Advertisement

ಎಲೆಕ್ಷನ್‌ ಎಫೆಕ್ಟ್: ಶೇ.23.62 ಮದ್ಯ ಮಾರಾಟ ಕುಸಿತ

12:50 PM Apr 24, 2019 | Suhan S |

ಮಂಡ್ಯ: ಸಾಮಾನ್ಯ ದಿನಗಳಲ್ಲಿ ಮದ್ಯದ ಹೊಳೆಯೇ ಹರಿದಾಡುವ ಮಂಡ್ಯ ಜಿಲ್ಲೆಯೊಳಗೆ ಲೋಕಸಭಾ ಚುನಾವಣಾ ನೀತಿ ಸಂಹಿತೆಯಿಂದಾಗಿ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದೆ. ಮಾರ್ಚ್‌ ಹಾಗೂ ಏಪ್ರಿಲ್ ತಿಂಗಳಲ್ಲಿ ಶೇ.23..62ರಷ್ಟು ಮದ್ಯ ಮಾರಾಟ ಕುಸಿತ ಕಂಡಿದೆ.

Advertisement

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಮದ್ಯ ಮಾರಾಟಕ್ಕೆ ತೀವ್ರ ತಡೆಯೊಡ್ಡಲಾಗಿತ್ತು. ಹೀಗಾಗಿ ಮಾರ್ಚ್‌ ತಿಂಗಳ ಗುರಿ 2,03,964 ಬಾಕ್ಸ್‌ಗಳಲ್ಲಿ 1,54,371(ಶೇ.75.69) ಮಾತ್ರ ಮದ್ಯದ ಬಾಕ್ಸ್‌ಗಳು ಮಾರಾಟ ವಾಗಿದ್ದು, ನಿಗದಿತ ಗುರಿಯಲ್ಲಿ ಶೇ.23.62 ಮದ್ಯದ ಮಾರಾಟಕ್ಕೆ ಹಿನ್ನಡೆಯಾಗಿದೆ. ಹಾಗೆಯೇ ಏಪ್ರಿಲ್ ತಿಂಗಳಲ್ಲಿ 1,24,369 ಬಾಕ್ಸ್‌ಗಳಿಗೆ 1,13,082 ಬಾಕ್ಸ್‌ಗಳು ಮಾರಾಟವಾಗಿದ್ದು, ಶೇ.90.92ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ: 2018ರ ಮಾರ್ಚ್‌ ತಿಂಗಳಲ್ಲಿ 1,86,557 ಬಾಕ್ಸ್‌ಗಳಿಗೆ 2,02,1209 ಬಾಕ್ಸ್‌ಗಳು ಮಾರಾಟದೊಂದಿಗೆ ಶೇ.108.34ರಷ್ಟು ಪ್ರಗತಿ ಸಾಧಿಸಲಾಗಿತ್ತು. ಏಪ್ರಿಲ್ನಲ್ಲಿ 1,31,149 ಬಾಕ್ಸ್‌ಗಳಿಗೆ 1,10,378 ಬಾಕ್ಸ್‌ಗಳು ಮಾರಾಟವಾಗಿ ಶೇ. ಶೇ.84.16 ಗುರಿ ಸಾಧಿಸಿತ್ತು. ಕಳೆದ ವರ್ಷವೂ ಏಪ್ರಿಲ್ನಲ್ಲೇ ವಿಧಾನಸಭೆ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಆ ತಿಂಗಳು ಮದ್ಯ ಮಾರಾಟ ನಿರೀಕ್ಷಿತ ಪ್ರಮಾಣಕ್ಕಿಂತಲೂ ಕಡಿಮೆಯಾಗಿತ್ತು.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯ ಮಾರಾಟದ ಗುರಿ ನಿಗದಿ ಹಾಗೂ ಮಾರಾಟ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ವರ್ಷ ಫೆಬ್ರವರಿ ತಿಂಗಳವರೆಗೆ ಮದ್ಯ ಮಾರಾಟ ಜೋರಾಗಿತ್ತು. ಅದರಲ್ಲೂ 2018ರಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ, ಲೋಕಸಭೆ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಹಲವು ಕಾರಣಗಳಿಂದ ತೆರವಾದ ಕಾರಣಕ್ಕೆ ನಡೆದ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಉಪ ಚುನಾವಣೆಗಳ ಪರಿಣಾಮ ಹಿಂದಿನ ವರ್ಷಕ್ಕಿಂತ ಹೆಚ್ಚು ಮದ್ಯ ಮಾರಾಟವಾಗಿತ್ತು.

ಚುನಾವಣೆ ಪರಿಣಾಮ: ಚುನಾವಣೆಗಳು ಬಂತೆಂದರೆ ಹಣ ಮತ್ತು ಮದ್ಯದ ಹೊಳೆ ಹರಿಯುವುದು ಸಾಮಾನ್ಯ. ಆದರೆ, ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಮದ್ಯ ಹೊಳೆ ಹರಿಯುವುದಿರಲಿ, ಮದ್ಯ ಮಾರಾಟದಲ್ಲೂ ನಿಗದಿತ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ.

Advertisement

ಈ ಬಾರಿಯ ಲೋಕಸಭೆ ಸಾರ್ವತ್ರಿಕ ಚುನಾವಣೆ ಮದ್ಯ ಮಾರಾಟದ ಮೇಲೆ ನೇರ ಪರಿಣಾಮ ಬೀರಿದೆ. ಮಾ.10ರಿಂದಲೇ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರಿಂದ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ಮೇಲೆ ಬಿಗಿ ನಿಯಂತ್ರಣ ಹೇರಲಾಗಿತ್ತು. ಜಿಲ್ಲಾದ್ಯಂತ 2 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ವಿಶೇಷವಾಗಿ ಅಕ್ರಮ ಮದ್ಯ ಸಾಗಾಣಿಕೆ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು.

ಮದ್ಯ ಮಾರಾಟಕ್ಕೆ ಬ್ರೇಕ್‌: ಚುನಾವಣಾ ಸಮಯದಲ್ಲಿ ಮದ್ಯದ ಹೊಳೆಯನ್ನೇ ಹರಿಸಿ ಜನರಿಗೆ ವಿವಿಧ ಪಕ್ಷಗಳು ಹಾಗೂ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುವಂತೆ ಆಮಿಷವೊಡ್ಡಬಹುದು ಎಂಬ ಕಾರಣಕ್ಕೆ ಚುನಾವಣಾ ಆಯೋಗವೇ ಮದ್ಯ ಮಾರಾಟಕ್ಕೆ ಮೂಗುದಾರ ಹಾಕಿತ್ತು. ಅಬಕಾರಿ ಇಲಾಖೆಯೂ ಸಹ ಮದ್ಯ ಮಾರಾಟದ ಮೇಲೆ ಸ್ವಯಂ ನಿಯಂತ್ರಣ ವಿಧಿಸಿಕೊಂಡು ಹಿಂದಿನ ವರ್ಷಕ್ಕಿಂತ ಶೇ.110ಕ್ಕಿಂತ ಹೆಚ್ಚು ಪ್ರಮಾಣದ ಮದ್ಯ ಮಾರಾಟವಾಗದಂತೆ ಎಚ್ಚರ ವಹಿಸಿತ್ತು.

ಇದಲ್ಲದೆ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಉತ್ಪಾದನಾ ಕಂಪನಿಗಳೂ ಸಹ ಮದ್ಯ ಉತ್ಪಾದಿಸುವ ಪ್ರಮಾಣವನ್ನು ಕಡಿಮೆ ಮಾಡಿದ್ದವು. ಕಂಪನಿಗಳು ಹಾಗೂ ಗೋದಾಮುಗಳಿಂದ ಅಬಕಾರಿ ಸನ್ನದ್ದು ಮಾರಾಟಗಾರರಿಗೆ ನಿಗದಿತ ಬೇಡಿಕೆಗಿಂತ ಕಡಿಮೆ ಪ್ರಮಾಣದ ಮದ್ಯ ಪೂರೈಸಿದ್ದವು. ಪರಿಣಾಮ ಮಾರ್ಚ್‌ ಮತ್ತು ಏಪ್ರಿಲ್ನಲ್ಲಿ ಗುರಿಗಿಂತಲೂ ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿತ್ತು.

ಮದ್ಯ ಮಾರಾಟ ಹಿನ್ನಡೆ: ಆರ್ಥಿಕ ವರ್ಷಾಂತ್ಯದ ಮಾಸಗಳಾದ ಫೆಬ್ರವರಿ ಮತ್ತು ಮಾರ್ಚ್‌ಗಳಲ್ಲಿ ಗುರಿಗಿಂತಲೂ ಹೆಚ್ಚಿನ ಮದ್ಯ ಮಾರಾಟವಾಗುವುದು ಸಾಮಾನ್ಯವಾಗಿತ್ತು. ಜನರಿಂದ ಅಷ್ಟು ಪ್ರಮಾಣದ ಮದ್ಯ ಖರೀದಿಯಾಗಿದ್ದರೂ ಸನ್ನದ್ದುಗಾರರು, ಮುಂದಿನ ಆರ್ಥಿಕ ವರ್ಷದಲ್ಲಿ ಮದ್ಯದ ಬೆಲೆ ವ್ಯತ್ಯಾಸವಾಗುತ್ತಿದ್ದ ಕಾರಣಕ್ಕೆ ಮಾರ್ಚ್‌ ತಿಂಗಳಲ್ಲೇ ಹೆಚ್ಚಿನ ಪ್ರಮಾಣದ ಮದ್ಯದ ಬಾಕ್ಸ್‌ಗಳನ್ನು ಕಂಪನಿಗಳಿಂದ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮದ್ಯದ ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ವರ್ಷಾಂತ್ಯದಲ್ಲಿ ನಿಗದಿತ ಗುರಿ ಸಾಧಿಸಲಾಗದೆ ಮದ್ಯ ಮಾರಾಟ ಹಿನ್ನಡೆ ಕಂಡಿದೆ.

447 ಪ್ರಕರಣ ದಾಖಲು: ಲೋಕಸಭೆ ಚುನಾವಣಾ ನೀತಿ ಸಂಹಿತಿ ಅವಧಿಯಲ್ಲಿ 81 ಹೀನಸ್‌, 99 ಶಾಪ್‌ ಲೈಸೆನ್ಸ್‌ ಉಲ್ಲಂಘನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ, ಸಾಗಾಣಿಕೆ ಸಂಬಂಧ 447 ಪ್ರಕರಣಗಳನ್ನು ಅಬಕಾರಿ ಇಲಾಖೆ ದಾಖಲಾಗಿದೆ. 1.29 ಕೋಟಿ ರೂ. ಮೌಲ್ಯದ 16,988 ಲೀಟರ್‌ ಮದ್ಯ, 6506 ಲೀಟರ್‌ ಬಿಯರ್‌ನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next