Advertisement

ಚುನಾವಣೆ ಅನುಮಾನ; ಸವಾಲಾಗುತ್ತಾ ನಿರ್ವಹಣೆ?

09:30 AM Jul 13, 2020 | Suhan S |

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆ.10ರ ನಂತರದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಬೇಕು. ಆದರೆ ಸದ್ಯದ ಸ್ಥಿತಿಯಲ್ಲಿ ಅದು ಅನುಮಾನವಾಗಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Advertisement

ಸೆ.10ಕ್ಕೆ ಮೇಯರ್‌ ಎಂ.ಗೌತಮ್‌ಕುಮಾರ್‌ ಸೇರಿ ಎಲ್ಲಾ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದೆ. ನಗರದಲ್ಲಿ ಸೋಂಕು ಆತಂಕವೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವೂ ಇಲ್ಲವಾದರೆ, ಸಂಕಷ್ಟದ ಸ್ಥಿತಿ ಎದುರಿ ಸುವುದು ಮತ್ತಷ್ಟು ಸವಾಲಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಪಾಲಿಕೆ ಸದಸ್ಯರು ಸದ್ಯ ಸ್ಥಳೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಆದರೆ,ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಆಡಳಿತಾತ್ಮಕ ವ್ಯವಸ್ಥೆ ಜಾರಿಯಾಗಲಿದೆ. ಬಿಬಿಎಂಪಿ ಆಯುಕ್ತರ ಜತೆಗೆ ಮತ್ತೂಬ್ಬ ಐಎಎಸ್‌ ಅಧಿಕಾರಿ ನೇಮಕವಾಗಲಿದ್ದಾರೆ. ಜತೆಗೆ ಬಿಬಿಎಂಪಿ ಆಯುಕ್ತರು ಕೆಲಸ ಮಾಡಲಿದ್ದಾರೆ. ಮೇಯರ್‌ ಸ್ಥಾನದಲ್ಲಿ ಐಎಎಸ್‌ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದು, ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದರಿಂದ ಕೆಲ ನಿರ್ಧಾರಗಳನ್ನು ತುರ್ತಾಗಿ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಪಾಲಿಕೆ ಸದಸ್ಯರು ಇಲ್ಲದೆ ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಅಷ್ಟು ತುರ್ತಾಗಿ ಸ್ಪಂದಿಸುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಸುದೀರ್ಘ‌ ಸಮಸ್ಯೆಗೆ ಪರಿಹಾರ: ನಗರದಲ್ಲಿ ಹಲವು ವರ್ಷಗಳಿಂದ ಸಮಸ್ಯೆ ಆಗಿರುವ ಕಸ ವಿಲೇವಾರಿ ಸೇರಿ ಕೆಲವು ಯೋಜನೆಗಳಿಗೆ ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮುಂದುವರಿಯುತ್ತಲೇ ಇದೆ. ಇದರಲ್ಲಿ ಹಸಿ-ಒಣ ಕಸಕ್ಕೆ ಪ್ರತ್ಯೇಕ ಟೆಂಡರ್‌ ಸಹ ಒಂದು. ಕಸ ವಿಲೇವಾರಿಗೆ ಪ್ರತ್ಯೇಕ ಮಂಡಳಿ ರಚಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ವರ್ಷದಿಂದ ಚರ್ಚೆ ನಡೆಯುತ್ತಲೇ ಇದೆ. ಅಂತಿಮ ರೂಪಕ್ಕೆ ಬರುತ್ತಿಲ್ಲ. ಸದ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯಲ್ಲಿ ಕಸ ವಿಲೇವಾರಿಗೆ ಪ್ರತ್ಯೇಕ ಮಂಡಳಿ ಮರೀಚಿಕೆ ಆಗುವ ಲಕ್ಷಣಗಳಿವೆ. ಆದರೂ ನಗರದ ಕಸ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ.

ಏಕಮುಖ ಆಡಳಿತವಾಗುವ ಅಪಾಯ: ಕೋವಿಡ್ ತುರ್ತು ಸಂದರ್ಭದಲ್ಲಿ ನಗರದಲ್ಲಿನ ಸೋಂಕಿತರ ಚಿಕಿತ್ಸೆ ಹಾಗೂ ವ್ಯವಸ್ಥೆ ಲೋಪ ಎತ್ತಿತೋರಿಸುವಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಮುಂದೆ ಸ್ಥಳೀಯ ಆಡಳಿತ ಇಲ್ಲದೆ ಇರುವುದರಿಂದ ವಿರೋಧ ಪಕ್ಷವೂ ಇಲ್ಲದಂತಾಗುತ್ತದೆ. ಇದರಿಂದ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳೇ ಅಂತಿಮವಾಗಲಿವೆ. ಅಲ್ಲದೆ, ಆಡಳಿತಾತ್ಮಕ ಅಧಿಕಾರಿಗಳು ಸಹಜವಾಗಿ ಸರ್ಕಾರದ ಆದೇಶಾ  ನುಸಾರ ತೀರ್ಮಾನ ತೆಗೆದುಕೊಳ್ಳಬೇಕಾಗುವುದರಿಂದ ಏಕಮುಖ ಆಡಳಿತವಾಗುವ ಅಪಾಯವೂ ಇದೆ.

ಈ ಹಿಂದೆ ಈಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಬಿಬಿಎಂಪಿ “ಅಡ್ಮಿನಿಸ್ಟ್ರೇಟಿವ್‌’ ಆಗಿದ್ದರು. 3-4 ತಿಂಗಳಲ್ಲೇ ನಗರದ ಹಲವು ಸಮಸ್ಯೆ ಪರಿಹರಿಸಿದ್ದರು. ಈಗ ಕೋವಿಡ್ ತುರ್ತು ಪರಿಸ್ಥಿತಿ ಇದೆ. ಈಗ ದಕ್ಷ ಅಧಿಕಾರಿಯೊಬ್ಬರ ನೇಮಕವಾಗಬೇಕು. ಇಲ್ಲವಾದರೆ ಸದ್ಯದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಅಂಬರೀಶ ತಿಳಿಸುತ್ತಾರೆ.

Advertisement

ಶಾಸಕರೇ ಕಿಂಗ್‌ ಆಗಲಿದಾರೆ? :  ಸದ್ಯದ ಪರಿಸ್ಥಿತಿಯಲ್ಲಿ ಕನಿಷ್ಠ 6 ತಿಂಗಳಿಂದ 1 ವರ್ಷ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಶಾಸಕರ ತೀರ್ಮಾನಗಳೇ ಅಂತಿಮ ಆಗುವ ಸಾಧ್ಯತೆ ಇದೆ. ಸದ್ಯ ಪ್ರತಿ ವಾರ್ಡ್‌ನ ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆದು ಕೆಲವು ಯೋಜನೆಗಳನ್ನು ಅಂತಿಮಗೊಳಿಸಬೇಕಾಗಿದೆ. ಆದರೆ, ಆಡಳಿತಾತ್ಮಕ ವ್ಯವಸ್ಥೆ ಜಾರಿಯಾದಲ್ಲಿ ಆಯಾ ಕ್ಷೇತ್ರದ ಸದಸ್ಯರ ಅಭಿಪ್ರಾಯ ಪಡೆದು ಮುಂದುವರಿಯಬಹುದಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿ.

ಕೋವಿಡ್ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಈ ವರ್ಷ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಪರಿಸ್ಥಿತಿ ಸಂಪೂರ್ಣ ಸುಧಾರಿಸಿದರೆ ಮಾತ್ರ ಚುನಾವಣೆ ಸಾಧ್ಯ.  ಮುನೀಂದ್ರ ಕುಮಾರ್‌, ಆಡಳಿತ ಪಕ್ಷದ ನಾಯಕ

ನಗರದಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಆಡಳಿತ ಇರಬೇಕಾಗಿತ್ತು. ನಗರದಲ್ಲಿನ ಪರಿಸ್ಥಿತಿ ನೋಡಿಕೊಂಡು ನಾವು ಪ್ರತಿಕ್ರಿಯಿಸಲಿದ್ದೇವೆ.  ಎಂ.ಶಿವರಾಜು, ಆಡಳಿತ ಪಕ್ಷದ ಮಾಜಿ ನಾಯಕ

 

– ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next