Advertisement

ಚುನಾವಣಾಧಿಕಾರಿ ವಿರುದ್ಧ ಜೆಡಿಎಸ್‌ ಗರಂ​​​​​​​

06:20 AM Mar 24, 2018 | |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಕೆಲವೊಂದು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು.

Advertisement

ಮತ ಚಲಾಯಿಸಲು ಬಂದ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಬಾಬೂ ರಾವ್‌ ಚಿಂಚನಸೂರ್‌ ಅವರು ಮತ ಪತ್ರದ ಮೇಲೆ ಇಂಗ್ಲಿಷ್‌ ಅಂಕಿ ಬಳಸುವ ಬದಲು ರೋಮನ್‌ ಅಂಕಿಗಳನ್ನು ಬಳಸಿದ್ದರಿಂದ ಆ ಮತಗಳು ಅಸಿಂಧು ಆಗುತ್ತವೆ ಎಂದು ಚುನಾವಣಾಧಿಕಾರಿ ಎಸ್‌.ಮೂರ್ತಿ ಇಬ್ಬರಿಗೂ ಬದಲಿ ಮತಪತ್ರ ನೀಡಿ ಮತ ಚಲಾಯಿಸಲು ಅವಕಾಶ ಕಲ್ಪಿಸಿದರು. ಇದಕ್ಕೆ ಜೆಡಿಎಸ್‌ ಏಜೆಂಟ್‌ ಆಗಿದ್ದ ರಮೇಶ್‌ಬಾಬು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಚುನಾವಣಾ ಆಯೋಗದ ಅಧಿಕಾರಿಗಳ ಎದುರೇ ಈ ರೀತಿ ಮಾಡಿ ದರೂ ಮೌನ ವಹಿಸಿ ಅಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದರು. ಆ ವೇಳೆಗೆ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಹಾಗೂ ಸಾ.ರಾ. ಮಹೇಶ್‌ ಮಾತ್ರ ಮತ ಚಲಾಯಿಸಿದ್ದರು. ನಂತರ 28 ಶಾಸಕರು ಮತ ಚಲಾಯಿಸಲಿಲ್ಲ.

ಆದರೆ, ಬದಲಿ ಮತಪತ್ರ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಕ್ರಮದ ವಿರುದ್ಧ ಜೆಡಿಎಸ್‌ನ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಚುನಾವಣಾ ಆಯೋಗಕ್ಕೂ ಫ್ಯಾಕ್ಸ್‌ ಮೂಲಕ ದೂರು ನೀಡಿತ್ತು. ಇದರಿಂದ ಮತ ಎಣಿಕೆ ಕಾರ್ಯವೂ ವಿಳಂಬವಾಯಿತು.
ಅಂತಿಮವಾಗಿ ಆಯೋಗ ಎರಡು ಮತ ಬಿಟ್ಟು ಉಳಿದ ಮತ ಎಣಿಕೆಗೆ ಅನುಮತಿ ಕೊಟ್ಟಿದ್ದರಿಂದ ಮತ ಎಣಿಕೆ ಪ್ರಾರಂಭಿಸಲಾಯಿತು.

ರೇವಣ್ಣ ಆಕ್ರೋಶ: ಇದೇ ವೇಳೆ, ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾಗೋಡು ತಿಮ್ಮಪ್ಪ ಹಾಗೂ ಚಿಂಚನಸೂರ್‌ ಅವರಿಗೆ ಎರಡನೇ ಮತಪತ್ರ ಕೊಟ್ಟಿದ್ದನ್ನು ವಿರೋಧಿಸಿ ಮತದಾನ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

Advertisement

ಚುನಾವಣಾಧಿಕಾರಿ ಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಏಜೆಂಟರಂತೆ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ರೇವಣ್ಣ ಅವರ ಹೇಳಿಕೆಗೆ ನೀವು ಬೆದರಿಕೆ ಹಾಕಬೇಡಿ ಎಂದು ಮೂರ್ತಿ ಎದುರುತ್ತರ ನೀಡಿದರು. ಈ ಸಂದರ್ಭದಲ್ಲಿ ಮತ ಕೇಂದ್ರದಲ್ಲಿ ಗೊಂದಲ ಉಂಟಾಗಿ ಸ್ವಲ್ಪ ಹೊತ್ತು ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು.ಚುನಾವಣಾ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್‌, ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿತು.

ಈ ಸಂದರ್ಭದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌,ಜೆಡಿಎಸ್‌ ನೀಡಿದ್ದ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಟ್ಟು ಮತದಾನ ಪ್ರಕ್ರಿಯೆ ಮುಂದುವರೆಸಲು ಅವಕಾಶ ನೀಡಿದ್ದರು.

ಎಸ್‌.ಮೂರ್ತಿ ಬದಲಾವಣೆ
ಬೆಂಗಳೂರು
: ರಾಜ್ಯಸಭೆ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಹಾಗೂ ಬಾಬೂರಾವ್‌ ಚಿಂಚನಸೂರ್‌ ಅವರಿಗೆ ಬದಲಿ ಮತಪತ್ರದಲ್ಲಿ ಮತ ಹಾಕಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಚುನಾವಣಾಧಿಕಾರಿಯಾಗಿದ್ದ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿಯವರನ್ನು ತಕ್ಷಣವೇ ಚುನಾವಣಾ ಕಾರ್ಯದಿಂದ ಬದಲಾಯಿಸುವಂತೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಬದಲಿ ಮತಪತ್ರ ಗೊಂದಲದ ನಂತರ ಜೆಡಿಎಸ್‌ ದೂರಿನ ಮೇರೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮಧ್ಯಾಹ್ನ ಫ್ಯಾಕ್ಸ್‌ ಮೂಲಕ ಆಯೋಗ ಆದೇಶ ಕಳುಹಿಸಿತು. ಅದರಂತೆ ಎಸ್‌.ಮೂರ್ತಿ ಅವರನ್ನು ಚುನಾವಣಾ ಅಧಿಕಾರಿ ಜವಾಬ್ದಾರಿಯಿಂದ ಬದಲಾಯಿಸಿ, ವಿಧಾನಸಭೆ ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ ಅವರಿಗೆ ಚುನಾವಣಾ ಜವಾಬ್ದಾರಿ ನೀಡಲಾಯಿತು.

ಬಂಡಾಯಗಾರರ ಒಗ್ಗಟ್ಟು
ಜೆಡಿಎಸ್‌ನ ಏಳು ಜನ ಬಂಡಾಯ ಶಾಸಕರು ಒಟ್ಟಾಗಿಯೇ ಬಂದು ಮತ ಚಲಾಯಿಸಿದರು. ಮೊದಲು ಜಮೀರ್‌ ಅಹಮದ್‌, ಇಕ್ಬಾಲ್‌ ಅನ್ಸಾರಿ, ರಮೇಶ್‌ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ, ನಂತರ ಬಾಲಕೃಷ್ಣ, ಚಲುವರಾಯಸ್ವಾಮಿ ಮತ ಚಲಾಯಿಸಿದರು.

ರುದ್ರೇಶ್‌ಗೌಡ ಗೈರು: ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ ಬದಲಿ ಮತಪತ್ರ ಕೊಟ್ಟ ಪ್ರಕರಣ ಹಿನ್ನೆಲೆಯಲ್ಲಿ
ಕೆಲಹೊತ್ತು ಸ್ಥಗಿತಗೊಂಡಿತ್ತಾದರೂ ನಂತರ ಪ್ರಾರಂಭಗೊಂಡು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಂಡಿತು. ಅನಾರೋಗ್ಯ ಕಾರಣ ಕಾಂಗ್ರೆಸ್‌ನ ಬೇಲೂರು ಶಾಸಕ ರುದ್ರೇಶ್‌ಗೌಡ ಮತದಾನ ಆಗಿಲ್ಲ. ಬಿಜೆಪಿ ಜೀವರಾಜ್‌ ಮೊದಲು ಮತದಾನ, ಸಚಿವ ಎಚ್‌.ಸಿ. ಮಹದೇವಪ್ಪ ಕೊನೆಯವರಾಗಿ ಮತದಾನ ಮಾಡಿದರು.

ಎಸ್‌ಎಸ್‌ಗೆ ಸಚಿವ ವಿನಯ್‌ ನಮಸ್ಕಾರ
ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಆಗಮಿಸಿದ ಶಾಮನೂರು ಶಿವಶಂಕರಪ್ಪ ಆವರಿಗೆ ಸಚಿವ ವಿನಯ್‌ ಕುಲಕರ್ಣಿ ಕಾಲು ಮುಟ್ಟಿ ನಮಸ್ಕರಿಸಿದರು. ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮುನಿಸಿಕೊಂಡಿದ್ದ ಶಿವಶಂಕರಪ್ಪ ಅವರು ಮತಗಟ್ಟೆಗೆ ಬಂದಾಗ ಅಲ್ಲಿದ್ದ ವಿನಯ್‌ ಕುಲಕರ್ಣಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ನಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಶಾಸಕರ ಬೆಂಬಲ ದೊರೆತಿದೆ. ರಾಜೀವ್‌ ಚಂದ್ರಶೇಖರ್‌ ಗೆಲುವಿಗೆ ಶ್ರಮಿಸಿದ ಶಾಸಕರಿಗೆ ಅಭಿನಂದನೆಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರದಿಂದ ಮೆರೆಯುತ್ತಿದ್ದಾರೆ. ಅವರು ಅಹಂಕಾರ ಬಿಡಲು ಯೋಚಿಸಲಿ.
– ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

ಕಾಗೋಡು ತಿಮ್ಮಪ್ಪ ಹಾಗೂ ಚಿಂಚನಸೂರ್‌ ಮತದಾನಕ್ಕೂ ಮೊದಲೇ ತಪ್ಪು ಸರಿಪಡಿಸಿರುವುದರಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಸೋಲಿನ ಹತಾಸೆಯಿಂದ ಜೆಡಿಎಸ್‌ನವರು ಆರೋಪ ಮಾಡಿದ್ದಾರೆ.
– ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ.

ಸಂಖ್ಯಾಬಲ ಇಲ್ಲದಿದ್ದರೂ ರಾಜಕೀಯಕ್ಕೆ ಹೊಸಬರೂ ಅಮಾಯಕರೂ ಆಗಿರುವ ಫ‌ರೂಕ್‌ ಅವರನ್ನು ಕಣಕ್ಕಿಳಿಸಿ ಅವಮಾನ ಮಾಡಲಾಗಿದೆ. ಹಿಂದೆ ಜೆಡಿಎಸ್‌ಗೆ ಸಂಖ್ಯಾಬಲ ಇದ್ದಾಗ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಬದಲಿಗೆ ರಾಮಸ್ವಾಮಿ,ವಿಜಯಮಲ್ಯ, ಕುಪೇಂದ್ರರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು. ಇದು ಜೆಡಿಎಸ್‌ಗೆ ಅಲ್ಪಸಂಖ್ಯಾತರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.
– ಜಮೀರ್‌ ಅಹಮದ್‌, ಬಂಡಾಯ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next