Advertisement

ಗುಜರಾತ್‌ನಲ್ಲಿ ಕೈ-ಕಮಲ ಕಾಳಗ

12:30 AM Mar 11, 2019 | |

ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ನಡುವೆ ಭರದ ಸಿದ್ಧತೆ ನಡೆದಿದೆ.  2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಿತ್ತು. ಕೇವಲ 15 ಸೀಟುಗಳ ಅಂತರದಿಂದ ಅದು ಸೋತಿತ್ತು. ಈ ಕಾರಣಕ್ಕಾಗಿಯೇ ಬಿಜೆಪಿಯು ಕಾಂಗ್ರೆಸ್‌ ಅನ್ನು  ಈ ಬಾರಿ ಹಗುರವಾಗಿ ತೆಗೆದುಕೊಳ್ಳುತ್ತಿಲ್ಲ. ತನ್ನ ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಕುತ್ತುಬಾರದಂತೆ ತಡೆಯಲು ಬಿಜೆಪಿ ಸಕಲ ಪ್ರಯತ್ನ ನಡೆಸಿದೆ. ಅಲ್ಲದೇ, ಕಾಂಗ್ರೆಸ್‌ಗೂ ಆಪರೇಷನ್‌ನ ಕತ್ತರಿ ಹಾಕುತ್ತಿದೆ. ಹಿಂದಿ ಹೃದಯ ಭಾಗಗಳೆಂದು ಕರೆಸಿಕೊಳ್ಳುವ 3 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇತ್ತೀಚೆಗಷ್ಟೇ ಜಯ ಭೇರಿ ಬಾರಿಸಿರುವ ಕಾಂಗ್ರೆಸ್‌, ಲೋಕಸಭಾ ಚುನಾವಣೆಯಲ್ಲಿ ಗುಜ ರಾತ್‌ನಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿ ಸುತ್ತಿದೆ. 2014ರ ಚುನಾವಣೆಯಲ್ಲಿ ಗುಜರಾತ್‌ನ 26 ಲೋಕ ಸಭಾ ಕ್ಷೇತ್ರಗಳಲ್ಲಿ ಒಂದನ್ನೂ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಿ ರಲಿಲ್ಲ, ಹೀಗಾಗಿ, ಈ  ಬಾರಿ ಕೆಲವು ಕ್ಷೇತ್ರಗಳಲ್ಲಾದರೂ ಗೆದ್ದು ಬಿಜೆಪಿಗೆ ಅಡ್ಡಗಾಲಾಗಬೇಕು ಎನ್ನುವ ಗುರಿಯಂತೂ ಅದಕ್ಕಿದೆ. 

Advertisement

ಈ ನಿಟ್ಟಿನಲ್ಲೇ ಅದು ಪಾಟೀದಾರ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ರನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ಮುಂದಾಗಿದೆ. ಇದೇ ಮಾರ್ಚ್‌ 12ರಂದು ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ಗೆ ಸೇರುವ ಹಾಗೂ ಕಾಂಗ್ರೆಸ್‌ ಟಿಕೆಟ್‌ ಮೇಲೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಆದರೆ, ಹಾರ್ದಿಕ್‌ ಪಟೇಲ್‌ರ ಮಹತ್ವಾಕಾಂಕ್ಷೆಗೆ ಈಗ ಕೋರ್ಟು ಪೆಟ್ಟು ನೀಡುವ ಸಾಧ್ಯತೆ ಇದೆ. ಎರಡು ವರ್ಷಗಳ ಹಿಂದೆ ಹಾರ್ದಿಕ್‌ ಪಟೇಲ್‌ರ ಮೇಲೆ ಕೆಳ ಹಂತದ ನ್ಯಾಯಾಲಯವೊಂದು “ಹಿಂಸೆ’ಗೆ ಪ್ರಚೋದನೆ ನೀಡಿದ, ಬಿಜೆಪಿ ನಾಯಕರ ಕಚೇರಿಯ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ 2 ವರ್ಷಗಳ ಸಾಧಾರಣ ಜೈಲು ಶಿಕ್ಷೆ ವಿಧಿಸಿತ್ತು.  ನಿಯಮದ ಪ್ರಕಾರ, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿ ಯಾ ದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈಗ ಹಾರ್ದಿಕ್‌ ಪಟೇಲ್‌, ಸ್ಥಳೀಯ ನ್ಯಾಯಾಲಯದ ತೀರ್ಪನ್ನು ತಡೆಹಿಡಿಯಬೇಕು ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಒಂದು ವೇಳೆ ಹೈಕೋರ್ಟ್‌ ಅವರ ಮನವಿಯನ್ನು ತಿರಸ್ಕರಿಸಿದರೆ, ಹಾರ್ದಿಕ್‌ ಚುನಾವಣೆಯಲ್ಲಿ ಸ್ಪರ್ಧಿಸಲಾರರು. ಇದೇ ಅವಧಿ ಯಲ್ಲೇ ಒಬಿಸಿ ನಾಯಕ ಅಲ್ಪೇಶ್‌ ಠಾಕೂರ್‌, ಕಾಂಗ್ರೆಸ್‌ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೀಗ ಅವರನ್ನು “ಸಮಾಧಾನ’ಪಡಿಸಲು ಕಾಂಗ್ರೆಸ್‌ ಯಶಸ್ವಿಯಾಗಿದೆ. ಇನ್ನು ಕನ್ಹಯ್ಯ ಕುಮಾರ್‌ ಮತ್ತು ದಲಿತ ನಾಯಕ ಜಿಗ್ನೇಶ್‌ ಮೇವಾನಿ ಬಿಜೆಪಿಯ ವಿರುದ್ಧ ಪ್ರಚಾರ ನಡೆಸುತ್ತಾ ಪರೋಕ್ಷವಾಗಿ ಕಾಂಗ್ರೆಸ್‌ಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತದೆ. 

ರಾಜಕೀಯ ಕುಟುಂಬಗಳ ಮೊರೆಹೋದ ಕಾಂಗ್ರೆಸ್‌: ಕಾಂಗ್ರೆಸ್‌ ಲೋಕಸಭಾ ಚುನಾವಣೆಗಳಿಗಾಗಿ ಕೆಲ ಅಭ್ಯರ್ಥಿಗಳ ಪಟ್ಟಿ ಯನ್ನು ಘೋಷಿಸಿದ್ದು ಇದರಲ್ಲಿ ಗುಜರಾತ್‌ನ 4 ಪ್ರಭಾವಿ ರಾಜಕಾರಣಿ ಗಳೂ ಇದ್ದಾರೆ. ಭರತ್‌ ಸಿಂಗ್‌ ಸೋಲಂಕಿ, ರಾಜು ಪರ್ಮಾರ್‌, ಪ್ರಶಾಂತ್‌ ಪಟೇಲ್‌ ಮತ್ತು ರಂಜಿತ್‌ ರಾಟ್ವಾ ರನ್ನು ಕಾಂಗ್ರೆಸ್‌ ನೆಚ್ಚಿಕೊಂಡಿರುವುದನ್ನು ನೋಡಿದರೆ ಅದು ಈ ಬಾರಿ ಗ್ರಾಮೀಣ ಭಾಗಗಳಲ್ಲಿನ ಮತಗಳನ್ನು ಗೆಲ್ಲಲು ಪ್ರಭಾವಿ “ರಾಜ ಕೀಯ ಕುಟುಂಬಗಳಿಗೇ’ ಮಣೆಹಾಕಲಿರುವುದು ನಿಶ್ಚಿತವೆನಿ ಸುತ್ತಿದೆ. 

ಆಪರೇಷನ್‌ ಕಮಲ, ಕೈ ತಳಮಳ: ಭಾರತೀಯ ಜನತಾ ಪಾರ್ಟಿ ಗುಜರಾತ್‌ನಲ್ಲಿ ಆಪರೇಷನ್‌ ಕಮಲ ಆರಂಭಿಸಿದೆ. ಕಾಂಗ್ರೆಸ್‌ನ ಮೂವರು ನಾಯಕರೀಗ ಏಕಾಏಕಿ ಬಿಜೆಪಿಯ ತೆಕ್ಕೆಗೆ ಸೇರಿದ್ದಾರೆ. ಅದರಲ್ಲಿ ಪ್ರಮುಖರೆಂದರೆ ಜವಾಹರ್‌ ಚಾವಾx. ಚಾವಾx ಅವರು ಮಾನವ್‌ದಾರ್‌ ಕ್ಷೇತ್ರದಲ್ಲಿ ನಿರಂತರ 5 ಬಾರಿ ಕಾಂಗ್ರೆಸ್‌ಗೆ ಸೀಟು ಗೆಲ್ಲಿಸಿಕೊಟ್ಟವರು! ಈಗ ಕೈ ಸಂಗ ಬಿಟ್ಟುಬಂದ ಜವಾಹರ್‌ ಚಾವಾxರನ್ನು ಬಿಜೆಪಿ ಕ್ಯಾಬಿನೆಟ್‌ ಸಚಿವರನ್ನಾಗಿಸಿದೆ! ಅವರಷ್ಟೇ ಅಲ್ಲದೆ, ಕಾಂಗ್ರೆಸ್‌ನಿಂದ ಬಂದ ಇನ್ನಿಬ್ಬರು ಶಾಸಕರಿಗೂ ಬಿಜೆಪಿ ಸಚಿವ ಸ್ಥಾನ ನೀಡಿದೆ. 

ಬಿಜೆಪಿಗೇ ಮತ್ತೂಮ್ಮೆ ಮೇಲುಗೈ?: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಿಸಿದ ನಂತರ ಭಾರತೀಯ ಜನತಾ ಪಾರ್ಟಿ ಗುಜರಾತ್‌ನಲ್ಲಿ ಎಚ್ಚೆತ್ತುಕೊಂಡಿತು. ಜನರ ಅಸಮಾಧಾನವನ್ನು ಸಾಕಷ್ಟು ತಗ್ಗಿಸಲು 2 ವರ್ಷಗಳಲ್ಲಿ ಅದು ಸಫ‌ಲವಾಗಿದೆ ಎನ್ನಲಾಗುತ್ತದೆ. ಹೀಗಾಗಿ, ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇ ಜಯಭೇರಿ ಬಾರಿಸಲಿದೆ ಎನ್ನುವುದು ಬಹುತೇಕ ಸಮೀಕ್ಷೆಗಳ ಅಭಿಪ್ರಾಯ.

Advertisement

ಸಿಆರ್‌ಪಿಎಫ್ ಯೋಧರನ್ನು ಕೊಂದ ಉಗ್ರ ಮಸೂದ್‌ ಅಜರ್‌ನನ್ನು ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಬಿಡುಗಡೆ ಮಾಡಿದ್ದು  ಇದೇ ಸರ್ಕಾರವೇ ಅಲ್ಲವೆ?
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಪ್ರತಿಯೊಬ್ಬ ಭಾರತೀಯರ ಜೀವವೂ ಪ್ರಮುಖವಾಗಿತ್ತು. ಹೀಗಾಗಿ ಭಾರತೀಯರ ರಕ್ಷಣೆಗಾಗಿ ಉಗ್ರರನ್ನು ಬಿಡುಗಡೆ ಮಾಡುವ ಅನಿವಾರ್ಯ ಸನ್ನಿವೇಶವನ್ನು ಎದುರಿಸಬೇಕಾಯಿತು.
– ಅರುಣ್‌  ಜೇಟ್ಲಿ, ವಿತ್ತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next