಾಶ ಹುಕ್ಕೇರಿ ಬಗ್ಗೆ ಬೇರೆ ಅಭಿಪ್ರಾಯ ಇಲ್ಲ. ಆದರೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದವರು ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿಲ್ಲದವರು ಸ್ಪರ್ಧಿಸುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿಬಂದಿವೆ. ಪ್ರಕಾಶ ಹುಕ್ಕೇರಿಗೆ ಇದೊಂದೇ ಸಮಸ್ಯೆ. ಹುಕ್ಕೇರಿ ಶಿಕ್ಷಕರ ಕ್ಷೇತ್ರಕ್ಕೆ ಹೊಸಬರಾಗಿದ್ದರೂ ಕಾಂಗ್ರೆಸ್‌ನ ಹಿರಿಯ ನಾಯಕರು ಇವರ ಬೆಂಬಲಕ್ಕೆ ನಿಂತಿದ್ದಾರೆ. ವಿಜಯಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಹುಕ್ಕೇರಿಗೆ ಆನೆಬಲ ಬಂದಂತಾಗಿದೆ. ಬಾಗಲಕೋಟೆಯ ಹಳೆಯ ಕಾಂಗ್ರೆಸ್ ನಾಯಕರು ಸಹ ಹುಕ್ಕೇರಿ ಪರ ನಿಂತಿದ್ದಾರೆ. ಇದರ ಜತೆ ತೆರೆಮರೆಯಲ್ಲಿ ನಡೆದಿರುವ ಹೊಂದಾಣಿಕೆ ರಾಜಕಾರಣ ಹುಕ್ಕೇರಿ ಮುಖದಲ್ಲಿ ಸ್ವಲ್ಪ ಗೆಲುವಿನ ನಗು ಮೂಡಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಂದ ಹೊಂದಾಣಿಕೆ ?
ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಅವರನ್ನು ಬೆಂಬಲಿಸುವುದು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ ಹುಕ್ಕೇರಿ ಅವರಿಗೆ ಮತ ಹಾಕಿಸುವುದು ಎರಡೂ ಪಕ್ಷಗಳಲ್ಲಿ ಆಗಿರುವ ಹೊಂದಾಣಿಕೆ ಎಂಬ ಮಾತುಗಳು ದಟ್ಟವಾಗಿವೆ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ಮತಬ್ಯಾಂಕ್ ಇಲ್ಲ. ಹೀಗಾಗಿ ಪಕ್ಷದ ಹಳೆಯ ನಾಯಕರು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬನೆಯಾಗಬೇಕಿದೆ. ಇದರ ಜತೆಗೆ ಹೊಂದಾಣಿಕೆ ರಾಜಕಾರಣ ಸಹ ಬಹಳ ಮುಖ್ಯ ಪಾತ್ರವಹಿಸಲಿದೆ. ಪಕ್ಷದಲ್ಲಿ ಅಥವಾ ಶಿಕ್ಷಕರಲ್ಲಿ ಅಸಮಾಧಾನ ಇಲ್ಲ. ನಾನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಬೇಕು. ಶಿಕ್ಷಕರ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ಮಾಡಿದ್ದೇನೆ. ಇದು ಶಿಕ್ಷಕ ಸಮುದಾಯಕ್ಕೆ ಗೊತ್ತಿದೆ. ಹೀಗಾಗಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ಗೆ ಸೋಲಿನ ಭೀತಿ ಇದೆ. ಅದಕ್ಕೆ ಅವರು ಬಿಜೆಪಿಯವರನ್ನು ಸಂಪರ್ಕ ಮಾಡುತ್ತಿದ್ದಾರೆ.
– ಅರುಣ ಶಹಾಪುರ, ಬಿಜೆಪಿ ಅಭ್ಯರ್ಥಿ ಶಿಕ್ಷಕ ಸಮುದಾಯಕ್ಕೆ ನಾನು ಹೊಸಬನಲ್ಲ.
ಈ ಹಿಂದೆ ಶಾಸಕನಾಗಿದ್ದಾಗ ಶಿಕ್ಷಕರ ಹಲವಾರು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಿದ್ದೇನೆ. ಸರಕಾರದ ಮೇಲೆ ನಿರಂತರ ಒತ್ತಡ ಹಾಕಿದ್ದೇನೆ. ಈ ಬಾರಿ ನನ್ನನ್ನು ಗೆಲ್ಲಿಸಬೇಕು ಎಂದು ಶಿಕ್ಷಕರೇ ನಿರ್ಧಾರ ಮಾಡಿದ್ದಾರೆ.
– ಪ್ರಕಾಶ ಹುಕ್ಕೇರಿ, ಕಾಂಗ್ರೆಸ್ ಅಭ್ಯರ್ಥಿ – ಕೇಶವ ಆದಿ