ಸಿರುಗುಪ್ಪ: ವಿಧಾನಸಭೆಗೆ ನಡೆಯುವ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸಲು, ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಚುನಾವಣಾ ದೂರುಗಳ ಕಂಟ್ರೂಲ್ ರೂಂ ತೆರೆಯಲಾಗಿದೆ ಎಂದು ಜಿಲ್ಲಾ ಚುನಾವಣಾ ವೆಚ್ಚ ಅಧಿಕಾರಿ ಡಾ| ಚೆನ್ನಪ್ಪ ಹೇಳಿದರು.
ನಗರದ ವಿಜಯಮೇರಿ ಶಾಲೆಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಚುನಾವಣಾ ಆಯೋಗ ವತಿಯಿಂದ ಚುನಾವಣಾ ಅಧಿಕಾರಿಗಳಿಗೆ ವೆಚ್ಚಗಳ ಪರಿಶೀಲನೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೂರುಗಳನ್ನು ಆಧರಿಸಿ ಎಂಸಿಸಿ ತಂಡಗಳು ಹಾಗೂ ಫ್ಲೆàಯಿಂಗ್ ಸ್ಕ್ಯಾಡ್ ತಂಡಗಳು ಸ್ಥಳಕ್ಕೆ ತೆರಳಿ ಅಕ್ರಮವಾಗಿ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ ಮದ್ಯ ಕಂಡುಬಂದಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ಈ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೆ ಅಬಕಾರಿ ಇಲಾಖೆಯು ಅಕ್ರಮ ಮದ್ಯವನ್ನು ಜಪ್ತಿಮಾಡಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಿದೆ ಎಂದರು.
ಮತದಾರರಿಗೆ ಹಂಚಲು ಹಣ, ಸೀರೆ, ಉಡುಗೊರೆಗಳು ಕಂಡುಬಂದಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಪೊಲೀಸ್ ಸಿಬ್ಬಂದಿಯು ಜಪ್ತಿಮಾಡಿ ಮೊಕದ್ದಮೆ ದಾಖಲಿಸಿಕೊಳ್ಳಲಿದೆ. ಅಭ್ಯರ್ಥಿಗಳು ತಾವು ನೀಡುವ ಹಣ ಹಾಗೂ ಉಡುಗೊರೆ ಜೊತೆಗೆ ತಮ್ಮ ಚಿಹ್ನೆ, ಪಕ್ಷದ ಚಿಹ್ನೆ ಇರುವ ಕರಪತ್ರ, ಪಕ್ಷೇತರ ಅಭ್ಯರ್ಥಿ ತಮ್ಮ ಚುನಾವಣಾ ಚಿಹ್ನೆಯುಳ್ಳ ಕರಪತ್ರ ಮತದಾರರಿಗೆ ನೀಡುತ್ತಾರೆ. ಅಂತಹ ಕರಪತ್ರಗಳನ್ನು ಸಂಗ್ರಹಿಸಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಹೇಳಿದರು.
ಪ್ರತಿ ಎಂಎಂಸಿ. ಹಾಗೂ ಫ್ಲೆಯಿಂಗ್ ಸ್ಕ್ವಾಡ್ಸ್ ತಂಡಗಳು ತಮಗೆ ಸೂಚಿಸಿದ ಪ್ರದೇಶದ ವ್ಯಾಪ್ತಿಯಲ್ಲಿ ಹಗಲು ಮತ್ತು ರಾತ್ರಿ ಪರಿಶೀಲನೆ ನಡೆಸಬೇಕು. ತಂಡಗಳ ಚಲನೆಯನ್ನು ನಿಗಾವಹಿಸಲು ಜಿಪಿಎಸ್ ಅಳವಡಿಸಿದ ವಾಹನಗಳನ್ನು ಒಬ್ಬ ವಿಡಿಯೋ ಗ್ರಾಫರ್, ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನೀಡಲಾಗುವುದು ಎಂದರು.
ಪರಿಶೀಲನೆ ಮಾಡಿದ ಪ್ರತಿಯೊಂದು ವಿವರಗಳನ್ನು ಪ್ರತಿನಿತ್ಯವೂ ಮೇಲಧಿಕಾರಿಗಳಿಗೆ ವರದಿ ನೀಡುವುದು ಕಡ್ಡಾಯ. ಗಡಿಭಾಗದಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಅಂತಾರಾಜ್ಯಗಳಿಂದ ಬರುವ ವಸ್ತುಗಳು, ಹಣ, ಉಡುಗೊರೆ, ಅಕ್ರಮ ಮದ್ಯ, ದಾಖಲೆಗಳಿಲದೇ ಸಾಗಿಸುತ್ತಿರುವ ವಸ್ತುಗಳು ಪತ್ತೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಪು ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಎಂಸಿಸಿ ತಂಡಗಳ ಮುಖ್ಯಸ್ಥರ ಫ್ಲೆಯಿಂಗ್ ಸ್ಕ್ವಾಡ್ಸ್ ಹಾಗೂ ದೂರು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಜನರಿಗೆ ಪ್ರಚಾರ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ದೂರುಗಳು ದಾಖಲಾಗುವ ಸಂಭವವಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಜಾಗೃತರಾಗಿರಬೇಕು. ಚುನಾವಣಾ ಜಾಗೃತ ತಂಡಗಳ ಅಧಿಕಾರಿಗಳಿಗೆ ಗುರುತಿನ ಚೀಟಿ, ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಎಸ್. ಪದ್ಮಕುಮಾರಿ, ತಾಪಂ.ಇಒ ಶಿವಪ್ಪ ಸುಬೇದಾರ್, ಚುನಾವಣಾ ಹಾಗೂ ಸೆಕ್ಟರ್ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.