Advertisement

ಚುನಾವಣೆ: ರೆಸಾರ್ಟ್‌ನಲ್ಲಿ ಚರ್ಚೆ

07:20 AM Feb 03, 2019 | Team Udayavani |

ರಾಮನಗರ: ಲೋಕಸಭಾ ಚುನಾವಣೆಗಳು ಹತ್ತಿರವಾದಂತೆಲ್ಲ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿದೆರುತ್ತಿವೆ. ಇದಕ್ಕೆ ಬಿಜೆಪಿ ಹೊರತೇನಲ್ಲ. ಶನಿವಾರ ಸಂಜೆ ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪೂರ್ವಭಾವಿ ಸಭೆಯನ್ನು ಆಯೋಜಿಸಿರುವುದಾಗಿ ತಿಳಿದುಬಂದಿದೆ.

Advertisement

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಆ ಪಕ್ಷಗಳ ವಿರುದ್ಧ ರಾಜಕೀಯ ರಣತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳಾಗಿವೆ. ಬಿಜೆಪಿ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ತುಟಿ ಬಿಚ್ಚದ ಪಕ್ಷದ ಮುಖಂಡರು, ಯಾರೇ ಅಭ್ಯರ್ಥಿಯಾಗಲಿ ಅವರ ಗೆಲುವಿಗೆ ಶ್ರಮಿಸಿ ಎಂಬ ಮಂತ್ರವನ್ನು ಪಠಿಸಿದ್ದಾರೆ. ನಾಯಕರ ಮಾತಿನಲ್ಲಿ ಎಂ.ರುದ್ರೇಶ್‌ ಮತ್ತು ಸಿ.ಪಿ.ಯೋಗೇಶ್ವರ್‌ ಹೆಸರು ಹೆಚ್ಚಾಗಿ ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ.

ಸಭೆಗೆ ಸಿ.ಪಿ.ವೈ ಗೈರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ನಡೆದ ಸಭೆಯಲ್ಲಿ ಸಿ.ಪಿ.ಯೋಗೇಶ್ವರ್‌, ತುಳಸಿ ಮುನಿರಾಜು ಮತ್ತು ಎಂ.ರುದ್ರೇಶ್‌ ಅವರ ಹೆಸರುಗಳು ಪ್ರಸ್ತಾಪವಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ಸಿ.ಪಿ.ವೈ ನಿರಾಕರಿಸಿದ್ದು, ಎಂ.ರುದ್ರೇಶ್‌ ಅವರ ಬಗ್ಗೆ ಕಾರ್ಯಕರ್ತರ ಒಲವು ವ್ಯಕ್ತವಾಗಿ ಎಂ.ರುದ್ರೇಶ್‌ ಅವರ ಹೆಸರು ಜಿಲ್ಲೆಯಲ್ಲಿ ಪ್ರಚಾರವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಶನಿವಾರ ಈಗಲ್ಟನ್‌ ರೆಸಾರ್ಟ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ವಹಿಸಿದ್ದು, ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಗೈರಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಬೂತ್‌ ಮಟ್ಟದಲ್ಲಿ ಸಂಘಟನೆಗೆ ಸಲಹೆ: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಬೂತ್‌ ಮಟ್ಟದಲ್ಲಿ ಸಂಘಟನೆ ಕೈಗೊಳ್ಳುವಂತೆ ಮುಖಂಡರು ಸಲಹೆ ನೀಡಿದ್ದಾರೆ. ತಲಾ 25 ಕಾರ್ಯಕರ್ತರ ತಂಡವನ್ನು ರಚಿಸಿ ಹೊಣೆಗಾರಿಕೆಯಿಂದ ಸಂಘಟನೆ ಮಾಡುವಂತೆ ಸಲಹೆ ನೀಡಲಾಗಿದೆ. ಸಮಾವೇಶ, ಸಕ್ರಿಯ ಕಾರ್ಯಕರ್ತರ ನೋಂದಣಿ, ಕಾರ್ಯಕಾರಣಿ ಸಭೆ ನಡೆಸುವ ಕುರಿತು ಚರ್ಚೆ ನಡೆದಿದೆ.

ಕೇಂದ್ರದ ಸಾಧನೆಗಳೇ ಗೆಲುವಿನ ಮಂತ್ರ: ಪಕ್ಷ ಸಂಘಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ 5 ವರ್ಷಗಳಲ್ಲಿ ಜಾರಿಗೆ ತಂದಿರುವ ಮಹತ್ತರವಾದ ಯೋಜನೆಗಳು, ತೆಗೆದುಕೊಂಡ ಕಠಿಣ ನಿರ್ಧಾರಗಳು, ರಾಜ್ಯಕ್ಕೆ ಕೊಟ್ಟ ಸಹಕಾರ, ಆಯುಷ್ಮನ್‌ ಭಾರತದಂತಹ ಮಹತ್ವದ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಮನವರಿಕೆ ಮಾಡಿ ಎಂದು ಮುಖಂಡರು ಸಲಹೆ ನೀಡಿದ್ದಾಗಿ ಗೊತ್ತಾಗಿದೆ.

Advertisement

ಶುಕ್ರವಾರ ವಿತ್ತ ಸಚಿವ ಪಿಯೂಷ್‌ ಗೋಯೆಲ್‌ ಮಂಡಿಸಿದ 2019-20ನೇ ಸಾಲಿನ ಬಜೆಟ್ ರೈತರ, ಕಾರ್ಮಿಕರ, ಮಧ್ಯಮ ವರ್ಗದವರನ್ನು ಗುರಿಯಿರಿಸಿಕೊಂಡು ಮಂಡಸಿಲಾಗಿದೆ. ದೇಶಾದ್ಯಂತ ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಜೆಟ್‌ನಲ್ಲಿಯ ಅಂಶಗಳ ಬಗ್ಗೆಯೂ ಜನಸಾಮಾನ್ಯರ ಮನಮುಟ್ಟುವಂತೆ ವಿವರಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಪ್ರಚಾರಕ್ಕೆ ಕರೆ ತರುವಂತೆ ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯಕರ್ತರು ಮುಖಂಡರ ಗಮನ ಸೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಮುಖಂಡರಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರಭಾರಿ ಸಚ್ಚಿದಾನಂದ, ಕುಣಿಗಲ್‌ ಕೃಷ್ಣಕುಮಾರ್‌, ಎನ್‌.ಮುನಿರಾಜುಗೌಡ, ಸತ್ಯನಾರಾಯಣ, ರಾಮನಗರ ಜಿಪಂ ಮಾಜಿ ಅಧ್ಯಕ್ಷ ಸಿ.ಪಿ.ರಾಜೇಶ್‌, ಸ್ಥಳೀಯ ಪ್ರಮುಖರಾದ ಮುರಳೀಧರ, ಎಸ್‌.ಆರ್‌.ನಾಗರಾಜ್‌, ಜಿ.ವಿ.ಪದ್ಮನಾಭ ಮುಂತಾದವರು ಭಾಗವಹಿಸಿದ್ದರು. ಸಭೆಗೆ ಮುನ್ನ ಡಾ.ಶಿವಕುಮಾರಸ್ವಾಮೀಜಿ, ಕೇಂದ್ರ ಸಚಿವ ಅನಂತಕುಮಾರ್‌, ಮಾಜಿ ಕೇಂದ್ರ ಸಚಿವರಾದ ಜಾರ್ಜ್‌ ಫ‌ರ್ನಾಂಡಿಸ್‌, ಜಾಫ‌ರ್‌ ಷರೀಪ್‌, ಚಿತ್ರ ನಟ ಅಂಬರೀಷ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next